ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆ ಹಾದಿಯಲ್ಲಿ ಬಾಬಾ: ಕೇಂದ್ರದಿಂದ ಒಲಿಸುವ ಯತ್ನ (Anti Corruption Crusade | Swiss Bank | Black Money | Baba Ramdev)
ಅಣ್ಣಾ ಹಜಾರೆ ಬಳಿಕ ಇದೀಗ ಬಾಬಾ ರಾಮದೇವ್ ಸರದಿ. ಆದರೆ ಹಜಾರೆ ಪ್ರಭಾವದಿಂದಾಗಿ ಈಗಾಗಲೇ ಕಂಗೆಟ್ಟಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಯೋಗ ಗುರು ರಾಮದೇವ್ ಜತೆಗೂ ಅದೇ ಸಂಘರ್ಷ ಏರ್ಪಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ.

ಭ್ರಷ್ಟಾಚಾರದ ವಿರುದ್ಧ ಮತ್ತು ಸ್ವಿಸ್ ಮತ್ತಿತರ ತೆರಿಗೆರಹಿತ ದೇಶಗಳಲ್ಲಿನ ಬ್ಯಾಂಕ್‌ಗಳ ರಹಸ್ಯ ಖಾತೆಗಳಲ್ಲಿ ಕೂಡಿಟ್ಟಿರುವ ಕಪ್ಪು ಹಣವನ್ನು ವಾಪಸ್ ತರಲು ಕೇಂದ್ರ ಸರಕಾರವು ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ರಾಮದೇವ್ ಘೋಷಿಸಿರುವುದರಿಂದ, ಸೋಮವಾರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಸಭೆ ಸೇರಿ, ರಾಮದೇವ್ ಮನವೊಲಿಕೆಗೆ ನಿರ್ಧರಿಸಿದೆ.

ಕಪ್ಪು ಹಣಕ್ಕೆ ಸಂಬಂಧಿಸಿ ಈಗಾಗಲೇ ಕೈಗೊಂಡಿರುವ ಕ್ರಮದ ಕುರಿತು ಬಾಬಾ ಅವರಿಗೆ ಮನವರಿಕೆ ಮಾಡಿಸುವ ನಿಟ್ಟಿನಲ್ಲಿ ಕೇಂದ್ರವು ಅವರಿಗೆ ಪತ್ರ ಬರೆಯಲಿದೆ ಮತ್ತು ಉಪವಾಸ ಕೈಬಿಡುವಂತೆ ಒತ್ತಾಯಿಸುವ ದೂತನಾಗಿ ಒಬ್ಬ ಸಚಿವರನ್ನೂ ಕಳುಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಬಾಬಾ ರಾಮದೇವ್ ಅವರು ಅಣ್ಣಾ ಹಜಾರೆಯವರಂಥಲ್ಲ. ಅವರಿಗೆ ರಾಜಕೀಯ ಅಭಿಲಾಷೆಗಳೂ ಇವೆ. ಈಗಾಗಲೇ ಹೊಸ ಪಕ್ಷ ಕಟ್ಟುವ ಕುರಿತು ಮಾತನಾಡಿದ್ದಾರೆ ಮತ್ತು ಅವರಿಗೆ ಈಗಾಗಲೇ ದೇಶಾದ್ಯಂತ ಬೆಂಬಲಿಗರ ಪಡೆಯೂ ಇದೆ. ಇದು ಕಾಂಗ್ರೆಸ್ ಚಿಂತೆಗೆ ಕಾರಣವಾಗಿರುವ ಅಂಶ. ಜೂನ್ 4ರಿಂದ ಭ್ರಷ್ಟಾಚಾರ ವಿರೋಧೀ ಆಂದೋಲನ ಆರಂಭಿಸುವುದಾಗಿ ರಾಮದೇವ್ ಘೋಷಿಸಿದ್ದಾರೆ.

ಸಭೆ ಸೇರಿದ ಸಂಪುಟ ಸಮಿತಿಯು, ಈ ವಿಷಯದಲ್ಲಿ ಆರೆಸ್ಸೆಸ್ ಕೂಡ ಇರುವುದರ ಕುರಿತು ಚರ್ಚಿಸಿತು. ವಿದೇಶದಲ್ಲಿರುವ ಕಪ್ಪು ಹಣ ವಾಪಸಾತಿ ವಿಷಯವು ಸಂಘ ಪರಿವಾರಕ್ಕೂ ಅತ್ಯಾಪ್ತ ಸಂಗತಿಯಾಗಿರುವುದರಿಂದ ಅದು ರಾಮದೇವ್ ಹೋರಾಟಕ್ಕೆ ಬೆಂಬಲ ನೀಡಲು ಉತ್ಸುಕವಾಗಿದೆ. ಅಣ್ಣಾ ಹಜಾರೆ ನಡೆಸಿದ ಆಂದೋಲನವು ದೇಶಾದ್ಯಂತ ಅಲೆ ಎಬ್ಬಿಸಿರುವುದರಿಂದ ಪಾಠ ಕಲಿತಿರುವ ಪ್ರಧಾನಿ ಮನಮೋಹನ್ ಸಿಂಗ್, ಈ ಬಾರಿ ತಪ್ಪಿ ಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಎರಡು ಗಂಟೆ ಕಾಲ ಪ್ರಧಾನಿ ನೇತೃತ್ವದ ಸಮಿತಿಯು ಈ ಕುರಿತು ಚರ್ಚಿಸಿತ್ತು.
ಇವನ್ನೂ ಓದಿ