ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನಲ್ಲ, ರೆಡ್ಡಿಗಳನ್ನು ನೇಮಿಸಿದ್ದು ಜೇಟ್ಲಿ, ನಾಯ್ಡು: ಸುಷ್ಮಾ (Bellary Reddy Brothers, Sushma Swaraj, Ananth Kumar, Arun Jaitley)
ಬಳ್ಳಾರಿ ಗಣಿ ಧಣಿ ಸಹೋದರರಾದ ರೆಡ್ಡಿ ಸಹೋದರರ ರಕ್ಷಣೆಗೆ ನಿಂತು, ಅವರಿಗೆ ಯಡಿಯೂರಪ್ಪ ಸರಕಾರದಲ್ಲಿ ಮಂತ್ರಿಗಿರಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪಗಳನ್ನು ತಳ್ಳಿ ಹಾಕಿರುವ ಲೋಕಸಭೆಯ ಪ್ರತಿಪಕ್ಷ ನಾಯಕಿ, ಬಿಜೆಪಿಯ ಸುಷ್ಮಾ ಸ್ವರಾಜ್, ಒಂದೇ ಕುಟುಂಬದ ಮೂವರಿಗೆ ಮಂತ್ರಿಪದವಿ ಕೊಡಿಸುವಲ್ಲಿ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಹಾಗೂ ಅನಂತ್ ಕುಮಾರ್ ಅವರಿಗಿದ್ದ ರಾಜಕೀಯ ಬದ್ಧತೆ ಕಾರಣವಾಗಿತ್ತು ಎಂದು ಹೇಳಿದ್ದಾರೆ.

ನಾನವರಿಗೆ ರಕ್ಷಕಿಯಾಗಿದ್ದೇನೆ ಎಂಬುದಕ್ಕಿಂತ ದೊಡ್ಡ ಸುಳ್ಳು ಬೇರೆ ಇರಲಾರದು. ನಿಜ ಹೇಳುತ್ತೇನೆ. ಬಳ್ಳಾರಿ ಸಹೋದರರನ್ನು ರಾಜಕೀಯವಾಗಿ ರೂಪಿಸುವುದರಲ್ಲಿ ನನ್ನ ಪಾತ್ರವೇನೂ ಇಲ್ಲ. ಅವರನ್ನು ಮಂತ್ರಿಗಳನ್ನಾಗಿಸುವಲ್ಲಾಗಲೀ, ರಾಜಕೀಯ ಮುಖಂಡರನ್ನಾಗಿ ಮಾಡುವಲ್ಲಾಗಲೀ ನನ್ನದೇನೂ ಪಾತ್ರವಿಲ್ಲ ಎಂದು ಔಟ್‌ಲುಕ್ ಸಾಪ್ತಾಹಿಕಕ್ಕೆ ನೀಡಿದ ಸಂದರ್ಶನದಲ್ಲಿ ಸುಷ್ಮಾ ಹೇಳಿದ್ದಾರೆ.

ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಅವರು ಸುಷ್ಮಾರಿಗೆ ಆಪ್ತರಾಗಿದ್ದು, ಅವರ ರಕ್ಷಣೆಯಲ್ಲಿದ್ದಾರೆ. 1999ರಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ಪರ್ಧಿಸಿದ್ದಾಗಿನಿಂದಲೇ ರೆಡ್ಡಿ ಸಹೋದರರು 'ತಾಯಿ' ಎಂದು ಕರೆಯುವ ಸುಷ್ಮಾರಿಗೆ ಆಪ್ತರಾಗಿದ್ದರು ಎಂದೆಲ್ಲಾ ಸಾಮಾನ್ಯ ಅಭಿಪ್ರಾಯವಿತ್ತು.

ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರೋಧಿಗಳಾಗಿ ಗುರುತಿಸಿಕೊಂಡಿರುವ ರೆಡ್ಡಿ ಸಹೋದರರನ್ನು ರಾಜ್ಯ ಸಂಪುಟಕ್ಕೆ ಸೇರಿಸುವಲ್ಲಿ ತನ್ನದೇನೂ ಪಾತ್ರವಿರಲಿಲ್ಲ. ಅವರನ್ನು ಮಂತ್ರಿಯನ್ನಾಗಿ ಮಾಡಿದಾಗ ಅರುಣ್ ಜೇಟ್ಲಿ ಅವರು ರಾಜ್ಯದ ಉಸ್ತುವಾರಿ ವಹಿಸಿದ್ದರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಹಿರಿಯರಾದ ಅನಂತ್ ಕುಮಾರ್ ಹಾಗೂ ವೆಂಕಯ್ಯ ನಾಯ್ಡು ಕೂಡ ಜತೆಗಿದ್ದರು. ಅದರಲ್ಲಿ ನನ್ನ ಕೆಲಸವೇನೂ ಇರಲಿಲ್ಲ ಎಂದಿದ್ದಾರೆ ಸುಷ್ಮಾ.

ರೆಡ್ಡಿ ಸಹೋದರರೊಂದಿಗೆ ನನ್ನ ಸಂಪರ್ಕವೆಂದರೆ ವರ್ಷಕ್ಕೊಂದು ದಿನ ವರ ಮಹಾಲಕ್ಷ್ಮಿ ವ್ರತದ ದಿನ ಮಾತ್ರ. ಅಂದು ಬಳ್ಳಾರಿಗೆ ಹೋಗಿ ಪೂಜೆ ನೆರವೇರಿಸುತ್ತೇನೆ. ಅದು ಬಿಟ್ಟರೆ, ಉಳಿದ 364 ದಿನಗಳೂ ನನಗೆ ರೆಡ್ಡಿ ಸಹೋದರರ ಸಂಪರ್ಕವೂ, ಮಾತುಕತೆಯೂ ಇರುವುದಿಲ್ಲ ಎಂದು ಸುಷ್ಮಾ ಹೇಳಿದರು.

ವಾಸ್ತವವಾಗಿ, ಒಂದೇ ಕುಟುಂಬದ ಮೂವರನ್ನು ಮಂತ್ರಿಗಳನ್ನಾಗಿಸುವುದನ್ನು ನಾನೇ ವಿರೋಧಿಸಿದ್ದೆ. ಆದರೆ ಅವರಿಗೆ (ಜೇಟ್ಲಿ, ನಾಯ್ಡು, ಅನಂತ್) ರಾಜಕೀಯ ಬದ್ಧತೆಗಳಿದ್ದವು ಎಂದ ಸುಷ್ಮಾ, 2009ರಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಒಡಕು ಇತ್ತು, ಸರಕಾರವು ಪತನದ ಅಂಚಿನಲ್ಲಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆಗ ಪಕ್ಷದ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಹಾಗೂ ಉಸ್ತುವಾರಿಯಾಗಿದ್ದ ಜೇಟ್ಲಿ ಅವರು ಕೋರಿಕೊಂಡ ಮೇರೆಗೆ ತಾನು ರೆಡ್ಡಿ ಸಹೋದರರೊಂದಿಗೆ ಮಾತನಾಡಿ, ಅವರ ಆಕ್ರೋಶ ಶಮನ ಮಾಡಿದ್ದೆ ಎಂದೂ ಒಪ್ಪಿಕೊಂಡಿದ್ದಾರೆ ಸುಷ್ಮಾ.
ಇವನ್ನೂ ಓದಿ