ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಾಜಪೇಯಿ ಭಾಷಣ, ಬರಹಗಳಿಗೆ ಡಿಜಿಟಲ್ ರೂಪ (Vajpayee's Speeches, Writings, Digitalized | Prabodhini | BJP)
ಅತ್ಯಂತ ಸಜ್ಜನ, ನಿಷ್ಕಳಂಕ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿದ್ದ, ಪ್ರಭಾವೀ ವಾಕ್ಪಟುವೂ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳು, ಲೇಖನಗಳು, ಸಂದರ್ಶನ ಇತ್ಯಾದಿಗಳೆಲ್ಲವನ್ನೂ ಡಿಜಿಟಲ್ ರೂಪದಲ್ಲಿ ಒಟ್ಟು ಸೇರಿಸಲು "ದಿ ರಾಮಭಾವು ಮಳಗಿ ಪ್ರಬೋಧಿನಿ" ಎಂಬ ಸಂಸ್ಥೆ ಮುಂದಾಗಿದೆ.

ಈ ಯೋಜನೆಯನ್ನು ಅಧಿಕೃತವಾಗಿ ನವದೆಹಲಿಯಲ್ಲಿ ಜೂನ್ 8ರಂದು ಆರಂಭಿಸಲಾಗುತ್ತದೆ. ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಮುಖ್ಯ ಅತಿಥಿಯಾಗಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ 'ಪ್ರಬೋಧಿನಿ' ನಿರ್ದೇಶಕ ವಿನಯ್ ಸಹಸ್ರಬುಧೆ ಅವರು, ಯುವ ಪೀಳಿಗೆಯು ಅಟಲ್‌ಜೀ ಅವರ ಮಾತಿನ ವೈಖರಿ ಮತ್ತು ಸಿದ್ಧಾಂತಗಳಿಂದ ಮಾರು ಹೋಗಿದ್ದು, ಅವರ ಬೋಧನೆ, ಆಲೋಚನೆಗಳನ್ನು ಡಿಜಿಟಲ್ ರೂಪದಲ್ಲಿ ಕಾಯ್ದಿಡುವುದೇ ಪ್ರಮುಖ ಉದ್ದೇಶ. ವಾಜಪೇಯಿಯವರ ಪ್ರೇರಣಾತ್ಮಕ ಮಾತುಗಳು ಮುಂದಿನ ಪೀಳಿಗೆಗಳಿಗೂ ಲಭ್ಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಸಂಸತ್‌ನ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಪಾಲ್ಗೊಳ್ಳಲಿದ್ದು, ವಾಜಪೇಯಿಯವರ ಭಾಷಣಗಳು, ಲೇಖನಗಳು, ಸಂದರ್ಶನ, ಕವನ ಇತ್ಯಾದಿಗಳ ಯಾವುದೇ ವೀಡಿಯೊ, ಆಡಿಯೋ ಅಥವಾ ಮುದ್ರಿತ ಪ್ರತಿಗಳೇನಾದರೂ ಇದ್ದರೆ ಒಪ್ಪಿಸುವಂತೆ ಜನತೆಯನ್ನು ಕೇಳಿಕೊಂಡಿದ್ದಾರೆ.

ಡಿಜಿಟಲ್ ರೂಪಕ್ಕೆ ಪರಿವರ್ತಿಸಿದ ಬಳಿಕ ಮೂಲ ಪ್ರತಿಯನ್ನು ಹಿಂತಿರುಗಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಆಡಿಯೋ ಮತ್ತು ವೀಡಿಯೋ ಮಾದರಿಗಳ ಸಂಗ್ರಹಣೆಯು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು ಮತ್ತು ಮುದ್ರಿತ ಪ್ರತಿಗಳು 2012ರ ಡಿಸೆಂಬರ್‌ಗೆ ಪೂರ್ಣಗೊಳ್ಳುವ ಗುರಿ ಇರಿಸಲಾಗಿದೆ. ಅವರು ಸಂಸತ್ತಿನಲ್ಲಿ ಮಾಡಿದ ಭಾಷಣಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ ಎಂದು ವಿನಯ್ ಹೇಳಿದರು.
ಇವನ್ನೂ ಓದಿ