ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆತ್ತವರ ನಿರ್ಲಕ್ಷ್ಯ: 3 ಗಂಟೆ ಕಾರೊಳಗಿದ್ದ ಮಗು ಸಾವು (3-yr-old boy | left inside car | Died due to suffocation | Asmathullah)
ಸಂಬಂಧಿಕರ ಅಂತ್ಯ ಸಂಸ್ಕಾರಕ್ಕೆ ಹೋದವರು ತಮ್ಮ ಮಗುವನ್ನೇ ಬಲಿಕೊಟ್ಟ ಹೃದಯ ವಿದ್ರಾವಕ ಘಟನೆ ಘಟನೆ ತಮಿಳುನಾಡಿನ ತಿರುವಿಕಾ ನಗರದಲ್ಲಿ ಸೋಮವಾರ ನಡೆದಿದೆ. 3 ವರ್ಷದ ಅಸ್ಮದುಲ್ಲಾ ಪೋಷಕರ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿದೆ.

ಪಲ್ಲಾವರಂನ ನಿಯಮದುಲ್ಲಾ ಅವರು ತಮ್ಮ ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರಕ್ಕಾಗಿ ಪತ್ನಿ ಮುಮ್ತಾಜ್‌ ಬೇಗಂ ಹಾಗೂ ಪುತ್ರ ಅಸ್ಮದುಲ್ಲಾ ಜತೆ ಕಾರಿನಲ್ಲಿ ಚೆನ್ನೈ ಉತ್ತರ ಭಾಗದಲ್ಲಿರುವ ತಿರುವಿಕಾ ನಗರಕ್ಕೆ ಮಧ್ಯಾಹ್ನ ಸುಮಾರು 1 ಗಂಟೆಗೆ ಬಂದಿದ್ದರು. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕಾರಿನಿಂದ ಇಳಿದ ಪೋಷಕರು ತಮ್ಮ ಮಗುವನ್ನು ಮರೆತು ಕಾರಿನ ಕೀ ಹಾಕಿಕೊಂಡು ತೆರಳಿದ್ದರು.

ಮಗುವಿನ ಬಗ್ಗೆ ಸಂಬಂಧಿಕರು ವಿಚಾರಿಸಿದಾಗಲೇ ಪೋಷಕರಿಗೆ ತಮ್ಮ ಮಗುವನ್ನು ಕಾರಿನಲ್ಲೇ ಬಿಟ್ಟು ಬಂದಿದ್ದು ನೆನಪಾಗಿದ್ದು, ಆಗ ಸುಮಾರು 4 ಗಂಟೆ. ಪೋಷಕರು ಕಾರಿನ ಬಳಿ ಬಂದು ನೋಡಿದಾಗ ಹಿಂಬದಿ ಸೀಟಿನಲ್ಲಿದ್ದ ಮಗು ತೀವ್ರವಾದ ಬಿಸಿಲ ತಾಪ ಹಾಗೂ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿತ್ತು.

ಮಗುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಯವರು ಸರಕಾರದ ಸ್ಟ್ಯಾನ್ಲಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಮಗು ಚಿಕಿತ್ಸೆಗೆ ಯಾವುದೇ ರೀತಿ ಸ್ಪಂದಿಸದೇ ಇದ್ದುದರಿಂದ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು ಎಂದು ಸಹಾಯಕ ಪೊಲೀಸ್‌ ಆಯುಕ್ತ ಪುಲಿಯಾಂಥೋಪೆ ತಿಳಿಸಿದ್ದಾರೆ.

ತೀವ್ರವಾದ ಬಿಸಿಲ ಶಾಖದಿಂದ ಮಗು ಉಸಿರುಕಟ್ಟಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಪಾರ್ಥಿವ ಶರೀರವನ್ನು ಸ್ಟ್ಯಾನ್ಲಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಕುರಿತು ಪೊಲೀಸರು ಶಂಕಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.