ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೋಯಿಡಾ ಹಿಂಸಾಚಾರ: ರಾಹುಲ್ ಗಾಂಧಿ ಹೇಳಿಕೆ ಸುಳ್ಳು! (Greater Noida | Rahul Gandhi | Congress | Mayavati | Farmers Stir)
PTI
ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದಲ್ಲಿ 'ರೈತರ ಪರವಾಗಿ' ಕಾಂಗ್ರೆಸ್‌ನ ಯುವರಾಜ, ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರು ಪ್ರತಿಭಟನೆಗೆ ಕುಳಿತು, ಬಂಧನಕ್ಕೀಡಾಗಿದ್ದು, ಮತ್ತು 'ಭಾರತೀಯ ಅನ್ನಿಸಿಕೊಳ್ಳಲು ನಾಚಿಕೆಯಾಗುತ್ತದೆ' ಎಂಬ ಹೇಳಿಕೆ ನೀಡಿ ದೊಡ್ಡ ಸುದ್ದಿ ಮಾಡಿದ್ದರು. ಆದರೆ, ಅವರು ಹೇಳಿದ್ದೆಲ್ಲಾ ಸುಳ್ಳು ಎಂದು ಭಟ್ಟಾ ಮತ್ತು ಪರ್ಸಾವುಲ್ ಗ್ರಾಮಗಳ ಜನತೆ ಹೇಳಿರುವುದರೊಂದಿಗೆ ರಾಹುಲ್ ಗಾಂಧಿ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ.

ಇಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿದೆ, ದೌರ್ಜನ್ಯವಾಗುತ್ತಿದೆ, ಮನೆಯೊಳಗೆ ಹೆಣಗಳ ರಾಶಿ ಬಿದ್ದಿದೆ. ಮನೆಗಳನ್ನು ನಾಶ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿರುವುದು ಈ ಊರುಗಳ ಮಹಿಳೆಯರ ಆಘಾತಕ್ಕೆ ಕಾರಣವಾಗಿದೆ. ಅವರು ಉಲ್ಲೇಖಿಸಿದ 'ಬಲಿಪಶು'ಗಳು ಕೂಡ ಅಚ್ಚರಿಗೊಂಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಈ ರೀತಿ ಹೇಳಿಕೆ ನೀಡಿದ್ದರು.

ಈಗ ಮಾಧ್ಯಮ ಪ್ರತಿನಿಧಿಗಳೇ ಆ ಊರುಗಳಿಗೆ ತೆರಳಿ, ರಾಹುಲ್ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಿದವು. ಊರವರೆಲ್ಲಾ ಹೇಳುವಂತೆ, ಅತ್ಯಾಚಾರ ನಡೆದಿರುವ ಸಂಗತಿ ನಮಗೆ ತಿಳಿದಿಲ್ಲ, ರಾಹುಲ್‌ಗೆ ಅದೆಲ್ಲಿ ಹೆಣಗಳು ಕಾಣಿಸಿದವು ಎಂಬುದೂ ನಮಗೆ ಗೊತ್ತಿಲ್ಲ. ಹಿಂಸಾಚಾರದ ಸಂದರ್ಭ ಊರು ಬಿಟ್ಟು ಹೋದವರು ಈಗ ಮರಳಿ ಬರುತ್ತಿದ್ದಾರೆ ಎಂದು ವಿವರ ನೀಡಿದ್ದಾರೆ.

ಬಿಎಸ್ಪಿ ನೇತೃತ್ವದ ಮಾಯಾವತಿ ಸರಕಾರದಡಿಯಲ್ಲಿ ರಾಜ್ಯದ ಭದ್ರತಾ ಪಡೆಗಳು ಅತ್ಯಾಚಾರ, ದೌರ್ಜನ್ಯದಲ್ಲಿ ತೊಡಗಿವೆ ಎಂಬ ಆರೋಪದ ಕುರಿತು ಮಾಧ್ಯಮಗಳು ಕೇಳಿದಾಗ, ಈ ಗ್ರಾಮಗಳ ಮಹಿಳೆಯರು ಆಘಾತಗೊಂಡಿದ್ದರು. ಮಾಧ್ಯಮಗಳು ಮಂಗಳವಾರ ಈ ಗ್ರಾಮಗಳನ್ನು ಸಂದರ್ಶಿಸಿದಾಗ, ಕೆಲವರು ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದರು ಎಂಬುದನ್ನು ಜನರು ಒಪ್ಪಿಕೊಳ್ಳುತ್ತಾರಾದರೂ, ಅವರಲ್ಲಿ ಹೆಚ್ಚಿನವರು ಮರಳಿದ್ದಾರೆ ಎನ್ನುತ್ತಾರೆ. ಅಲ್ಲಿ ಅತ್ಯಾಚಾರ ನಡೆದಿರುವ ಕುರಿತು ಯಾವುದೇ ಕೇಸುಗಳು ಕೂಡ ದಾಖಲಾಗಿಲ್ಲ.

ಕಳೆದ ವಾರ ಆ ಊರುಗಳಲ್ಲಿ ಹಿಂಸಾಚಾರ ನಡೆದಿದೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮನೆಗಳು, ವಾಹನಗಳು ಹಾನಿಗೀಡಾಗಿದ್ದು ಹೌದು. ಆದರೆ, ಭಾರೀ ಅತ್ಯಾಚಾರ ನಡೆದಿದೆ, ಹಲವರು ಕಾಣೆಯಾಗಿದ್ದಾರೆ ಎಂಬುದೆಲ್ಲಾ ಸುಳ್ಳು ಎನ್ನುತ್ತಾರೆ ಸ್ಥಳೀಯರು.

ಹಿಂಸಾಚಾರದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಗಾಯಗಳಾಗಿವೆ ಎಂಬುದು ನಿಜ. ಆದರೆ, ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ, ಕೊಲೆಯಾಗಿದೆ ಎಂಬ ಘಟನೆ ನಾನೆಲ್ಲೂ ಕೇಳಿಲ್ಲ ಎನ್ನುತ್ತಾರೆ ಬೀರೇಂದ್ರಿ ಚೌಧುರಿ ಎಂಬಾಕೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆಗಳು ನಡೆಯಲಿದ್ದು, ಆಡಳಿತ ವಿರೋಧಿ ಅಲೆಯನ್ನು ಬಲಗೊಳಿಸಲು ಕಾಂಗ್ರೆಸ್ ಪಕ್ಷವು ಈಗಿನಿಂದಲೇ ಕಾರ್ಯತತ್ಪರವಾಗಿದ್ದು, ಆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೇರಿಸುವ ಬಗ್ಗೆ ರಾಹುಲ್ ಗಾಂಧಿಯವರೇ ಉತ್ಸುಕರಾಗಿದ್ದಾರೆ.
ಇವನ್ನೂ ಓದಿ