ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇದು ಯಡಿಯೂರಪ್ಪ ಉರುಳಿಸುವ ಗೌಡ - ಕಾಂಗ್ರೆಸ್ ತಂತ್ರವೇ?
(Karnataka Crisis | Devegowda | Kumaraswamy | Karnataka BJP | JDS)
ಇದು ಯಡಿಯೂರಪ್ಪ ಉರುಳಿಸುವ ಗೌಡ - ಕಾಂಗ್ರೆಸ್ ತಂತ್ರವೇ?
ನವದೆಹಲಿ, ಬುಧವಾರ, 18 ಮೇ 2011( 12:31 IST )
ಬಿಜೆಪಿ ಸರಕಾರವನ್ನು ಉರುಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ರೂಪಿಸಿದ ಸಂಚು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಆಪಾದನೆಗಳು ನಿಜವೆಂಬಂತೆ ಕಾಣಿಸುತ್ತಿವೆ. ದಕ್ಷಿಣ ಭಾರತದ ಮೊತ್ತ ಮೊದಲ ಬಿಜೆಪಿ ಸರಕಾರವನ್ನು ಉರುಳಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರದ ಕಾಂಗ್ರೆಸ್ ಮುಖಂಡರ ಜೊತೆ ಸೇರಿಕೊಂಡು ಸಂಚು ರೂಪಿಸಿದ್ದಾರೆ ಎಂಬ ವದಂತಿಗಳಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡಿದೆ.
ಉನ್ನತ ಮೂಲಗಳ ಪ್ರಕಾರ, ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡಿದ್ದ, ತಂತ್ರಗಾರಿಕೆಯಲ್ಲಿ ನಿಪುಣರಾದ ದೇವೇಗೌಡರು, 16 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟು ರದ್ದುಗೊಳಿಸಿದರೆ, ಮುಖ್ಯಮಂತ್ರಿಯನ್ನು ಉರುಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ಸಹಾಯ ಹಸ್ತ ಚಾಚಿದ್ದರು.
ಆದರೆ, ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರ ಶಿಫಾರಸನ್ನು ಅಂಗೀಕರಿಸಲು ಕಾಂಗ್ರೆಸ್ ನಾಯಕರು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದು ಗೌಡರಿಗೆ ಮತ್ತೊಂದು ಬಾರಿ ಹಿನ್ನಡೆಯಾಗಿದ್ದು, ಆತಂಕದಲ್ಲಿ ಸಿಲುಕಿಸಿದೆ. ಆದರೂ ಕೇಂದ್ರವು ಶುಕ್ರವಾರದೊಳಗೆ ಏನಾದರೂ ನಿರ್ಧಾರ ಕೈಗೊಳ್ಳುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಎಂದಿವೆ ಮೂಲಗಳು.
ಯಾವಾಗಲೂ ತಮ್ಮ ಕಾರ್ಯತಂತ್ರವನ್ನು ಬಹಿರಂಗಪಡಿಸದೆ, ಕೊನೆ ಕ್ಷಣದಲ್ಲಿ ದಾಳ ಉರುಳಿಸುವ ಕೆಲಸ ಮಾಡುವ ದೇವೇಗೌಡರು, ಸುಪ್ರೀಂ ಕೋರ್ಟಿಗೆ ಹಲವು ದಿನಗಳ ಮುನ್ನವೇ ಕಾಂಗ್ರೆಸ್ ಹೈಕಮಾಂಡ್‌ಗೆ ಸಂದೇಶವಾಹಕರ ಮೂಲಕ ಸ್ಕೆಚ್ ರೂಪಿಸಿದ್ದರು ಎನ್ನಲಾಗಿದೆ. ಸುಪ್ರೀಂ ಕೋರ್ಟು ತೀರ್ಪು ನೀಡಿದಾಗ ಗೌಡರಿಗೆ ಸಂತಸವಾಗಿದ್ದು, ಕಾಂಗ್ರೆಸ್-ಗೌಡರ ನಡುವಿನ ಮಾತುಕತೆ ಜೋರಾಗಿಯೇ ನಡೆದಿತ್ತು ಎನ್ನಲಾಗುತ್ತಿದೆ. ಕಾಂಗ್ರೆಸ್‌ನ ಟ್ರಬಲ್ ಶೂಟರ್ ಪಾತ್ರವನ್ನು ಆಗಾಗ್ಗೆ ನಿರ್ವಹಿಸುತ್ತಿರುವ ಹಿರಿಯ ಕೇಂದ್ರ ಸಚಿವರೊಬ್ಬರು ತಕ್ಷಣವೇ ಗೌಡರನ್ನು ಸಂಪರ್ಕಿಸಿ, ಯುಪಿಎ ಮತ್ತು ಗೌಡರ ನಡುವಿನ ಮಾತುಕತೆಗೆ ದಾರಿ ಮಾಡಿಕೊಟ್ಟಿದ್ದರು ಎಂದಿವೆ ಮೂಲಗಳು. ಆದರೆ ಮರಳಿ 'ಅರ್ಹ'ಗೊಂಡ ಬಿಜೆಪಿಯ ಭಿನ್ನಮತೀಯ ಶಾಸಕರು ಮರಳಿ ಯಡಿಯೂರಪ್ಪ ಅವರಿಗೇ ಬೆಂಬಲಿಸಿರುವುದು ಅನಿರೀಕ್ಷಿತ ಆಘಾತಕ್ಕೆ ಕಾರಣವಾಗಿತ್ತು.
ಆದರೆ, ರಾಜ್ಯಸಭೆಯಲ್ಲಿ ಸಾಕಷ್ಟು ಸಂಖ್ಯಾಬಲ ಇಲ್ಲದಿರುವುದರಿಂದಾಗಿ ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿ ಆಳ್ವಿಕೆಯ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಆದರೂ, ಮೇಲ್ಮನೆಯಲ್ಲಿ 'ಜಾತ್ಯತೀತ'ರ ಮನವೊಲಿಸಿ, ಸಂಖ್ಯಾಬಲ ಒದಗಿಸಿಕೊಡುವುದಾಗಿ ಗೌಡರು ಭರವಸೆ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಆದರೂ, ಗೌಡರಿಗೆ ಸೋಮವಾರ ನಿರಾಶೆಯೇ ಕಾದಿತ್ತು. ರಾಷ್ಟ್ರಪತಿ ಆಳ್ವಿಕೆ ಕುರಿತು ಕೇಂದ್ರ ಸಂಪುಟವು ಯಾವುದೇ ನಿರ್ಧಾರ ಕೈಗೊಳ್ಳಲು ವಿಫಲವಾಗಿತ್ತು. ಇದೇ ಕಾರಣಕ್ಕೆ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನೂ ಗೌಡರು ರದ್ದುಪಡಿಸಿದ್ದರು ಎಂದು ಹೇಳಿವೆ ಮೂಲಗಳು.
ಆದರೂ ಪಟ್ಟು ಬಿಡದ ದೇವೇಗೌಡರು, ಗಲಿಬಿಲಿಗೊಂಡೇ ಮಂಗಳವಾರ ರಾಜ್ಯಪಾಲರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ನೆಪದಲ್ಲಿ ರಾಜಭವನಕ್ಕೆ ಧಾವಿಸಿ ಸುಮಾರು ಒಂದೂವರೆ ಗಂಟೆ ಮಾತುಕತೆ ನಡೆಸಿದ್ದರು. ಇದೇ ಹೊತ್ತಿಗೆ ಕಾಂಗ್ರೆಸ್ ನಾಯಕ, ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಕೂಡ ರಾಜಭವನದೊಳಗೆ ಪ್ರವೇಶಿಸಿದ್ದರು. ಜೆಡಿಎಸ್-ಕಾಂಗ್ರೆಸ್ ನಾಯಕರಿಬ್ಬರು ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ್ದರು. ಇಬ್ಬರೂ ಕೂಡ ತಾನು ಶುಭಾಶಯ ಕೋರಲಷ್ಟೇ ಹೋಗಿದ್ದೆ ಎಂದರು. ಮಾಜಿ ಪ್ರಧಾನಿಯಾಗಿ ರಾಜಕೀಯ ಮಾತನಾಡುವಷ್ಟು ಮೂರ್ಖ ನಾನಲ್ಲ ಎಂದರು ಗೌಡರು. ಆದರೂ ಕೂಡ ಊಹಾಪೋಹಗಳು ಹಾಗೆಯೇ ಉಳಿದುಬಿಟ್ಟವು. ನಂತರ, ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತು ಸ್ಪೀಕರ್ ಬೋಪಯ್ಯ ರಾಜೀನಾಮೆ ನೀಡಬೇಕು ಎಂದು ಗೌಡರು ಒತ್ತಾಯಿಸಿದರು.
ತಮಗೆ ಎಲ್ಲ ಚುನಾವಣೆಗಳಲ್ಲಿ ಹೀನಾಯ ಸೋಲುಣಿಸಿದ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಜೆಡಿಎಸ್ ಏಕೈಕ ಗುರಿ. ಜೆಡಿಎಸ್ ರಾಜ್ಯಾಧ್ಯಕ್ಷ, ಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರ ಸ್ವಜನ ಪಕ್ಷಪಾತ ಕುರಿತು ಪುಟಗಟ್ಟಲೆ ಆರೋಪಗಳನ್ನು ಮಾಡಿದರಾದರೂ, ಅವರು ತಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ವಿಫಲರಾಗಿದ್ದರು. ಯಾಕೆಂದರೆ, ಕರ್ನಾಟಕ ಹೈಕೋರ್ಟು ಕೂಡ ಯಡಿಯೂರಪ್ಪ ವಿರುದ್ಧದ ಆರೋಪಗಳ ತನಿಖೆಗೆ ತಡೆಯಾಜ್ಞೆ ವಿಧಿಸಿತ್ತು. ತಾವೇ ಖುದ್ದಾಗಿ ಬೆಂಬಲ ನೀಡಿದ್ದ 16 ಶಾಸಕರಲ್ಲಿ, 10 ಮಂದಿ ಕೂಡ ಈಗ ಬಿಜೆಪಿ ಪಾಳಯಕ್ಕೆ ಮರಳಿದಾಗ ಅಪ್ಪ-ಮಕ್ಕಳಿಬ್ಬರೂ ಆಘಾತಗೊಂಡರು.
ಇದೀಗ ಸುಪ್ರೀಂ ಕೋರ್ಟಿನ ತೀರ್ಪನ್ನೇ ಹಿಡಿದುಕೊಂಡು ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಗೌಡರು ಇನ್ನೂ ಪ್ರಯತ್ನಗಳನ್ನು ಬಿಟ್ಟಿಲ್ಲ ಎಂದಿವೆ ಅವರ ಆಪ್ತ ಮೂಲಗಳು. ಏನಾಗುತ್ತದೋ ಕಾದು ನೋಡಬೇಕು.