ದಲಿತ ಯುವತಿಯೊಬ್ಬಳನ್ನು ಅಪಹರಿಸಿ ಹತ್ಯೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ, ಬಿಎಸ್‌ಪಿ ಹಾಲಿ ಶಾಸಕ ಆನಂದ ಸೇನ್ ಹಾಗೂ ಅವರ ಸಹಚರರಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಕಾನೂನು ವಿದ್ಯಾರ್ಥಿಯಾಗಿದ್ದ 24 ವರ್ಷದ ದಲಿತ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ಸೇನ್ 2007ರಲ್ಲಿ ಆಕೆಯನ್ನು ಹತ್ಯೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು.
ಮಿಲ್ಕಿಪುರ ಶಾಸಕರಾಗಿರುವ ಸೇನ್ ಜೀವಾವಧಿ ಶಿಕ್ಷೆಗೊಳಗಾಗುತ್ತಿರುವ ಎರಡನೇ ಬಿಎಸ್‌ಪಿ ಶಾಸಕರಾಗಿದ್ದಾರೆ. ಔರಯ್ಯಾ ಕ್ಷೇತ್ರದ ಬಿಎಸ್‌ಪಿ ಶಾಸಕ ಶೇಖರ್ ತಿವಾರಿ, ತಮ್ಮ ಬೆಂಬಲಿಗರಿಗೆ ಗುತ್ತಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಪಿಡಬ್ಲ್ಯೂಡಿ ಎಕ್ಸಿಕಿಟ್ಯೂವ್ ಎಂಜಿನಿಯರ್ ಮನೋಜ್ ಕುಮಾರ್ ಅವರನ್ನು 2008 ರ ಡಿ.24 ರಂದು ಕೊಲೆ ಮಾಡಿದ ಆಪಾದನೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ಮೇ 6 ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದಕ್ಕೂ ಮೊದಲು, ಬಿಎಸ್‌ಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದ ಅಮರಮಣಿ ತ್ರಿಪಾಠಿಗೆ ಕವಯಿತ್ರಿ ಮಧುಮಿತಾ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಆತನೂ ಜೈಲಿನಲ್ಲಿದ್ದಾನೆ.
ಶಶಿ ಎಂಬ ಕಾನೂನು ವಿದ್ಯಾರ್ಥಿನಿಯು ಫೈಜಾಬಾದ್ ಕಾಲೇಜಿನಿಂದ ಅಕ್ಟೋಬರ್ 2007ರಲ್ಲಿ ಕಾಣೆಯಾಗಿದ್ದಳು. ಈಕೆಯ ತಂದೆ ಯೋಗೇಂದ್ರ ಪ್ರಸಾದ್ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿ, ತಮ್ಮ ಮಗಳೊಂದಿಗೆ ಸಂಬಂಧ ಹೊಂದಿರುವ ಆಹಾರ ಸಂಸ್ಕರಣೆ ಖಾತೆ ಸಚಿವ ಆನಂದ ಸೇನ್, ಆಕೆಯನ್ನು ಅಪಹರಿಸಿ ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ ಎಂದು ದೂರು ನೀಡಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಎಸ್ಸಿ/ಎಸ್ಟಿ ನ್ಯಾಯಾಲಯ ಆರೋಪಿತರಾದ ಶಾಸಕ ಆನಂದ ಸೇನ್, ಅವರ ಕಾರು ಚಾಲಕ ವಿಜಯ್ ಹಾಗೂ ಸೀಮಾ ಆಜಾದ್ ಅಪರಾಧಿಗಳು ಎಂದು ತೀರ್ಪು ನೀಡಿದೆ.