ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ವ್ಯಾಪ್ತಿಗೆ ಪ್ರಧಾನಿ: ಬಾಬಾ ರಾಮದೇವ್ ಅಪಸ್ವರ
(Lok Pal | Prime Minister | Baba Ramadev | Anna Hazare | Corruption)
ಲೋಕಪಾಲ ವ್ಯಾಪ್ತಿಗೆ ಪ್ರಧಾನಿ: ಬಾಬಾ ರಾಮದೇವ್ ಅಪಸ್ವರ
ಸೇಹೋರ್ (ಮಧ್ಯಪ್ರದೇಶ), ಮಂಗಳವಾರ, 31 ಮೇ 2011( 16:02 IST )
ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನ ಮಂತ್ರಿ ಹಾಗೂ ನ್ಯಾಯಾಂಗದ ಉನ್ನತಾಧಿಕಾರಿಗಳನ್ನು ಸೇರ್ಪಡಿಸುವ ವಿಚಾರದಲ್ಲಿ ನಾಗರಿಕ ಸಮಾಜದಲ್ಲಿ ಭಿನ್ನಾಭಿಪ್ರಾಯ ಎದ್ದಿದೆಯೋ ಎಂದು ತೋರುತ್ತಿದ್ದು, ಯೋಗ ಗುರು, ಈಗಾಗಲೇ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಬಾಬಾ ರಾಮದೇವ್ ಅವರಿಂದ ಅಪಸ್ವರ ಕೇಳಿಬಂದಿದೆ.
ಕಪ್ಪು ಹಣ ವಾಪಸ್ ತರಿಸುವಂತೆ ಮಾಡಲು ಆಮರಣಾಂತ ನಿರಶನ ಸತ್ಯಾಗ್ರಹ ಘೋಷಿಸಿರುವ ರಾಮದೇವ್ ಅವರನ್ನು ಸಂತೈಸಲು ಈಗಾಗಲೇ ಕೇಂದ್ರ ಸಚಿವ ಪ್ರಣಬ್ ಮುಖರ್ಜಿಯವರನ್ನೇ ಕೇಂದ್ರ ಸರಕಾರವು ನಿಯೋಜಿಸಿದೆ. ಆದರೆ, ಪ್ರಧಾನಮಂತ್ರಿ ಹಾಗೂ ಭಾರತದ ಮುಖ್ಯ ನ್ಯಾಯಾಧೀಶರನ್ನು ಲೋಕಪಾಲ ಕಾಯಿದೆಯ ವ್ಯಾಪ್ತಿಗೆ ಹೇಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ರಾಮದೇವ್ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆದರೂ, ತಾನು ವಿವಾದಾತ್ಮಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲಾರೆ ಮತ್ತು ಈ ಬಗ್ಗೆ ಸಾರ್ವಜನಿಕ ಚರ್ಚೆಯಾಗಲೂ ತಾನು ಬಯಸುವುದಿಲ್ಲ ಎಂದಿದ್ದಾರೆ ಬಾಬಾ ರಾಮದೇವ್.
ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ನಡೆಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಬೆಂಬಲ ನೀಡಿದ್ದ ಬಾಬಾ ರಾಮದೇವ್, ಸರಕಾರವು ತನ್ನ ಬೇಡಿಕೆಗೆ ಮಣಿಯುವವರೆಗೂ ಜೂನ್ 4ರಿಂದ ಆರಂಭಿಸುವ ತನ್ನ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಬಾಬಾ ಮನವೊಲಿಸುತ್ತೇವೆ: ಕೇಜ್ರಿವಾಲ್ ಬಾಬಾ ರಾಮದೇವ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಲೋಕಪಾಲ ಕರಡು ಸಮಿತಿಯ ನಾಗರಿಕ ಸಮಾಜದ ಸದಸ್ಯರಲ್ಲೊಬ್ಬರಾದ ಅರವಿಂದ ಕೇಜ್ರಿವಾಲ್, ಲೋಕಪಾಲ ವ್ಯಾಪ್ತಿಗೆ ಪ್ರಧಾನಿ ಹುದ್ದೆಯನ್ನೂ ಸೇರ್ಪಡಿಸುವ ಕುರಿತು ಬಾಬಾ ರಾಮದೇವ್ ಅವರ ಮನವೊಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹುಶಃ ಈ ವಿಷಯದ ಪೂರ್ಣ ಪರಿಣಾಮಗಳು ಬಾಬಾ ಅವರ ಗಮನಕ್ಕೆ ಬಂದಿರಲಾರದು ಎಂದ ಕೇಜ್ರಿವಾಲ್, ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಟ್ಟರೆ, ಅವರ ಕೈಕೆಳಗಿರುವ ಹತ್ತಾರು ಇಲಾಖೆಗಳು ಕೂಡ ಭ್ರಷ್ಟಾಚಾರ ವಿರೋಧಿ ಕಾನೂನಿನಿಂದ ಸಹಜವಾಗಿ ತಪ್ಪಿಸಿಕೊಳ್ಳುತ್ತವೆ. ಹೀಗಾಗಿ ಬೇರೆ ಮಂತ್ರಿಗಳು, ಲಂಚವನ್ನು ಪ್ರಧಾನಿಗೇ ರವಾನಿಸುವಂತೆ ಕೇಳಿಕೊಳ್ಳಬಹುದು. ಪ್ರಧಾನಿಯೇ ಭ್ರಷ್ಟರಾಗಿಬಿಟ್ಟರೆ, ಬೇರೇನೂ ಮಾಡಲಾಗದು ಎಂದು ಕೇಜ್ರಿವಾಲ್ ವಿವರಿಸಿದರು.