ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಹೇಳಿಕೆ ಮಾಧ್ಯಮಗಳೇ ತಿರುಚಿದ್ದು: ಕಾಂಗ್ರೆಸ್ ಸ್ಪಷ್ಟನೆ (Greater Noida | Farmer Agitation | Rahul Gandhi | Mayavati | Congress)
ಗ್ರೇಟರ್ ನೋಯಿಡಾದ ಭಟ್ಟಾ ಪರ್ಸಾವುಲ್ ಗ್ರಾಮದಲ್ಲಿ ಭಸ್ಮವಿರುವ 74 ದಿಣ್ಣೆಗಳು, ಮೃತದೇಹಗಳು ಕಂಡುಬಂದವು ಎಂಬ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಹೇಳಿಕೆಯು ಕೋಲಾಹಲ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಕಾಂಗ್ರೆಸ್, ರಾಹುಲ್ ಆ ರೀತಿ ಹೇಳಿರಲೇ ಇಲ್ಲ, ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ ಎಂದು ಆರೋಪಿಸಿದೆ.

ಸುದ್ದಿಗಾರರಿಗೆ ಈ ಕುರಿತು ಸ್ಪಷ್ಟನೆ ನೀಡಿದ ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ, ಅಲ್ಲಿ ಸತ್ತವರ ಸಂಖ್ಯೆಯ ಬಗ್ಗೆ ಚರ್ಚೆ ಮಾಡುವುದಕ್ಕಿಂತ, ನಿಜಕ್ಕೂ ಅಲ್ಲಿ ದೌರ್ಜನ್ಯ ನಡೆದಿದೆ ಎಂಬ ಅಂಶದ ಮೇಲಷ್ಟೇ ಬೆಳಕು ಹರಿಸುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ನಾವಿದನ್ನು ನಿರಾಕರಿಸುತ್ತಿದ್ದೇವೆ, ರಾಹುಲ್ ಹೇಳಿಕೆಗೆ ನನ್ನ ಪ್ರತಿಕ್ರಿಯೆಯಿಲ್ಲ. ಅಲ್ಲಿ ಮೂಳೆಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದರೆ, ಸಂಖ್ಯೆಯ ಬಗ್ಗೆ ಕೆದಕಲು ಹೋಗಬೇಡಿ. ಯಾವ ರೀತಿ ದೌರ್ಜನ್ಯ ನಡೆದಿದೆ ಎಂದು ವಿಚಾರಿಸಿರಿ ಎಂದ ದ್ವಿವೇದಿ, ಅವರು ಹೇಳಿದ್ದು 70 ಅಡಿ ಸುತ್ತಳತೆಯಲ್ಲಿ ಬೂದಿಯ ರಾಶಿ ಇವೆ ಅಂತ. ಆದರೆ 70 ಹೋಗಿ 74 ಆಹಿ, ಬೂದಿ ಇದ್ದದ್ದು ಮೃತದೇಹಗಳು ಹೇಗೆ ಆದವು ಎಂದು ನನಗೆ ಗೊತ್ತಿಲ್ಲ. ಇದು ಗಂಭೀರ ವಿಚಾರ. ಪತ್ರಿಕೆಗಳಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಂದಿದ್ದನ್ನು ನಾವು ಶೇ.100ರಷ್ಟು ನಿರಾಕರಿಸುತ್ತೇವೆ ಎಂದರು ದ್ವಿವೇದಿ.

ದಿಗ್ವಿಜಯ್ ಸಿಂಗ್ ಸಮರ್ಥನೆ:
ಆದರೆ ಈ ಕುರಿತು ರಾಹುಲ್ ಗಾಂಧಿಯವರ ಗುರು ಎಂದೇ ಟೀಕೆಗೊಳಗಾಗಿರುವ ಹಿರಿಯ ಕಾಂಗ್ರೆಸಿಗ ದಿಗ್ವಿಜಯ್ ಸಿಂಗ್ ಅವರು ವಾರಾಣಸಿಯಲ್ಲಿ ಮಾತನಾಡಿ, ಗಾಂಧಿ ವಂಶದ ಕುಡಿಯನ್ನು ಸಮರ್ಥಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸರಕಾರವನ್ನು ಒತ್ತಾಯಿಸಿದ್ದಾರೆ. ರಾಹುಲ್ ಗಾಂಧಿ ಹೇಳಿರುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಎರಡು ದಿನಗಳ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು ಹೇಳಿದರು.

ಕಾಂಗ್ರೆಸ್ ಹೇಳಿದ್ದೆಲ್ಲವೂ ಸುಳ್ಳು ಎಂದು ಮಾಧ್ಯಮ ಪ್ರತಿನಿಧಿಗಳು ಅಲ್ಲಿಗೆ ತೆರಳಿ ಪ್ರತ್ಯಕ್ಷ ವರದಿ ಮಾಡಿದ ಹಾಗೂ ಈ ಕುರಿತು ಉತ್ತರ ಪ್ರದೇಶ ಸರಕಾರ ಕೂಡ ಸ್ಪಷ್ಟನೆ ನೀಡಿದ ಬಳಿಕ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ರಾಹುಲ್ ಹೇಳಿರುವುದು ಅವರು ಆ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ, ರೈತರೊಂದಿಗೆ, ಜನರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದ ಅನುಭವದ ಆಧಾರದಲ್ಲಿ. ಮುಖ್ಯಮಂತ್ರಿ ಮಾಯಾವತಿ ತಾನು ಹೇಳಿದ್ದೇ ನಿಜ (ರಾಹುಲ್ ಹೇಳಿಕೆ ಸುಳ್ಳು) ಎಂದಾದರೆ ಆಕೆ ಈ ಬಗ್ಗೆ ತನಿಖೆಗೆ ಆದೇಶಿಸಲಿ ಎಂದು ದಿಗ್ವಿಜಯ್ ಸವಾಲೊಡ್ಡಿದರು.

ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ಬಳಿಗೆ ಆ ಪ್ರದೇಶದ ಕೆಲವು ರೈತರನ್ನು ಕರೆದೊಯ್ದು, ಭಟ್ಟಾ ಪರ್ಸಾವುಲ್‌ನಲ್ಲಿ ಧ್ವಂಸಗೊಂಡ ಮನೆಗಳು, ಎಲುಬುಗಳ ಸಹಿತದ ಬೂದಿ, ಸುಟ್ಟ ದೇಹಗಳು ಇರುವ ಚಿತ್ರಗಳನ್ನು ಮನಮೋಹನ್ ಸಿಂಗ್‌ಗೆ ನೀಡಿ, ಪರಿಸ್ಥಿತಿ ಇಷ್ಟು ಹದಗೆಟ್ಟಿದೆ ಎಂದು ವಿವರಿಸಿದ್ದರು. ಅಲ್ಲದೆ, ರಾಜ್ಯ ಸರಕಾರವು ಸ್ಥಳೀಯರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯಗಳಲ್ಲಿ ನಿರತವಾಗಿದೆ ಎಂದೂ ಆರೋಪಿಸಿದ್ದರು.
ಇವನ್ನೂ ಓದಿ