ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ಗೆ ಭದ್ರತೆ: 10 ಕೋಟಿ ಬಿಲ್ ನೀಡಿದ ಕಮಾಂಡೋ ಪಡೆ (Ajmal Kasab | Mumbai Attack | Arthur Road Jail | Maharashtra)
166 ಮಂದಿಯ ಮಾರಣಹೋಮಕ್ಕೆ ಕಾರಣವಾದ ಪಾಕಿಸ್ತಾನದ ಪಾತಕಿ ಅಜ್ಮಲ್ ಅಮೀರ್ ಕಸಬ್ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ಇನ್ನೂ ಜೈಲಿನಲ್ಲಿದ್ದಾನೆ. ಆರ್ಥರ್ ರೋಡ್ ಜೈಲಿನಲ್ಲಿ ಅವನ ಭದ್ರತೆಗಾಗಿ ಕಾವಲಿರುವ ಇಂಡೋ-ಟಿಬೆಟಲ್ ಗಡಿ ಪೊಲೀಸ್ (ಐಟಿಬಿಪಿ) 10 ಕೋಟಿ ರೂಪಾಯಿಯ ಬಿಲ್ ಕಳುಹಿಸಿರುವುದು ಮಹಾರಾಷ್ಟ್ರ ಸರಕಾರಕ್ಕೆ ಆಘಾತ ತಂದಿದೆ.

ಐಟಿಬಿಪಿಯಿಂದ 10 ಕೋಟಿ ರೂ. ಬಿಲ್ ಬಂದಿದೆ ಎಂಬುದನ್ನು ದೃಢಪಡಿಸಿರುವ ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಮೇಧಾ ಗಾಡ್ಗೀಳ್, ಮಹಾರಾಷ್ಟ್ರ ಅಧಿಕಾರಿಗಳು ಈ ಬಗ್ಗೆ ಕೇಂದ್ರೀಯ ಪಡೆಯಾಗಿರುವ ಐಟಿಬಿಪಿಗೆ ಉತ್ತರ ಕಳುಹಿಸಲಿದ್ದಾರೆ ಎಂದು ಹೇಳಿದ್ದಾರೆ.

26/11 ಮುಂಬೈ ದಾಳಿಯು ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾದ ವಿಷಯವಲ್ಲ. ಇದು ರಾಷ್ಟ್ರೀಯ ವಿಷಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಐಟಿಬಿಪಿ ನವದೆಹಲಿಯ ಮಹಾನಿರ್ದೇಶಕ ಆರ್.ಕೆ.ಭಾಟಿಯಾ ಅವರಿಂದ ರಾಜ್ಯ ಸರಕಾರಕ್ಕೆ ಬಂದ ಪತ್ರದ ಪ್ರಕಾರ 10.87 ಕೋಟಿ ರೂ. ಪಾವತಿಸಬೇಕು ಎಂದು ಕೋರಲಾಗಿದೆ. 2009ರ ಮಾರ್ಚ್ 28ರಿಂದ 2010ರ ಸೆಪ್ಟೆಂಬರ್‌ವರೆಗಿನ ಬಿಲ್ ಇದು.

ಕಸಬ್ ಮತ್ತು ಆತನ ಸಹವರ್ತಿ ಭಯೋತ್ಪಾದಕರು ಮುಂಬೈ ಮೇಲಲ್ಲ ದಾಳಿ ಮಾಡಿದ್ದು, ಇಡೀ ದೇಶದ ಮೇಲೆಯೇ ದಾಳಿ ಮಾಡಿದ್ದಾರೆ. ಕಸಬ್ ರಕ್ಷಣೆಯ ಈ ಹೊರೆಯನ್ನು ಮಹಾರಾಷ್ಟ್ರ ಸರಕಾರ ಹೊರಬೇಕು ಎಂಬುದು ಅನ್ಯಾಯ ಎಂದು ರಾಜ್ಯ ಗೃಹ ಇಲಾಖೆಯ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಮುಂಬೈ ದಾಳಿ ವಿಚಾರಣೆಗಾಗಿ ಜೈಲಿನ ಆವರಣದಲ್ಲೇ ರಚಿಸಲಾಗಿದ್ದ ವಿಶೇಷ ಸೆಶನ್ಸ್ ನ್ಯಾಯಾಲಯದಲ್ಲಿ ಐಟಿಬಿಪಿ ಪಡೆಯನ್ನು ನೇಮಿಸಲಾಗಿತ್ತು. ಇದರ ಅನ್ವಯ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂವಹನ ಉಪಕರಣಗಳನ್ನು ಹೊಂದಿರುವ 200 ಕಮಾಂಡೋಗಳು ಕಸಬ್‌ನನ್ನು ದಿನದ ಇಪ್ಪತ್ತನಾಲ್ಕು ಗಂಟೆಯೂ ಕಾವಲು ಕಾಯುತ್ತಿದ್ದಾರೆ. ಐಟಿಬಿಪಿ ತಂಡವನ್ನು ವಿಚಾರಣೆಯ ಅವಧಿಗೆ ನೇಮಿಸಲಾಗಿತ್ತು. ಆದರೆ ವಿಚಾರಣೆ ಮುಗಿದ ಬಳಿಕವೂ ಈ ಪಡೆಯನ್ನು ವಿಸ್ತರಿಸುವಂತೆ ರಾಜ್ಯ ಸರಕಾರವು ಕೇಳಿಕೊಂಡಿತ್ತು. ಈಗ ಕೇಂದ್ರದತ್ತ ಮುಖ ಮಾಡಿದೆ ರಾಜ್ಯ ಸರಕಾರ.
ಇವನ್ನೂ ಓದಿ