ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಷ್ಟ್ರಪತಿಯೆದುರು ಪೆರೇಡ್: ಎಲ್ಲ ಬಿಜೆಪಿ ಶಾಸಕರಿಗೆ ಬುಲಾವ್
(Karnataka Crisis | BJP Government | Governor Hansraj Bharadwaj | Yeddyurappa | Arun Jeitley)
ರಾಷ್ಟ್ರಪತಿಯೆದುರು ಪೆರೇಡ್: ಎಲ್ಲ ಬಿಜೆಪಿ ಶಾಸಕರಿಗೆ ಬುಲಾವ್
ನವದೆಹಲಿ, ಸೋಮವಾರ, 16 ಮೇ 2011( 12:39 IST )
ಬಿಜೆಪಿ ಸರಕಾರ ಉರುಳಿಸುವ ಪ್ರಯತ್ನ ವಿಫಲವಾಗಿ, ಎರಡೆರಡು ಬಾರಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಕರ್ನಾಟಕದ ಯಡಿಯೂರಪ್ಪ ಸರಕಾರವನ್ನು ಉರುಳಿಸಲು ಏಳು ತಿಂಗಳ ಬಳಿಕ ಮತ್ತೊಂದು ಪ್ರಯತ್ನ ನಡೆದಿದ್ದು, ಈ ಅಸಾಂವಿಧಾನಿಕ ಕ್ರಮದ ವಿರುದ್ಧ ರಾಷ್ಟ್ರಪತಿಯವರ ಮೊರೆ ಹೋಗಿ, ಎಲ್ಲ ಶಾಸಕರೂ ಅಲ್ಲಿ ಪೆರೇಡ್ ನಡೆಸಲಿದ್ದಾರೆ ಮತ್ತು ಎನ್‌ಡಿಎ ಮುಖಂಡರು ಪ್ರಧಾನಿಯನ್ನು ಭೇಟಿಯಾಗಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಒತ್ತಾಯ ಮಾಡಲಿದೆ ಎಂದು ಬಿಜೆಪಿ ಘೋಷಿಸಿದೆ.
ರಾಜ್ಯಪಾಲರು ಕರ್ನಾಟಕದ ಸರಕಾರ ವಜಾಗೊಳಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ತುರ್ತು ಸಭೆ ಸೇರಿದ ಬಿಜೆಪಿ, ರಾಜ್ಯದ ಎಲ್ಲ ಬಿಜೆಪಿ ಮತ್ತು ಬೆಂಬಲಿಗ ಶಾಸಕರನ್ನೂ ದೆಹಲಿಗೆ ಕರೆಸಲು ನಿರ್ಧರಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ, 11 ಮಂದಿ ಶಾಸಕರೂ ಬಿಜೆಪಿಯವರು ಎಂದು ಸುಪ್ರೀಂ ಕೋರ್ಟು ತೀರ್ಪು ನೀಡಿದೆ. ಈ ಶಾಸಕರು ಕೂಡ ನಾವು ಬಿಜೆಪಿಯಲ್ಲೇ ಇದ್ದೇವೆ, ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದಲ್ಲಿ ಬೆಂಬಲ ಇಟ್ಟಿದ್ದೇವೆ ಎಂಬುದನ್ನು ಬರೆದು ಕೊಟ್ಟಿದ್ದಾರಲ್ಲದೆ, 6 ಅಕ್ಟೋಬರ್ 2010ರಲ್ಲಿ ಕೊಟ್ಟ ಬೆಂಬಲ ಹಿಂತೆಗೆತದ ಪತ್ರವನ್ನೂ ವಾಪಸ್ ಪಡೆದಿದ್ದಾರೆ. ಹೀಗಿರುವಾಗ 121ಕ್ಕೂ ಹೆಚ್ಚು ಶಾಸಕ ಬಲದ ಬೆಂಬಲವಿರುವ ಬಿಜೆಪಿ ಸರಕಾರವನ್ನು ವಜಾಗೊಳಿಸುವ ತೀರ್ಮಾನ ಅಸಾಂವಿಧಾನಿಕ ಎಂದು ಹೇಳಿದರು.
ಅಲ್ಲದೆ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಸಾಂವಿಧಾನಿಕವಾಗಿ ವರ್ತಿಸುತ್ತಿದ್ದಾರೆ. ಬಿಜೆಪಿ ಸರಕಾರಕ್ಕೆ ಕೆಲಸ ಮಾಡಲು ಬಿಡುತ್ತಿಲ್ಲ. ಪದೇ ಪದೇ ಅದನ್ನು ಉರುಳಿಸುವ ಪ್ರಯತ್ನ ನಡೆಯುತ್ತಿದೆ. ಇಂತಹಾ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವುದೇ ಕರ್ನಾಟಕವನ್ನು ಪಕ್ಷಿಸುವ ಏಕೈಕ ಪರಿಹಾರ ಎಂದು ಜೇಟ್ಲಿ ಅಭಿಪ್ರಾಯಪಟ್ಟರಲ್ಲದೆ, ಈ ಕುರಿತು ಎಲ್ಲ ಎನ್‌ಡಿಎ ಮೈತ್ರಿಕೂಟದ ನಾಯಕರು ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿ ಒತ್ತಾಯಿಸುವುದಾಗಿ ಹೇಳಿದರು.