* ಮುಂದಿನ ತಿಂಗಳು 2 ಮಕ್ಕಳ ಸೇರ್ಪಡೆ
* ವಿಚ್ಛೇದಿತರು, ವಿಧವೆಯರು ಆಗಲ್ಲ
* 63ರ ಹರೆಯ, 100 ಮಕ್ಕಳ ಗುರಿ
ಈತನ ಹೆಸರು ದಾದ್ ಮಹಮದ್ ಅಲ್ ಬಲೂಷಿ. ಈತ ನಿಜಕ್ಕೂ ಸೂಪರ್ ಡ್ಯಾಡ್! ಇವನಿಗೆ 17 ಹೆಂಡತಿಯರು ಮತ್ತು ಅವನಿಗಿರುವ ಒಟ್ಟು ಮಕ್ಕಳ ಸಂಖ್ಯೆ 90. ವಿಶೇಷವೇನೆಂದರೆ, ಮೂಲತಃ ಯುಎಇಯವನಾಗಿರುವ ಆತನಿಗೆ ಈಗ 63ರ ಹರೆಯದಲ್ಲಿ 18ರ ಹರೆಯದ ಭಾರತೀಯ ಪತ್ನಿ ಬೇಕಾಗಿದ್ದಾಳಂತೆ! ಮತ್ತೇನು ವಿಶೇಷ ಅಂತೀರಾ? ಮುಂದಿನ ತಿಂಗಳು ಅವನ ಇಬ್ಬರು ಪತ್ನಿಯರು ಪ್ರಸವಿಸಲಿದ್ದಾರೆ!
ಈತನ ಕುಟುಂಬವನ್ನು ಪರಿಗಣಿಸಿದರೆ ನಮ್ಮ ಗ್ರಾಮೀಣ ಪ್ರದೇಶದ ಒಂದೂರಿನ ಇಡೀ ಜನಸಂಖ್ಯೆಯಷ್ಟಾದೀತು. ಆತ ಈಗ ಚೆನ್ನೈಗೆ ಬಂದಿದ್ದಾನೆ. ಇಲ್ಲಿನ ಸ್ಥಳೀಯ ದೈನಿಕವೊಂದರೊಂದಿಗೆ ಮಾತನಾಡಿದ ಆತ, "ಮುಂದಿನ ತಿಂಗಳು ಜೈಪುರಕ್ಕೆ ಭೇಟಿ ನೀಡಿ, ಅಪಘಾತದಲ್ಲಿ ಕಳೆದುಕೊಂಡ ಒಂದು ಕಾಲಿಗೆ ಕೃತಕ ಕಾಲು ಜೋಡಿಸಬೇಕಾಗಿದೆ. ನನ್ನ ಈ ಭಾರತ ಪ್ರವಾಸದ ವೇಳೆ ಒಬ್ಬ ಭಾರತೀಯ ಪತ್ನಿಯನ್ನು ಹೊಂದುವಾಸೆ ನನಗಿದೆ. ನನ್ನ ಎಲ್ಲ ಹೆಂಡತಿಯರೂ ಅಶಿಕ್ಷಿತರು. ಹೀಗಾಗಿ ಒಬ್ಬ ಸುಶಿಕ್ಷಿತಳಾದ ಮತ್ತು 18ರಿಂದ 22 ವರ್ಷದೊಳಗಿನ ಸುಂದರ ಸುಶೀಲೆ ವಧುವಿಗಾಗಿ ಹುಡುಕಾಟದಲ್ಲಿದ್ದೇನೆ!"
PR
ಹಾಗಿದ್ದರೆ ಭಾರತೀಯ ಹೆಂಡತಿಯೇ ಯಾಕೆ ಬೇಕು? ಕೇಳಿದ್ದಕ್ಕೆ ಆತ ನೀಡುವ ಉತ್ತರ: "ಭಾರತವು ಇಡೀ ಜಗತ್ತಿನ ಗೌರವಕ್ಕೆ ಪಾತ್ರವಾಗುತ್ತಿದೆ ಇಂದು. ನನ್ನನ್ನು ಮದುವೆಯಾಗಲು ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಆದರೆ ನನಗೆ ಭಾರತೀಯ ಹುಡುಗಿಯೇ ಬೇಕು. ಯಾಕೆಂದರೆ ಭಾರತೀಯ ಹೆಂಗಸರಿಗೆ ಮಾನವೀಯತೆ ಇದೆ, ಒಳ್ಳೆಯ ಸಂಸ್ಕಾರವಂತರಾಗಿ ಅವರನ್ನು ಬೆಳೆಸಲಾಗುತ್ತಿದೆ."
ಮುಸಲ್ಮಾನರ ವೈಯಕ್ತಿಕವಾದ ಶರಿಯಾ ಕಾನೂನಿನ ಪ್ರಕಾರ, ಬಲೂಷಿ ಏಕ ಕಾಲಕ್ಕೆ ನಾಲ್ಕು ಹೆಂಡಂದಿರನ್ನು ಹೊಂದಬಹುದಾಗಿದೆ. ಆದರೆ, ಇದೀಗ ಜಗತ್ತು ಸುತ್ತಾಡಿರುವ ಈತ ತಲಾಖ್ ನೀಡುತ್ತಾ, ಪುನಃ ನಿಕಾ (ಮದುವೆ) ಮಾಡಿಕೊಳ್ಳುತ್ತಾ ತನ್ನದೇ ಆದ ರೀತಿಯಲ್ಲಿ ಈ ಕಾನೂನನ್ನು ಪಾಲಿಸುತ್ತಿದ್ದಾನೆ.
ಹಾಗಂತ ಇವನ ವಯಸ್ಸೆಷ್ಟು ಎಂಬ ಕುತೂಹಲವೇ? ಕೇವಲ 63 ಮಾತ್ರ! ಈತನ ಮಾನವೋತ್ಪಾದನಾ ಘಟಕ ಕೆಲಸ ಮಾಡುತ್ತಲೇ ಇದೆ. "ಮುಂದಿನ ತಿಂಗಳು, ಅಲ್ಲಾಹುವಿನ ಕೃಪೆಯಿಂದ, ನಾನು 92 ಮಕ್ಕಳ ಅಪ್ಪನಾಗಲಿದ್ದೇನೆ" ಅಂತ ಅವನೇ ಹೇಳಿಕೊಂಡಿದ್ದಾನೆ! ಇವನಿಗಿರುವ ಮೊಮ್ಮಕ್ಕಳ ಸಂಖ್ಯೆ 50.
ಸದ್ಯಕ್ಕೆ ನನ್ನ ಬಳಿ ಮೂವರು ಪತ್ನಿಯರಿದ್ದಾರೆ ಎಂದಿದ್ದ ಇದೇ ವ್ಯಕ್ತಿ, ಕಳೆದ ವಾರವಷ್ಟೇ ಯುಎಇಯ ಖಲೀಜ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, "ಮುಂದಿನ ತಿಂಗಳು ಪಾಕಿಸ್ತಾನದ ರುಕ್ಸಾನಾ ಆರೀಫಳನ್ನು ಮದುವೆಯಾಗಲಿದ್ದೇನೆ" ಎಂದು ಘೋಷಿಸಿದ್ದ. ಈಗ ಭಾರತಕ್ಕೆ ಬಂದು, ಬೇರೆಯೇ ರಾಗ ಹಾಡುತ್ತಿದ್ದಾನೆ.
ಈ "ಬಿಗ್ ಡ್ಯಾಡಿ" ತನ್ನನ್ನು ತಾನೇ ಜಾಗತಿಕ ಅಪ್ಪ ಎಂದು ಕರೆದುಕೊಳ್ಳುತ್ತಿದ್ದಾನೆ. ಕಾರಣವೆಂದರೆ, ಫಿಲಿಪ್ಪೀನ್ಸ್‌ನಿಂದ ಮೊರೊಕ್ಕೋವರೆಗಿನ ದೇಶಗಳಲ್ಲಿಯೂ ಇವನ ಪತ್ನಿಯರಿದ್ದಾರೆ. "ನಮ್ಮ ಕಾನೂನಿನಲ್ಲಿ ನಾಲ್ಕಕ್ಕಿಂತ ಹೆಚ್ಚು ಪತ್ನಿಯರು ಇರಬಾರದೂಂತ ಹೇಳಿರುವುದು ದುರದೃಷ್ಟಕರ. ಇಲ್ಲವಾದಲ್ಲಿ 20 ಪತ್ನಿರನ್ನು ಮ್ಯಾನೇಜ್ ಮಾಡುತ್ತಿದ್ದೆ" ಎಂದಿರುವ ಆತ, ಎಂದಿಗೂ ವಿಚ್ಛೇದಿತರನ್ನು ಅಥವಾ ವಿಧವೆಯನ್ನು ಮದುವೆಯಾಗಿಲ್ಲ, ಮದುವೆ ಆಗುವುದೂ ಇಲ್ಲ ಎಂದಿದ್ದಾನೆ.
ಪ್ರತಿಯೊಬ್ಬ ಪತ್ನಿಯೂ ತಮ್ಮ ತಮ್ಮ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಂದು ಮನೆಗೂ ಕಾರು ಮತ್ತು ಕೆಲಸದಾಳುಗಳಿದ್ದಾರೆ. "17 ಕುಟುಂಬಕ್ಕೆ 17 ಮನೆಗಳಿವೆ. ಎಲ್ಲರನ್ನೂ ನೋಡಿಕೊಳ್ಳುತ್ತಿದ್ದೇನೆ" ಎಂದಿದ್ದಾನೆ ಈ ಸೂಪರ್ ಡ್ಯಾಡ್. ಅವನ 90 ಮಕ್ಕಳಲ್ಲಿ 60 ಪುತ್ರರು, 30 ಪುತ್ರಿಯರು.
ಈತನ ಸಕುಟುಂಬ ಸಪರಿವಾರವು ಪ್ರತೀ ವಾರ ಮನ್ಮಾ ಎಂಬಲ್ಲಿ ಜೊತೆ ಸೇರುತ್ತದೆ. ಅದು ಅಲ್ ಬಲೂಷಿಯ ಹಳೆಯ ಮನೆ.
"ಬದುಕು ಮತ್ತು ಸಾವು ದೇವರ ಕೈಯಲ್ಲಿದೆ. ನಾನು ಬದುಕಿದರೆ ಖಂಡಿತಾ ಗುರಿ ಸಾಧಿಸುತ್ತೇನೆ" ಎನ್ನುವ ಆತ, ಏನು ಗುರಿ ಎಂದು ಕೇಳಿದಾಗ ಬಂದ ಉತ್ತರ ನಮ್ಮನ್ನು ತತ್ತರಗೊಳಿಸುವಂಥದ್ದು. "ನಾನು ಸಾಯುವ ಮೊದಲು 100 ಮಕ್ಕಳನ್ನಾದರೂ ಹುಟ್ಟಿಸುತ್ತೇನಂತ ಪರಮ ಪೂಜ್ಯರಾದ ದಿವಂಗತ ಅಧ್ಯಕ್ಷ ಶೇಖ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾ ಮತ್ತು ಅಜ್ಮಾನ್‌ನ ದೊರೆ ಪರಮಪೂಜ್ಯ ಶೇಖ್ ಹುಮೇದ್ ಬಿನ್ ರಶೀದ್ ಅಲ್ ನುವಾಯಿಮಿಗೆ ಮಾತು ಕೊಟ್ಟಿದ್ದೇನೆ!"
1995ರಲ್ಲಿ ಅಪಘಾತಕ್ಕೀಡಾಗಿ ಕಾಲು ಮುರಿದುಕೊಂಡಿದ್ದ ಈತ ಜೈಪುರಕ್ಕೆ ಹೋಗಲು ಸಿದ್ಧನಾಗಿದ್ದಾನೆ. ಈತನ ತಂದೆ ಮುರಾಜ್ ಅಬುದ್ಲ್ ರಹಮಾನ್ 110 ವರ್ಷ ಬದುಕಿದ್ರು ಮತ್ತು ಬರೇ ನಾಲ್ಕು ಪತ್ನಿಯರು ಹಾಗೂ 27 ಮಕ್ಕಳನ್ನು ಹೊಂದಿದ್ದರು.