ಕರ್ನಾಟಕದಲ್ಲಿ ಬಳ್ಳಾರಿ ಗಣಿ ಧಣಿಗಳೂ, ವಿವಾದಿತ ಸಚಿವರೂ ಆಗಿರುವ ರೆಡ್ಡಿ ಸಹೋದರರನ್ನು ಪೋಷಿಸಿದ್ದು ತಾನಲ್ಲ, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಅನಂತ್ ಕುಮಾರ್ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಹೇಳಿಕೆಯು ಬಿಜೆಪಿಯೊಳಗೆ ಬಿರುಗಾಳಿ ಎಬ್ಬಿಸಿದೆ.
ವಿವಾದ ತಣ್ಣಗಾಗಿಸಲು ಯಡಿಯೂರಪ್ಪ, ಈಶ್ವರಪ್ಪ ಯತ್ನ ಸುಷ್ಮಾ ಹೇಳಿಕೆಯು ಪ್ರಕಟವಾದ ತಕ್ಷಣ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿಗೆ ಮಂತ್ರಿಗಿರಿ ನೀಡಿರುವುದು ಮತ್ತು ಸೋಮಶೇಖರ ರೆಡ್ಡಿಗೆ ನಿಗಮ ಅಧ್ಯಕ್ಷತೆ ನೀಡಿರುವುದು ತನ್ನದೇ ನಿರ್ಧಾರವೇ ಹೊರತು, ಬೇರಾರ ಒತ್ತಡವೂ ಇರಲಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ, ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ.
ಅದೇ ರೀತಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪರೂ ಹೇಳಿಕೆ ನೀಡಿ, ಸುಷ್ಮಾ ಈ ರೀತಿ ಹೇಳುತ್ತಿರುವುದು ಇದೇನೂ ಹೊಸತಲ್ಲ. ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾರೆ ಎನ್ನುತ್ತಾ, ಮಾಧ್ಯಮಗಳೇ "ರೆಡ್ಡಿ ಸೋದರರಿಗೆ ಸುಷ್ಮಾ ತಾಯಿಯ ಶ್ರೀರಕ್ಷೆ" ಎಂಬಂತಹಾ ಸುದ್ದಿಗಳನ್ನು ಬಿಂಬಿಸುತ್ತಿದ್ದವು ಎನ್ನುತ್ತಾ, ವಿವಾದ ಶಮನಕ್ಕೆ ಯತ್ನಿಸಿದ್ದಾರೆ.
PTI
ಇದೀಗ ಈ ಹೇಳಿಕೆಯು ಬಿಸಿ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ನಡುವೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಆರೆಸ್ಸೆಸ್ ಕೂಡ ಅಸಮಾಧಾನ ಅದೇ ರೀತಿ, ಸುಷ್ಮಾ ಹೇಳಿಕೆಗೆ ಆರೆಸ್ಸೆಸ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಬಿಜೆಪಿಯ ಹಿರಿಯ ಮುಖಂಡರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುತ್ತಿರುವುದು ಪಕ್ಷಕ್ಕೂ, ದೇಶಕ್ಕೂ ಒಳ್ಳೆಯದಲ್ಲ ಎಂಬುದು ಆರೆಸ್ಸೆಸ್ ಅಭಿಮತ. ಈ ಕಾರಣಕ್ಕೆ ಅದು ಅತೃಪ್ತಿ ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ.
ಈ ಹೇಳಿಕೆಯು ಬಿಜೆಪಿಯಲ್ಲಿ ಪ್ರಭಾವಕ್ಕಾಗಿ ಕಿತ್ತಾಡುತ್ತಿರುವ ಮತ್ತು 2014ರ ಮಹಾ ಚುನಾವಣೆಗಳಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬುದರ ಕುರಿತು ಮೇಲಾಟ ನಡೆಸುತ್ತಿರುವ ಜೇಟ್ಲಿ ಮತ್ತು ಸುಷ್ಮಾ ನಡುವಿನ ಶೀತಲ ಸಮರ ಮತ್ತಷ್ಟು ತೀವ್ರಗೊಳ್ಳಲು ಕಾರಣವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ.
ಔಟ್‌ಲುಕ್‌ಗೆ ನೀಡಿರುವ ಸಂದರ್ಶನದಲ್ಲಿ ಸುಷ್ಮಾ ಸ್ವರಾಜ್, ಬಳ್ಳಾರಿ ಸಹೋದರರ ಮತ್ತು ತನ್ನ ಸಂಬಂಧ ವರ್ಷದಲ್ಲಿ ಒಂದೇ ದಿನ, ವರ ಮಹಾಲಕ್ಷ್ಮಿ ವ್ರತದಂದು ಮಾತ್ರ. ಅವರನ್ನು ಬೆಳೆಸಿದ್ದು ನಾನಲ್ಲವೇ ಅಲ್ಲ. ಅವರನ್ನು ಮಂತ್ರಿ ಮಾಡುವ ನಿರ್ಧಾರವೆಲ್ಲವೂ ಮುಖ್ಯಮಂತ್ರಿ ಯಡಿಯೂರಪ್ಪ, ಕರ್ನಾಟಕ ಉಸ್ತುವಾರಿಯಾಗಿದ್ದ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಮತ್ತು ಅನಂತ್ ಕುಮಾರ್ ಅವರದ್ದೇ ಎಂದಿದ್ದರು.
ಅದೇ ರೀತಿ, ಪಕ್ಷದೊಳಗೆ ಆಂತರಿಕ ಕಲಹ ಇಲ್ಲ ಎಂದು ಖಡಾಖಂಡಿತವಾಗಿ ಸುಷ್ಮಾ ನಿರಾಕರಿಸದಿದ್ದರೂ, ಸ್ಪಷ್ಟವಾಗಿ ಒಪ್ಪಿಕೊಳ್ಳಲೂ ಇಲ್ಲ. "ಪಕ್ಷದೊಳಗೆ ನನ್ನ ವಿರುದ್ಧವೇ ಜನರಿದ್ದಾರೆ ಎಂಬುದನ್ನು ನಂಬಲು ನನಗೆ ಇಚ್ಛೆ ಇಲ್ಲ" ಎಂದು ಹೇಳಿದರಾದರೂ, "ನಾವು ಬೆಳೆಯುವುದನ್ನು ನೋಡಲಾಗದ ಮಂದಿ ಇದ್ದಾರೆ, ನಮ್ಮ ಬಗ್ಗೆ ಮತ್ಸರ ಇರುವವರಿದ್ದಾರೆ" ಎಂದೂ ಹೇಳಿದ್ದರು.