ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿ: ಕಲಾಪಕ್ಕೆ ಗೈರು ಪರಂಪರೆ ಮುಂದುವರಿಕೆ? (Karunanidhi | Jayalalithaa | Tamilnadu | Assembly Session)
PTI
ಹಿಂದಿನ ಪರಂಪರೆಯನ್ನು ಹಾಗೂ ಈಗಿನ ರಾಜಕೀಯ ಪರಿಸ್ಥಿತಿಗಳನ್ನೆಲ್ಲಾ ನೋಡುತ್ತಿದ್ದರೆ, ರಾಜ್ಯ ವಿಧಾನಸಭೆಗೆ ದಾಖಲೆಯ 12ನೇ ಬಾರಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರು 14ನೇ ವಿಧಾನಸಭೆಯ ಕಲಾಪಗಳಲ್ಲಿ ಪಾಲ್ಗೊಳ್ಳುವುದರಿಂದ ತಪ್ಪಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಕಾರಣಗಳು ಸರಳ. 1200 ಕೋಟಿ ರೂಪಾಯಿ ವೆಚ್ಚದಲ್ಲಿ, ಕರುಣಾನಿಧಿಯವರ 50 ವರ್ಷಗಳ ಶಾಸಕತ್ವದ ಕುರುಹಾಗಿಯೂ ನಿರ್ಮಿಸಲಾಗಿದ್ದ ಹೊಸ ಅಸೆಂಬ್ಲಿ ಸಂಕೀರ್ಣದಿಂದ ಸರಕಾರದ ಕಚೇರಿಗಳನ್ನು ಹಿಂದಿನ ಹಳೇ ಕಟ್ಟಡ (ಸೈಂಟ್ ಜಾರ್ಜ್ ಫೋರ್ಟ್)ಕ್ಕೆ ವರ್ಗಾಯಿಸಲು ಎಐಎಡಿಎಂಕೆ ನಾಯಕಿ ಜಯಲಲಿತಾ ತೀರ್ಮಾನಿಸಿದ್ದಾರೆ. ಇದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಲ್ಲದೆ, ಸ್ವತಃ ಆಸಕ್ತಿ ವಹಿಸಿ ಸಿದ್ಧಪಡಿಸಲಾಗಿದ್ದ ಕೇಂದ್ರೀಯ ಕ್ಲಾಸಿಕಲ್ ಲೈಬ್ರರಿ ಕೂಡ ಸ್ಥಳಾಂತರಗೊಳ್ಳುತ್ತಿದೆ.

ಇನ್ನೂ ಒಂದು ಪ್ರಮುಖ ಕಾರಣವಿದೆ. ಮಾಜಿ ಮುಖ್ಯಮಂತ್ರಿಯ 62 ವರ್ಷದಷ್ಟು ಹಳೆಯ ದ್ರಾವಿಡ ಪಕ್ಷವು ಈ ಬಾರಿ ಪ್ರಧಾನ ಪ್ರತಿಪಕ್ಷವಾಗುವಷ್ಟು ಸ್ಥಾನಗಳನ್ನೂ ಗೆದ್ದುಕೊಳ್ಳಲು ವಿಫಲವಾಗಿತ್ತು. ಡಿಎಂಕೆಗೆ ಸಿಕ್ಕಿದ್ದು ಕೇವಲ 22 ಸ್ಥಾನಗಳು ಹಾಗೂ ಕಳೆದ ವಿಧಾನಸಭೆಯಲ್ಲಿ ಕೇವಲ 1 ಸ್ಥಾನ ಜಯಿಸಿದ್ದ ನಟ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷಕ್ಕೆ 28 ಸ್ಥಾನಗಳು ದೊರೆತು, ಪ್ರಧಾನ ಪ್ರತಿಪಕ್ಷವಾಗಿ ಮೂಡಿತ್ತು. ಆಡಳಿತಾರೂಢ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಡಿಎಂಡಿಕೆ ಸ್ಪರ್ಧಿಸಿತ್ತು ಎಂಬುದು ಇಲ್ಲಿ ಉಲ್ಲೇಖಿಸಲೇಬೇಕಾದ ಅಂಶ. ಅಂದರೆ ಜಯಲಲಿತಾಗೆ ಮಿತ್ರರೇ ವಿರೋಧ ಪಕ್ಷದ ನಾಯಕರು!

ಹೀಗಾಗಿ, ಕರುಣಾನಿಧಿ ಅವರು ತಮ್ಮ ಪಕ್ಷದ ಸದನ ನಾಯಕತ್ವವನ್ನು ಹಿರಿಯ ಮುಖಂಡ ದುರೈ ಮುರುಗನ್ ಅವರಿಗೆ ವಹಿಸಿ ವಿಧಾನಸಭೆಗೆ ಹಾಜರಾಗುವ ಸಾಧ್ಯತೆಗಳು ಕಡಿಮೆ.

ಜಯಲಲಿತಾ ಕೂಡ ಕಲಾಪಕ್ಕೆ ಬಂದಿದ್ದು ಕಡಿಮೆ...
ರಾಜಕೀಯ ಕಾರಣಗಳಿಗಾಗಿ ಕಲಾಪಗಳಲ್ಲಿ ಭಾಗವಹಿಸದೇ ಇರುವುದು ಇದೇ ಮೊದಲೇನಲ್ಲ. 1972ರಲ್ಲಿ, ಅಂದಿನ ಸ್ಪೀಕರ್ ಕೆ.ಎ.ಮತಿಯಳಗನ್ ಮತ್ತು ಉಪ ಸ್ಪೀಕರ್ ಪಿ.ಶ್ರೀನಿವಾಸನ್ ಅವರ ನೇತೃತ್ವದಲ್ಲಿ ಪರ್ಯಾಯ ಕಲಾಪಗಳು ನಡೆದಿದ್ದಾಗ, ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ (ಎಂಜಿಆರ್) ಅವರು ಸದನದಿಂದ ಬಿರುಸಿನಿಂದ 'ಸತ್ತ ಸಭೈ ಸೆತ್ತು ವಿಟ್ಟದು (ಶಾಸನ ಸಭೆ ಸತ್ತು ಹೋಗಿದೆ)' ಎನ್ನುತ್ತಾ ಹೊರನಡೆದು, ತಾನು ಮುಖ್ಯಮಂತ್ರಿಯಾದ ಬಳಿಕವಷ್ಟೇ ವಿಧಾನಸಭೆಗೆ ಕಾಲಿಡುವುದಾಗಿ ಶಪಥ ತೊಟ್ಟಿದ್ದರು. 1977ರ ಚುನಾವಣೆಯಲ್ಲಿ ಮುಖ್ಯಮಂತ್ರಿಯೂ ಆಗುವ ಮೂಲಕ, ಶಪಥ ಈಡೇರಿಸಿದರು.

1991ರಲ್ಲಿ ಕೂಡ ಡಿಎಂಕೆ ಇತಿಹಾಸದಲ್ಲೇ ಅತ್ಯಂತ ಹೀನಾಯ ಚುನಾವಣಾ ಸೋಲು ಕಂಡಿತ್ತು. ಅಂದು ಕರುಣಾನಿಧಿ ಮತ್ತು ಪರುತಿ ಎಳಂವಳುದಿ - ಈ ಇಬ್ಬರು ಮಾತ್ರವೇ ಗೆದ್ದಿದ್ದರು. ನಂತರ ಕರುಣಾನಿಧಿ ತಮ್ಮ ಶಾಸಕತ್ವಕ್ಕೂ ರಾಜೀನಾಮೆ ನೀಡಿ ಐದು ವರ್ಷ ವಿಧಾನಸಭೆಗೆ ಬರಲಿಲ್ಲ.

2001ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದಿತ್ತು. ಡಿಎಂಕೆಗೆ 31 ಸೀಟುಗಳು ದೊರಕಿದ್ದರೂ, 2006ರವರೆಗೂ ಕರುಣಾನಿಧಿ ಅಸೆಂಬ್ಲಿ ಪ್ರವೇಶಿಸಿರಲಿಲ್ಲ. 2006ರಲ್ಲಿ ಡಿಎಂಕೆ ಮರಳಿ ಅಧಿಕಾರಕ್ಕೇರಿತು. ಈ ಸಮಯ ಜಯಲಲಿತಾ ಅವರು ಅಸೆಂಬ್ಲಿ ಕಲಾಪದಿಂದ ದೂರವೇ ಉಳಿದರು. ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಅವರು ವಿಧಾನಸಭೆಗೆ ಕಾಲಿಟ್ಟಿದ್ದರು. ಇದಕ್ಕೆ ಕರುಣಾನಿಧಿ-ಜಯಲಲಿತಾ ಬದ್ಧವೈರವೂ ಕಾರಣ. 1200 ಕೋಟಿ ರೂ.ಗಳ ಹೊಸ ಕಟ್ಟಡಕ್ಕೆ ಅಸೆಂಬ್ಲಿ ವರ್ಗಾವಣೆಯಾದ ಬಳಿಕವಂತೂ ಆಕೆ ಅದಕ್ಕೆ ಕಾಲಿಡಲೇ ಇಲ್ಲ.
ಇವನ್ನೂ ಓದಿ