ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಡ್ಲಿಗೂ ಮಹೇಶ್ ಭಟ್ ಮಗನಿಗೂ ಏನು ಸಂಬಂಧ?
(Rahul Bhatt, Mahesh Bhatt, Bollywood, David Headley Testimony 26/11 attack | Lashkar-e-Toiba)
ಹೆಡ್ಲಿಗೂ ಮಹೇಶ್ ಭಟ್ ಮಗನಿಗೂ ಏನು ಸಂಬಂಧ?
ಮುಂಬೈ, ಬುಧವಾರ, 25 ಮೇ 2011( 14:23 IST )
26/11 ಮುಂಬೈ ದಾಳಿಯಲ್ಲಿ ಅಮೆರಿಕದ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಪಾಕಿಸ್ತಾನ ಸಂಜಾತ ಉಗ್ರಗಾಮಿ ದಾವೂದ್ ಗಿಲಾನಿ ಅಲಿಯಾಸ್ ಡೇವಿಡ್ ಕೊಲಮನ್ ಹೆಡ್ಲೀ ದಿನಕ್ಕೊಂದು ಸ್ಫೋಟಕ ಮಾಹಿತಿ ನೀಡುತ್ತಿರುವಂತೆಯೇ, ಬಾಲಿವುಡ್‌ನ ಖ್ಯಾತ ನಿರ್ಮಾಪಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್ ಮತ್ತು ಜಿಮ್ ತರಬೇತುದಾರ ವಿಲಾಸ್ ವರಕ್ ಅವರ ಸಂಪರ್ಕ ತನಗಿತ್ತು ಮತ್ತು ಅವರಿಗೆ ಈ ಸಂಚಿನ ಮಾಹಿತಿ ಇರಲಿಲ್ಲ ಎಂದು ಹೆಡ್ಲಿ ಶಿಕಾಗೋ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ.
ರಾಹುಲ್ ಈ ಹೇಳಿಕೆಯಿಂದ ನೆಮ್ಮದಿಯಿಂದಿದ್ದರೂ, ತನ್ನನ್ನು ಮಹೇಶ್ ಭಟ್ ಪುತ್ರ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿರುವುದಕ್ಕೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಮುಂಬೈ ದಾಳಿಗೆ ಹಣಕಾಸು ನೆರವು ನೀಡಿದ್ದ ಮತ್ತೊಬ್ಬ ಪಾಕ್ ಸಂಜಾತ ಅಮೆರಿಕನ್ ಉದ್ಯಮಿ ತಹಾವುರ್ ರಾಣಾ ವಿರುದ್ಧ ಶಿಕಾಗೋ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುತ್ತಿರುವ ಸಂದರ್ಭ ಹೆಡ್ಲಿ ಒಂದೊಂದಾಗಿ ಮಾಹಿತಿಗಳನ್ನು ಹೊರಗೆಡಹುತ್ತಿದ್ದಾನೆ. ಮುಂಬೈ ದಾಳಿಗೆ ಪಾಕಿಸ್ತಾನದ ಐಎಸ್ಐ ಮತ್ತು ಲಷ್ಕರ್ ಇ ತೋಯ್ಬಾ ಪೂರ್ಣ ಬೆಂಬಲವಿತ್ತು ಎಂಬುದನ್ನು, ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆಯನ್ನು ಹತ್ಯೆಗೈಯುವ ಉದ್ದೇಶ ಮತ್ತಿತರ ವಿಷಯಗಳೊಂದಿಗೆ, ಇದೀಗ ಬಾಲಿವುಡ್ ನಂಟು ಕೂಡ ಬಯಲಿಗೆ ಬರುತ್ತಿದೆ.
ಮಹೇಶ್ ಭಟ್ ಅವರ ಪುತ್ರ ರಾಹುಲ್ ಭಟ್ ಹೆಸರು ಮತ್ತು ಫೋನ್ ಸಂಖ್ಯೆಯು ಹೆಡ್ಲಿಯ ಡೈರಿಯಲ್ಲಿ ಪತ್ತೆಯಾಗಿರುವುದು ದೊಡ್ಡ ಸುದ್ದಿಗೆ ಕಾರಣವಾಗಿತ್ತು. ಮಹೇಶ್ ಭಟ್ ಅವರು ಆಗಾಗ್ಗೆ ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನದ ಪರವಾಗಿ ಮಾತನಾಡುತ್ತಿರುವುದು ಮಾಧ್ಯಮಗಳಲ್ಲಿ ಸಾಕಷ್ಟು ಗುಲ್ಲೆಬ್ಬಿಸಿತ್ತು.
ರಾಹುಲ್‌ಗೆ ಹೆಡ್ಲಿಯ ಸಂಪರ್ಕವಾಗಿದ್ದು ವಿಲಾಸ್ ಮೂಲಕ. ಈಗ ರಾಹುಲ್ ಹೇಳಿಕೆ ಹೀಗಿದೆ: "ಅಪ್ಪ ಮಾಡಿದ ತಪ್ಪಿಗೆ ಮಗನಿಗೆ ಶಿಕ್ಷೆ. ಪಾಕಿಸ್ತಾನದ ಪರವಾಗಿರುವ ಮತ್ತು ಆ ದೇಶವನ್ನು ಪ್ರಚಾರ ಮಾಡುತ್ತಿರುವ ಮಹೇಶ್ ಭಟ್ ಪುತ್ರನಾಗಿರುವುದಕ್ಕೆ ಇದು ನಾನು ತೆರುವ ಬೆಲೆ. ಮಹೇಶ್ ಭಟ್ ಪಾಕಿಸ್ತಾನದ ಬಗ್ಗೆ ಹೊಂದಿರುವ ಭಾವನೆಯು ನನ್ನಲ್ಲೂ ಇದೆ ಎಂದೇನಿಲ್ಲವಲ್ಲ. ಆದರೆ ಎಲ್ಲರೂ ನನ್ನನ್ನೇ ಎಲ್ಲರೂ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ, ಸಾಮಾನ್ಯ ಜನರ ನಂಬಿಕೆಗೆ ವ್ಯತಿರಿಕ್ತವಾಗಿ, ರಾಷ್ಟ್ರೀಯ ತನಿಖಾ ಮಂಡಳಿ ಎನ್ಐಎ ಮತ್ತು ಭಯೋತ್ಪಾದನಾ ನಿರೋಧಕ ದಳದ ಮುಖ್ಯಸ್ಥ ರಾಕೇಶ್ ಮಾರಿಯಾ ಅವರು ನನ್ನನ್ನು ಮತ್ತು ವಿಲಾಸ್‌ನನ್ನು ನಂಬಿರುವುದು ನನ್ನ ಪುಣ್ಯ".
ಡೇವಿಡ್ ಹೆಡ್ಲಿಯೊಬ್ಬ ರಾಕ್ಷಸ, ಎಷ್ಟೋ ಜನರನ್ನು ಕೊಂದಿದ್ದಾನೆ. ಆದರೆ ಆತನಿಗೆ ತನ್ನ ಗೆಳೆಯರನ್ನು ತನ್ನ ಕೃತ್ಯಗಳಲ್ಲಿ ಸೇರಿಸಿಕೊಂಡಿಲ್ಲ. ಆತ ನಮ್ಮ ಬಗೆಗೂ ಏನಾದರೂ ಹೇಳಬಹುದಿತ್ತು. ಆದರೆ ಹೇಳಿಲ್ಲ ಎಂದು ರಾಹುಲ್ ತೃಪ್ತಿ ವ್ಯಕ್ತಪಡಿಸಿದ್ದಾರೆ.
ನಾನು ಅವನನ್ನು ಏಜೆಂಟ್ ಹೆಡ್ಲಿ ಎಂದೇ ಕರೆಯುತ್ತಿದ್ದೆ. ಯಾಕೆಂದರೆ ಅವನಿಗೆ ಮದ್ದುಗುಂಡುಗಳು, ಸ್ಫೋಟಕಗಳ ಬಗ್ಗೆ ಅಪಾರ ಜ್ಞಾನವಿತ್ತು. ಆದರೆ ಆತ 2008ರ 26/11 ಮುಂಬೈ ದಾಳಿಗೆ ಸರ್ವೇಕ್ಷಣೆ ನಡೆಸುತ್ತಿದ್ದ ಎಂಬುದು ನನಗೆ ಗೊತ್ತಿರಲಿಲ್ಲ. ಜನ ಏನೇ ಹೇಳಲಿ, ಆತನೊಬ್ಬ ಲಷ್ಕರ್ ವ್ಯಕ್ತಿಯಲ್ಲ, ಬದಲಾಗಿ ಅವನು ಸಿಐಎ ಏಜೆಂಟ್ ಅಂತ ನನ್ನ ನಂಬಿಕೆ ಎಂದಿದ್ದಾರೆ ರಾಹುಲ್.
ತನ್ನನ್ನು ಪ್ರಖ್ಯಾತ ವ್ಯಕ್ತಿಯನ್ನಾಗಿ ಮಾಡಿದ್ದಕ್ಕೆ ಹೆಡ್ಲಿ ಕಾರಣ ಎಂದಿದ್ದಾರೆ ರಾಹುಲ್. ನಾನು ಮೊದಲು ಕುಖ್ಯಾತನಾದೆ, ಬಳಿಕ ಅವನಿಂದಾಗಿ ಪ್ರಖ್ಯಾತನಾದೆ. ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು ಎಂದು ರಾಹುಲ್ ಹೇಳಿದ್ದಾರೆ.