ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯಪಾಲರು ಕಾಂಗ್ರೆಸ್‌ ಸೇರಲಿ: ಬಿಜೆಪಿ ವ್ಯಂಗ್ಯ (Karnataka Governor | H R Bhardwaj | B S Yeddyurappa | BJP)
ಕರ್ನಾಟಕದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಮರ್ಥಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷವು ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಅವರನ್ನು ಕೂಡಲೇ ಪಾಪಸ್‌ ಕರೆಸಿಕೊಂಡು ಅವರನ್ನು ಎಐಸಿಸಿಗೆ ಸೇರಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದೆ.

ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಎದುರು ಪೆರೇಡ್‌ ನಡೆಸಲು ಆಗಮಿಸಿರುವ 114 ಬಿಜೆಪಿ ಶಾಸಕರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ಗಡ್ಕರಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಸಲ್ಲಿಸಿರುವ ಶಿಫಾರಸಿನ ವಿರುದ್ಧ ನಡೆಯುವ ಕದನದಲ್ಲಿ ಬಿಜೆಪಿ ಶೇ.101ರಷ್ಟು ಗೆಲುವು ಸಾಧಿಸಲಿದೆ ಎಂದು ಹೇಳಿದರು.

'ಜನಪ್ರಿಯವಾಗಿರುವ ನಮ್ಮ ಸರಕಾರಕ್ಕೆ ಬಹುಮತವಿದೆ, ನಾವು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋಗುತ್ತಿದ್ದು, ನಮಗೆ ಗೆಲುವು ಖಚಿತ' ಎಂದು ಹೇಳಿದ ಗಡ್ಕರಿ, ಕೃಷಿ ಬಜೆಟ್‌ ಮಂಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯೂ ಕರ್ನಾಟಕಕ್ಕಿದೆ ಎಂದರು.
ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಅವರೇ ಕಾರಣ ಎಂದು ಶ್ಲಾಘಿಸಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಮಾತನಾಡಿ, ರಾಜ್ಯ ಸರಕಾರಕ್ಕೆ ಇನ್ನೂ ಐವರು ಶಾಸಕರು ಬೆಂಬಲ ಪತ್ರ ನೀಡಿದ್ದಾರೆ, ಅದರಲ್ಲಿ ಒಬ್ಬರು ವಿದೇಶ ಪ್ರಯಾಣದಲ್ಲಿದ್ದಾರೆ, ಇನ್ನೊಬ್ಬರು ಹೃದಯ ಶಸ್ತ್ರಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.

ವಿಧಾನ ಸಭೆ ವಿಶೇಷ ಅಧಿವೇಶನಕ್ಕೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯಪಾಲರು ಅಸಾಂವಿಧಾನಿಕ ಹಾಗೂ ಪ್ರಜಾತಂತ್ರ ವಿರೋಧಿಯಾಗಿ ವರ್ತಿಸಿದ್ದಾರೆ ಎಂದು ಗಡ್ಕರಿ ಆಪಾದಿಸಿದರು.

ಸೋನಿಯಾ ರಾಜ್ಯಪಾಲರನ್ನು ಎಐಸಿಸಿಗೆ ಸೇರಿಸಿಕೊಳ್ಳಲಿ
'ರಾಜ್ಯಪಾಲರು ಅತ್ಯಂತ ಅನುಭವಿ ರಾಜಕಾರಣಿ, ಅವರ ಸೇವೆಯಿಂದ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಭರ್ಜರಿ ಲಾಭವಾಗಲಿದೆ, ಅವರನ್ನು ಆಕೆ ಎಐಸಿಸಿ ವಿಶೇಷ ಆಹ್ವಾನಿತರನ್ನಾಗಿ ನೇಮಿಸಬೇಕು. ಅವರನ್ನು ಕೇಂದ್ರಕ್ಕೆ ಆಹ್ವಾನಿಸಿದರೆ ಮತ್ತಷ್ಟು ಒಳಿತಾಗುತ್ತದೆ. ಅವರು ಪಕ್ಷದ ರಾಜಕೀಯದ ಬಗ್ಗೆ ಒಲವು ಹೊಂದಿದ್ದಾರೆ' ಎಂದು ಗಡ್ಕರಿ ವ್ಯಂಗ್ಯವಾಡಿದರು.

ಭಾರದ್ವಾಜ್‌ ಅವರಿಗೆ ಕೇಂದ್ರ ಸರಕಾರದ ಕೆಲವು ಸಚಿವರು ಹಾಗೂ ಕಾಂಗ್ರೆಸ್‌ ಮುಖಂಡರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.

'ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಈ ಪಕ್ಷವನ್ನು ಇನ್ನು ಮುಂದೆ ಸೋಲಿಸಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ ಮುಖಂಡರು ಹಾಗೂ ಕೇಂದ್ರ ಸಚಿವರಿಗೆ ಮನವರಿಕೆಯಾಗಿದೆ. ಉಪ ಚುನಾವಣೆಯಲ್ಲಿ ನಾವು ಜಯ ಗಳಿಸಿದ ನಂತರ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ' ಎಂದು ಗಡ್ಕರಿ ಆಪಾದಿಸಿದರು.

ಬೊಮ್ಮಾಯಿ ಸರಕಾರದ ಕುರಿತು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಕುರಿತು ಪ್ರಸ್ತಾಪಿಸಿದ ಗಡ್ಕರಿ, ಸರಕಾರದ ಬಹುಮತ ಸದನದಲ್ಲಿ
ಪಸ್ತಾಪವಾಗಬೇಕೇ ಹೊರತು ರಾಜ್ಯಪಾಲರ ಮನೆಯಲ್ಲಲ್ಲ ಎಂದು ಹೇಳಿದರು.
ಇವನ್ನೂ ಓದಿ