ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಸಾಂವಿಧಾನಿಕ ಕ್ರಮ ಇಲ್ಲ: ಎನ್‌ಡಿಎಗೆ ಪ್ರಧಾನಿ ಭರವಸೆ (Karnataka Crisis | Governor | HR Bharadwaj | BJP Government)
ಪದೇ ಪದೇ ಬಿಜೆಪಿ ಸರಕಾರಕ್ಕೆ ಕಿರುಕುಳ ನೀಡುತ್ತಾ ಕೆಲಸ ಮಾಡಲು ಬಿಡದಿರುವ ರಾಜ್ಯಪಾಲರ ಅಸಾಂವಿಧಾನಿಕ ಕ್ರಮದ ವಿರುದ್ಧ ಮತ್ತು ಅವರ ಶಿಫಾರಸನ್ನು ಅಂಗೀಕರಿಸದಂತೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನಾಯಕರು ಸೋಮವಾರ ಸಂಜೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಯಾವುದೇ ಅಸಾಂವಿಧಾನಿಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಸಿಂಗ್ ಭರವಸೆ ನೀಡಿದ್ದಾರೆ.

ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ನೇತೃತ್ವದಲ್ಲಿ ಪ್ರಧಾನಿ ನಿವಾಸಕ್ಕೆ ಸಂಜೆ ತೆರಳಿದ ನಿಯೋಗದಲ್ಲಿ ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ್ ಕುಮಾರ್, ಶರದ್ ಯಾದವ್ ಮುಂತಾದವರಿದ್ದರು.

ಪ್ರಧಾನಿ ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಎನ್‌ಡಿಎ ಮುಖ್ಯಸ್ಥ ಎಲ್.ಕೆ.ಆಡ್ವಾಣಿ ಅವರು ಪ್ರಧಾನಿ ಭೇಟಿಯ ವಿವರ ನೀಡಿ, ಪ್ರಧಾನಿಯವರು ತಮ್ಮ ಅಹವಾಲುಗಳನ್ನು ಸಾವಧಾನವಾಗಿಯೇ ಆಲಿಸಿದರು ಎಂದರು.

ವರದಿಯಲ್ಲೇನಿದೆ ಎಂಬುದು ನಮಗೂ ಗೊತ್ತಿಲ್ಲ...
ರಾಜ್ಯಪಾಲರು ಸಲ್ಲಿಸಿದ ವರದಿಯಲ್ಲಿ ಏನಿದೆ ಎಂದು ನಮಗೂ ಗೊತ್ತಿಲ್ಲ. ಆದರೆ ಮಾಧ್ಯಮ ವರದಿಗಳಿಂದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ತಮ್ಮ ಹಳೆಯ ಚಾಳಿಯನ್ನು ಮರು ಆರಂಭಿಸಿದ್ದಾರೆ ಎಂಬುದು ತಿಳಿಯುತ್ತದೆ. ಅಧಿವೇಶನ ಕರೆಯಲು ಕೇಳಿದರೂ, ಕಾರಣವಿಲ್ಲದೆ, ವಿಧಾನಸಭೆ ಅಧಿವೇಶನಕ್ಕೆ ಅವಕಾಶ ನೀಡುತ್ತಿಲ್ಲ. ಅಧಿವೇಶನ ಕರೆಯುವುದು ರಾಜ್ಯಪಾಲರ ಸಾಮಾನ್ಯ ಕರ್ತವ್ಯವಾಗಿದೆ. ಅವರು ಅದನ್ನು ನಿರಾಕರಿಸಲಾಗದು. ಬೇಕಿದ್ದರೆ, ಮೊದಲು ವಿಶ್ವಾಸಮತ ಸಾಬೀತುಪಡಿಸಿ, ನಂತರ ಬೇರೆ ಯಾವುದೇ ಕಲಾಪ ನಡೆಸಿ ಅಂತ ಕೇಳಬಹುದಿತ್ತು ಎಂದು ಆಡ್ವಾಣಿ ಹೇಳಿದರು.

ಶಾಸಕರ ಅನರ್ಹತೆ ರದ್ದುಪಡಿಸಿದ ಸುಪ್ರೀಂ ಕೋರ್ಟು ನಿರ್ಧಾರವು ನಮಗೆ ಪರೋಕ್ಷ ವರವಾಗಿದೆ. ವಿಧಾನಸಭೆಯಲ್ಲಿ 110 ಇದ್ದ ನಮ್ಮ ಬಲವು 121ಕ್ಕೆ ಏರಿದೆ ಎಂದ ಆಡ್ವಾಣಿ, ಪದೇ ಪದೇ ರಾಜ್ಯಪಾಲರು ಸಂವಿಧಾನದ ವಿರುದ್ಧವೇ ಕಾರ್ಯಾಚರಣೆ ಮಾಡುತ್ತಿದ್ದಾರೆ, ಅದರಲ್ಲಿ ಇದು ಹೊಚ್ಚ ಹೊಸದು. ನಾನು ಅಧಿವೇಶನ ಕರೆಯುವುದಿಲ್ಲ ಎನ್ನುತ್ತಾರೆ ಎಂದರು.

3 ವರ್ಷದಿಂದ ಮುಂದುವರಿದ ಚಾಳಿ...ತಕ್ಷಣವೇ ವಾಪಸ್ ಕರೆಸಿ...
ಸರಕಾರ ವಜಾಗೊಳಿಸುವ ಬಗೆಗೆ ರಾಜ್ಯಪಾಲರು ತಮ್ಮ ವರದಿಯಲ್ಲಿ ಏನಾದರೂ ಶಿಫಾರಸು ಮಾಡಿದ್ದರೆ, ಅದನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿ ಎಂದು ಆಗ್ರಹಿಸಿದ್ದೇವೆ ಮತ್ತು ಎರಡನೇ ಆಗ್ರಹವಾಗಿ, ಮೂರು ವರ್ಷಗಳಿಂದ ತಮ್ಮ ಸ್ವಭಾವವೋ ಎಂಬಂತೆ ನಿಷ್ಪಕ್ಷಪಾತತನದಿಂದ ಕರ್ತವ್ಯ ನಿಭಾಯಿಸದಿರುವ, ಪ್ರತಿಯೊಂದು ಮಾತಿನಲ್ಲೂ, ಕ್ರಿಯೆಯಲ್ಲೂ ಅದನ್ನು ತೋರ್ಪಡಿಸುತ್ತಲೇ ಇರುವ ಅವರನ್ನು ತಕ್ಷಣವೇ ವಾಪಸ್ ಕರೆಸುವ ಪ್ರಕ್ರಿಯೆ ಆರಂಭವಾಗಬೇಕು ಎಂದೂ ಆಗ್ರಹಿಸಿದ್ದೇವೆ ಎಂದ ಆಡ್ವಾಣಿ, ಇದರಿಂದ ನಮಗೂ ಸಂತೋಷವಾಗುತ್ತದೆ, ನಿಮಗೂ ನೆಮ್ಮದಿ ಮತ್ತು ರಾಜ್ಯಪಾಲರಿಗೂ ನೆಮ್ಮದಿ ಎಂದು ಪ್ರಧಾನಿಗೆ ಮನವರಿಕೆ ಮಾಡಿರುವುದಾಗಿ ಹೇಳಿದರು.

ಅಂತೆಯೇ, ರಾಜ್ಯಪಾಲರನ್ನು ಇದೇ ರೀತಿ ಮುಂದುವರಿಯಲು ಬಿಟ್ಟರೆ ಇದು ಅನವಶ್ಯಕವಾಗಿ ಅದು ಕೇಂದ್ರದ ಮೇಲೆಯೇ ಶಂಕೆ ಮೂಡಲು ಕಾರಣವಾಗುತ್ತದೆ ಎಂದೂ ನಾವು ಪ್ರಧಾನಿಗೆ ತಿಳಿಸಿರುವುದಾಗಿಯೂ ಆಡ್ವಾಣಿ ಹೇಳಿದರು.

ವರದಿ ನೋಡಿಲ್ಲ ಎಂದ ಪ್ರಧಾನಿ...
ಎನ್‌ಡಿಎ ಮನವಿಗೆ ಸ್ಪಂದಿಸಿದ ಪ್ರಧಾನಿ ಮನಮೋಹನ್ ಸಿಂಗ್, ತಾನಿನ್ನೂ ವರದಿ ನೋಡಿಲ್ಲ ಎಂದರಲ್ಲದೆ, ಆದರೆ ಯಾವುದೇ ಅಸಾಂವಿಧಾನಿಕ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದರು.

ನಾಳೆ ಸಂಜೆ ರಾಷ್ಟ್ರಪತಿಯ ಭೇಟಿ...
ಅದೇ ರೀತಿ, ಮಂಗಳವಾರ ಸಂಜೆ ಕರ್ನಾಟಕದ ಎಲ್ಲ ಬಿಜೆಪಿ ಶಾಸಕರು, ಸಂಸದರ ನಿಯೋಗವು ರಾಷ್ಟ್ರಪತಿ ಪ್ರತಿಭಾ ಸಿಂಗ್ ದೇವಿ ಪಾಟೀಲ್ ಅವರನ್ನು ಭೇಟಿಯಾಗಿ, ರಾಜ್ಯಪಾಲರ ವಿರುದ್ಧ ದೂರು ನೀಡುತ್ತೇವೆ ಮತ್ತು ತಮ್ಮ ಸಂಖ್ಯಾ ಬಲವನ್ನು ಪ್ರದರ್ಶಿಸುತ್ತೇವೆ ಎಂದೂ ಆಡ್ವಾಣಿ ಹೇಳಿದರು.
ಇವನ್ನೂ ಓದಿ