ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಆಯ್ತು, ಈಗ 85 ಸಾವಿರ ಕೋಟಿ ರೂ. ಕಲ್ಲಿದ್ದಲು ಹಗರಣ (Coal Scam | 85000 Crore | UPA | Manmohan Singh | Coal Ministry)
PTI
ಕೇಂದ್ರ ಸರಕಾರದಲ್ಲಿ ನಡೆಯುತ್ತಿರುವ ಹಗರಣಗಳು ಅಥವಾ ಹಗರಣ ನಡೆದಿದೆ ಎಂಬ ಆರೋಪಗಳು ಒಂದೊಂದಾಗಿ ಹೊರಬರುತ್ತಿದ್ದು, ದೇಶದಲ್ಲಿ ಕೋಲಾಹಲವೆಬ್ಬಿಸಿದ 2ಜಿ, ಸಿಡಬ್ಲ್ಯುಜಿ ಹಗರಣಗಳ ಬಳಿಕ ಕಲ್ಲಿದ್ದಲು ಹಗರಣದ ಸರದಿ. 85 ಸಾವಿರ ಕೋಟಿ ರೂಪಾಯಿ ಮೊತ್ತದ ಕಲ್ಲಿದ್ದಲು ಹಗರಣ ನಡೆದಿದ್ದು, ಇದರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ.

ಪ್ರಧಾನಿ ಮೇಲೆ ಆರೋಪ ಬರುವುದಕ್ಕೆ ಕಾರಣವೆಂದರೆ, ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ, ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ, ವಿಧಿಯಿಲ್ಲದೆ ಒತ್ತಾಯದಿಂದ ಕೇಂದ್ರ ಕಲ್ಲಿದ್ದಲು ಖಾತೆಗೆ ಶಿಬು ಸೋರೆನ್ ರಾಜೀನಾಮೆ ನೀಡಿದ ಬಳಿಕ ಆ ಖಾತೆಯನ್ನು ಪ್ರಧಾನಿಯೇ ವಹಿಸಿಕೊಂಡಿದ್ದರು. 2009ರಲ್ಲಿ ಶ್ರೀಪ್ರಕಾಶ್ ಜೈಸ್ವಾಲ್ ಅವರಿಗೆ ಈ ಖಾತೆ ವಹಿಸಲಾಗಿತ್ತು.

2006-09 ಅವಧಿಯಲ್ಲಿ ನಡೆದ ಅತ್ಯಂತ ಗಂಭೀರ ಕಲ್ಲಿದ್ದಲು ಹಗರಣವಿದು ಎಂದು ಹೇಳಿರುವ ಬಿಜೆಪಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತಕ್ಷಣವೇ ವಿಚಾರಣೆ ನಡೆಯಬೇಕು, 143 ಖಾಸಗಿ ಕಂಪನಿಗಳಿಗೆ 73 ಕಲ್ಲಿದ್ದಲು ಘಟಕಗಳನ್ನು ವಿತರಿಸಿರುವ ಕುರಿತು ಸಿಎಜಿ ವಿಶೇಷ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದೆ.

ಹಗರಣ ನಡೆದಿರುವ ವೇಳೆ ಪ್ರಧಾನಿಯೇ ಈ ಸಚಿವಾಲಯದ ಮುಖ್ಯಸ್ಥರಾಗಿರುವುದರಿಂದ ಅವರು ಈ ಅಮೂಲ್ಯ ನೈಸರ್ಗಿಕ ಸಂಪತ್ತಿನ ಲೂಟಿಯ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2006ರಲ್ಲಿ ಗಣಿ ಮತ್ತು ಖನಿಜಗಳ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು, ಅದರಲ್ಲಿನ ಪ್ರಸ್ತಾಪದ ಪ್ರಕಾರ, ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಮುಕ್ತ ವಿತರಣೆಗೆ ಬದಲಾಗಿ ಹರಾಜು ಪ್ರಕ್ರಿಯೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಮಸೂದೆಯು ಸಂಸತ್ತಿನ ಅಂಗೀಕಾರ ಪಡೆಯುವವರೆಗೂ ಮುಕ್ತ ವಿತರಣೆಯನ್ನು ನಿಲ್ಲಿಸಬೇಕಾಗಿದ್ದ ಸರಕಾರವು. ಈ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಬೇಕಾಬಿಟ್ಟಿಯಾಗಿ ಗಣಿಯ ಗುತ್ತಿಗೆ ನೀಡಿತು ಎಂದು ಆರೋಪಿಸಿದೆ ಬಿಜೆಪಿ.

2010ರಲ್ಲಿ ಈ ಮಸೂದೆಗೆ ಸಂಸತ್ತಿನ ಅಂಗೀಕಾರ ದೊರೆತು ಕಾಯಿದೆಯ ರೂಪ ಪಡೆಯಿತು. ಆದರೆ 2006-2009ರ ನಡುವಿನ ನಾಲ್ಕು ವರ್ಷಗಳಲ್ಲಿ, 51 ಲಕ್ಷ ಕೋಟಿ ರೂ. ಮೌಲ್ಯದ 17 ಶತಕೋಟಿ ಮೆಟ್ರಿಕ್ ಟನ್ ಕಲ್ಲಿದ್ದಲು ಇರುವ 73 ಬ್ಲಾಕ್‌ಗಳನ್ನು 143 ಖಾಸಗಿ ಕಂಪನಿಗಳಿಗೆ ಗುತ್ತಿಗೆಗೆ ನೀಡಲಾಯಿತು. ಅಂದರೆ, 2006ರಲ್ಲಿ 51 ಕಂಪನಿಗಳಿಗೆ, 2007ರಲ್ಲಿ 19, 2008ರಲ್ಲಿ 41 ಹಾಗೂ 2009ರಲ್ಲಿ 32 ಕಂಪನಿಗಳಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಬಿಜೆಪಿ ಸಂಸದ ಹಂಸರಾಜ್ ಆಹಿರ್ ಅವರು ತಿಳಿಸಿದ್ದಾರೆ.

ವ್ಯಾವಹಾರಿಕ ವಲಯದಿಂದ ತಿಳಿದುಬರುವಂತೆ, ಮೆಟ್ರಿಕ್ ಟನ್‌ಗೆ 50 ರೂಪಾಯಿಯಷ್ಟು ಕಡಿಮೆ ಬೆಲೆಗೆ ಕಲ್ಲಿದ್ದಲು ವಿತರಿಸಲಾಗಿದೆ. ಹೀಗಾಗಿ ನಾಲ್ಕು ವರ್ಷಗಳ ಈ ಹಗರಣದ ಅವಧಿಯಲ್ಲಿ ಒಟ್ಟು 85,000 ಕೋಟಿ ರೂ. ಕೈಬದಲಾಯಿಸಿವೆ ಎಂದು ಆರೋಪಿಸಿದ್ದಾರೆ ಅವರು.

ಸೂಕ್ತವಾಗಿ ತನಿಖೆ ನಡೆಸಿದಲ್ಲಿ, ಮಸೂದೆಯು ಕಾಯ್ದೆ ರೂಪಕ್ಕಾಗಿ ಸಂಸತ್ ಎದುರು ಕಾಯುತ್ತಿರುವಾಗಲೇ, ನೈಸರ್ಗಿಕ ಸಂಪನ್ಮೂಲ ಲೂಟಿ ಮಾಡಿದ ಅತಿದೊಡ್ಡ ಹಗರಣವಾಗಿ ಈ ಕಲ್ಲಿದ್ದಲು ಗಣಿ ಲೂಟಿಯು ಹೊರಬಂದೀತು ಎಂದು ಬಿಜೆಪಿ ಹೇಳಿದೆ.
ಇವನ್ನೂ ಓದಿ