ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಗೆ ಕೊಟ್ಟ 'ಮೋಸ್ಟ್ ವಾಂಟೆಡ್ ಪಟ್ಟಿಯ ಉಗ್ರ' ಥಾಣೆಯಲ್ಲಿ! (Pakistans Most Wanted 50 | India | Wazhul Khan | Mumbai Blast)
ಮುಂಬೈ ದಾಳಿಯ ರೂವಾರಿಗಳನ್ನು ಪಾಕಿಸ್ತಾನದಿಂದ ಕರೆತರಲು ಅಥವಾ ಪಾಕ್ ಸರಕಾರವು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮಾಡಲು ವಿಫಲವಾಗಿರುವ ಕೇಂದ್ರದ ಯುಪಿಎ ಸರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮುಜುಗರದಲ್ಲಿ ಸಿಲುಕಿದೆ. ನಮ್ಮ ದೇಶದ 50 ಮೋಸ್ಟ್ ವಾಂಟೆಡ್ ಎಂಬುದಾಗಿ ಪಾಕಿಸ್ತಾನಕ್ಕೆ ಕೊಟ್ಟ ಪಟ್ಟಿಯಲ್ಲಿ ಹೆಸರಿದ್ದವನೊಬ್ಬ, ಮಹಾರಾಷ್ಟ್ರದ ಥಾಣೆಯಲ್ಲೇ ಇರುವ ಅಂಶವು ಪತ್ತೆಯಾಗಿದ್ದು, ಭಾರತ ಈಗ ಪಟ್ಟಿ ತಯಾರಿಸಿರುವ ಕುರಿತು ತನಿಖೆಗೆ ಆದೇಶಿಸಬೇಕಾಗಿ ಬಂದಿದೆ.

2003ರ ಮುಲುಂಡ್ (ಮುಂಬೈಯ ಒಂದು ಉಪನಗರ) ರೈಲು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಾಜುಲ್ ಕುಮಾರ್ ಖಾನ್ ಎಂಬಾತನನ್ನು ಬಂಧಿಸಲಾಗಿತ್ತು. ಮತ್ತು ಆತ ಜಾಮೀನಿನಲ್ಲಿ ಬಿಡುಗಡೆಯಾಗಿ ಈಗಲೂ ಥಾಣೆಯ ವಾಗ್ಲೆ ಎಸ್ಟೇಟ್‌ನಲ್ಲಿ ತನ್ನ ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾನೆ.

ಈ ಕುರಿತು ವಿಚಾರಣೆ ನಡೆಸುತ್ತಿರುವುದಾಗಿ ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್.ಪಾಟೀಲ್ ಹೇಳಿದ್ದಾರೆ. ಕ್ರೈಂ ಬ್ರಾಂಚ್ ಮತ್ತು ಎಟಿಎಸ್ ಅಧಿಕಾರಿಗಳು ಎಸಗಿದ ಲೋಪದಿಂದಾಗಿ ಈತನ ಹೆಸರು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿ ಹೋಗಿದ್ದು, ಭಾರತವು ಕಾಟಾಚಾರಕ್ಕೆ ಪಟ್ಟಿ ಸಲ್ಲಿಸಿದೆ ಅಥವಾ ಸುಳ್ಳು ಸುಳ್ಳೇ ಹೆಸರು ನೀಡಿದೆ ಎಂದೆಲ್ಲಾ ಪಾಕಿಸ್ತಾನವು ರಾಗ ಎಳೆಯಲು ಅವಕಾಶ ಮಾಡಿಕೊಟ್ಟಂತಾಗಿದೆ.

ಖಾನ್ 2002ರ ಮುಂಬೈ ಸೆಂಟ್ರಲ್ ಸ್ಟೇಶನ್ ಸ್ಫೋಟ, ವಿಲೇ ಪಾರ್ಲೆ ಮತ್ತು ಘಾಟ್ಕೊಪರ್ ಸ್ಫೋಟ ಪ್ರಕರಮಗಳಲ್ಲಿಯೂ ಆರೋಪಿಯಾಗಿದ್ದಾನೆ. ಈ ಮೂರು ಪ್ರಕರಣಗಳನ್ನು ಐಕ್ಯಗೊಳಿಸಲಾಗಿದ್ದು, ಅದರ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.

2003ರ ಮಾರ್ಚ್ 13ರಂದು ಮುಲುಂಡ್ ರೈಲು ನಿಲ್ದಾಣದಲ್ಲಿ ರೈಲಿನ ಮಹಿಳಾ ಬೋಗಿಯಲ್ಲಿ ಸ್ಫೋಟ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದೇ ವರ್ಷ ಜನವರಿಯಲ್ಲಿ ವಿಲೇ ಪಾರ್ಲೆ ಸ್ಟೇಶನ್‌ನಲ್ಲಿ ನಡೆದ ರೈಲು ಸ್ಫೋಟದಲ್ಲಿ ಒಬ್ಬರು ಮೃತಪಟ್ಟು 25 ಮಂದಿ ಗಾಯಗೊಂಡಿದ್ದರು, ಬಳಿಕ 2003ರ ಜುಲೈ ತಿಂಗಳಲ್ಲಿ ಘಾಟ್ಕೊಪರ್‌ನಲ್ಲಿ ಬಸ್ಸಿನಲ್ಲಿ ಸ್ಫೋಟ ಸಂಭವಿಸಿ ನಾಲ್ಕು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಅದಕ್ಕೆ ಮೊದಲು 2002ರ ಡಿಸೆಂಬರ್‌ನಲ್ಲಿ ಮುಂಬೈ ಸೆಂಟ್ರಲ್ ಸ್ಟೇಶನ್‌ನಲ್ಲಿ ಬಾಂಬ್ ಸ್ಫೋಟಗೊಂಡು 25 ಮಂದಿ ಗಾಯಗೊಂಡಿದ್ದರು.

ಈ ಸ್ಥಳಗಳಿಗೆ ಬಾಂಬ್ ಸಾಗಾಟ ಮಾಡಿ, ಈ ಕುತಂತ್ರವನ್ನು ಅನುಷ್ಠಾನಗೊಳಿಸಿದ ಆರೋಪ ಖಾನ್ ಮೇಲಿತ್ತು. ಕಳೆದ ಬುಧವಾರ ಭಾರತವು ಪಾಕಿಸ್ತಾನಕ್ಕೆ ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಝಕೀ ಉರ್ ರಹಮಾನ್ ಮುಂತಾದವರ ಸಹಿತ 50 ಮಂದಿ ಪಾಕಿಸ್ತಾನದಲ್ಲಿದ್ದು, ಅವರನ್ನು ಒಪ್ಪಿಸಿ ಎಂಬ ಒಕ್ಕಣೆಯುಳ್ಳ ಪಟ್ಟಿಯನ್ನು ಪಾಕ್ ಸರಕಾರಕ್ಕೆ ಹಸ್ತಾಂತರಿಸಿತ್ತು.

ಇದರಿಂದ ಈಗ ಮುಜುಗರ ಅನುಭವಿಸಿರುವ ಭಾರತ ಸರಕಾರವು ತನಿಖೆಗೆ ಆದೇಶಿಸಿದೆ. ಕೆಲವು ಹಂತದಲ್ಲಿ 'ಕಟ್ ಎಂಡ್ ಪೇಸ್ಟ್' ಕೆಲಸ ಮಾಡುವ ಪ್ರಯತ್ನ ನಡೆದಿರಬಹುದು ಎಂದು ಮೂಲಗಳು ಹೇಳಿವೆ. ಈ ಪಟ್ಟಿ ನಾನಲ್ಲ ತಯಾರಿಸಿದ್ದು, ಒಂದು ತಿಂಗಳ ಹಿಂದೆಯೇ ತಯಾರಿಸಲಾಗಿತ್ತು ಎಂದಿದ್ದಾರೆ.

ಒಟ್ಟಿನಲ್ಲಿ ಭಾರತದೊಳಗೇ ಜಾಮೀನಿನಲ್ಲಿ ಬಿಡುಗಡೆಯಾಗಿರುವ ವ್ಯಕ್ತಿಯೊಬ್ಬ 'ಮೋಸ್ಟ್ ವಾಂಟೆಡ್ ಉಗ್ರಗಾಮಿ' ಎಂಬ ಪಟ್ಟಿಯಲ್ಲಿ ಸೇರಿಕೊಂಡು, ಪಾಕಿಸ್ತಾನದಲ್ಲಿಯೂ ಸದ್ದು ಮಾಡಿದ್ದಾನೆ. ಪಟ್ಟಿಯಲ್ಲಿ ಆತನದು 41ನೇ ಹೆಸರು.
ಇವನ್ನೂ ಓದಿ