ಇಪ್ಪತ್ತೇಳು ವರ್ಷ ಪಾಕಿಸ್ತಾನದ ಜೈಲಿನಲ್ಲಿ ಸೆರೆವಾಸ ಅನುಭವಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದ 52 ವರ್ಷದ ಗೋಪಾಲ್ ದಾಸ್, ಕೊನೆಗೂ ತನ್ನ ಜೀವನ ಸಂಗಾತಿಯನ್ನು ಹಿಮಾಚಲ ಪ್ರದೇಶದ ಗುಡ್ಡಗಾಡಿನಲ್ಲಿ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ತನಗಿಂತ ಹದಿನಾಲ್ಕು ವರ್ಷ ಕಿರಿಯಳೊಂದಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಭಾನುವಾರ ಹಸೆಮಣೆ ಏರಲಿದ್ದಾರೆ.
'ವಧು ನನ್ನ ಪತ್ನಿಯ ಸಂಬಂಧಿಕಳಾಗಿದ್ದು, ವಿವಾಹವನ್ನು ಗುರು ಹಿರಿಯರೆಲ್ಲ ಸೇರಿ ನಿಶ್ಚಯಿಸಿದ್ದು, ಅಷ್ಟೇನು ಅದ್ದೂರಿಯಾಗಿ ನಡೆಸಲು ಉದ್ದೇಶಿಸಿಲ್ಲ' ಎಂದು ಗೋಪಾಲ್ ದಾಸ್ ಅವರ ಹಿರಿಯ ಸಹೋದರ ಆನಂದವೀರ್ ದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನದ ಶುಭಗಳಿಗೆಯಲ್ಲಿ ಪಂಚಕುಲಾ ನಗರದ ಗುರುದ್ವಾರದಲ್ಲಿ ಈ ವಿವಾಹ ಕಾರ್ಯ ಸಾಂಪ್ರದಾಯಿಕವಾಗಿ ನೆರವೇರಲಿದೆ. ಹಣಕಾಸಿನ ತೊಂದರೆಯಿಂದಾಗಿ ಹೆಚ್ಚು ಅದ್ದೂರಿಯಾಗಿ ನಡೆಸುತ್ತಿಲ್ಲ. ಆದ್ದರಿಂದಲೇ ಹೆಚ್ಚಿನ ಬಂಧು, ಮಿತ್ರರನ್ನು ಆಹ್ವಾನಿಸದೆ ಮನೆಯಲ್ಲೇ ಸಣ್ಣದಾಗಿ ಭೋಜನ ಕೂಟ ಏರ್ಪಡಿಸಲಾಗಿದೆ ಎಂದರು.
ಈ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯಿಸಲು ಇಷ್ಟಪಡದ ಮದುಮಗ ಗೋಪಾಲ್ ದಾಸ್, ಮದುವೆ ಕಾರ್ಯಗಳಲ್ಲಿ ಬ್ಯುಸಿಯಾಗಿರುವುದರಿಂದ ಈ ಸಂದರ್ಭದಲ್ಲಿ ಯಾವುದೇ ವಿಷಯವನ್ನು ಚರ್ಚಿಸಲು ಇಷ್ಟಪಡುವುದಿಲ್ಲ ಎಂದು ಮಾಧ್ಯಮದಿಂದ ನುಣುಚಿಕೊಂಡರು.
ಪಾಕಿಸ್ತಾನದಲ್ಲಿ ಭಾರತದ ಪರ ಗೂಢಚಾರಿಕೆ ಮಾಡುತ್ತಿದ್ದ ಆರೋಪದಲ್ಲಿ ಗೋಪಾಲ್ ದಾಸ್ ಅವರನ್ನು 1984ರಲ್ಲಿ ಪಾಕ್ ಗಡಿಯಲ್ಲಿ ಬಂಧಿಸಲಾಗಿತ್ತು. ಬಂಧಿತರಾಗಿದ್ದ ಇವರನ್ನು 27 ವರ್ಷಗಳ ಕಾಲ ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ಕೂಡಿ ಹಾಕಿದ್ದರು. ಈ ವರ್ಷದ ಕೊನೆಯಲ್ಲಿ ಬಂಧಮುಕ್ತರಾಗಬೇಕಿದ್ದ ಇವರನ್ನು, ಕಳೆದ ಮಾರ್ಚ್‌ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಬಿಡುಗಡೆಗೆ ಆದೇಶಿಸಿದ್ದರು.
ಕಳೆದ ಮಾರ್ಚ್ 30ರಂದು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮತ್ತು ಪ್ರಧಾನಿ ಮನಮೋಹನ ಸಿಂಗ್ ಅವರು ಒಟ್ಟಿಗೆ ಕುಳಿತು ಭಾರತ-ಪಾಕ್ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಿದ್ದರು. ಈ ಅಪೂರ್ವ ಸಂಗಮದಿಂದ ಬಿಡುಗಡೆ ಭಾಗ್ಯ ಕಂಡಿದ್ದ ಗೋಪಾಲ್ ದಾಸ್, ಭಾರತಕ್ಕಾಗಿ ಸೇವೆ ಸಲ್ಲಿಸಿ ಪಾಕ್‌ನಲ್ಲಿ ಬಂಧಿಯಾಗಿರುವ ಖೈದಿಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲದ ಸರಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.