ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯ ಸರಕಾರವೇ 'ಅಕ್ರಮ': ಕಾಂಗ್ರೆಸ್‌ನ ಮನೀಷ್ ತಿವಾರಿ (Karnataka Crisis | Congress | BJP Government | Manish Tiwari)
ರಾಜ್ಯ ಸರಕಾರವೇ 'ಅಕ್ರಮ': ಕಾಂಗ್ರೆಸ್‌ನ ಮನೀಷ್ ತಿವಾರಿ
ನವದೆಹಲಿ, ಮಂಗಳವಾರ, 17 ಮೇ 2011( 09:29 IST )
ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಕುರಿತು ರಾಜ್ಯಪಾಲರು ಕಳುಹಿಸಿದ ಶಿಫಾರಸು ಸರಿಯೇ ತಪ್ಪೇ ಎಂಬ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲೇ, ಬಿಜೆಪಿಯು ಕರ್ನಾಟಕದಲ್ಲಿ 'ಅಕ್ರಮ' ಸರಕಾರ ನಡೆಸುತ್ತಿದೆ. ಅದು ತಂತ್ರಗಾರಿಕೆಯಿಂದಲೇ ಸರಕಾರ ಚಲಾಯಿಸುತ್ತಿದೆ ಎಂದು ಕಾಂಗ್ರೆಸ್ ತಿರುಗಿಬಿದ್ದಿದೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಿದ ಕೇಂದ್ರೀಯ ವಕ್ತಾರ ಮನೀಷ್ ತಿವಾರಿ, ಬಿಜೆಪಿಯು 'ತಯಾರು ಮಾಡಿದ ಬಹುಮತ'ದ ಮೂಲಕ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.
ಕರ್ನಾಟಕ ಸ್ಪೀಕರ್ ಬೋಪಯ್ಯ ಅವರು ಕಳೆದ ವರ್ಷದ ವಿದ್ಯಮಾನದಲ್ಲಿ ಶಾಸಕರನ್ನು ಅನರ್ಹಗೊಳಿಸಲು ಮಾಡಿದ ತರಾತುರಿಯ ನಿರ್ಧಾರವನ್ನು ತಿವಾರಿ ಪ್ರಶ್ನಿಸಿದರಾದರೂ, ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ನಿರ್ಧಾರದ ಕುರಿತು ಕೇಳಿದಾಗ, ಅದು ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಆದರೆ, ನಿಮ್ಮದೇ ರಾಜ್ಯ ಘಟಕವು ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸುತ್ತಿದೆಯಲ್ಲಾ ಎಂದು ಕೇಳಿದಾಗ, 'ನಮ್ಮ ವ್ಯವಸ್ಥೆಯಲ್ಲಿ, ರಾಜ್ಯ ಘಟಕಗಳಿಗೆ ಅವುಗಳ ಅಭಿಪ್ರಾಯ ಹೊರಗೆಡಹಲು, ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಇದೆ' ಎಂದಷ್ಟೇ ಉತ್ತರಿಸಿದರು.