ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ: ಈಗ ಕೇಂದ್ರ ಮಂತ್ರಿ ಮಾರನ್ ಸರದಿ! (2G Scam | Dayanidhi Maran | DMK | UPA | Raja | Maxis)
2ಜಿ ಹಗರಣವು ಕೇಂದ್ರದ ಮತ್ತೊಂದು ಸಚಿವರ ನೆತ್ತಿಯ ಮೇಲೆ ತೂಗುಗತ್ತಿ ಇರಿಸಿದೆ. ಅದು ಕೂಡ ಡಿಎಂಕೆ ಪಕ್ಷದ ಸಚಿವ, ಹಿಂದೆ ಟೆಲಿಕಾಂ ಸಚಿವರಾಗಿದ್ದ, ಈಗ ಜವಳಿ ಖಾತೆ ಸಚಿವರಾಗಿರುವ ದಯಾನಿಧಿ ಮಾರನ್ ಮೇಲೆ.

ತೆಹಲ್ಕಾ ವರದಿ ಪ್ರಕಾರ, ದಯಾನಿಧಿ ಮಾರನ್ ಅವರು 2006ರಲ್ಲಿ ಕೆಲವು ಕಂಪನಿಗಳಿಗೆ ಉದ್ದೇಶಪೂರ್ವಕವಾಗಿ ಸ್ಪೆಕ್ಟ್ರಂ ವಿತರಣೆಗೆ ವಿಳಂಬಿಸಿದ್ದರು ಮತ್ತು ಏರ್‌ಸೆಲ್ ಕಂಪನಿಗೆ ಲೈಸೆನ್ಸ್ ವಿತರಣೆ ಮಾಡಿದ್ದರಲ್ಲಿ ಅವರ ಪಾತ್ರದ ಬಗೆಗೂ ಆರೋಪಗಳಿವೆ. ಈ ರೀತಿ ವಿಳಂಬ ಮಾಡಿದ್ದರಿಂದಾಗಿಯೇ, ದಯಾನಿಧಿ ಮಾರನ್ ಕುಟುಂಬದ ಒಡೆತನದ ಸನ್ ಟಿವಿಯಲ್ಲಿ ಪಾಲುದಾರಿಕೆ ಹೊಂದಿರುವ ಮ್ಯಾಕ್ಸಿಸ್ ಕಂಪನಿ ಜೊತೆ ಏರ್‌ಸೆಲ್ ಒಪ್ಪಂದ ಮಾಡಿಕೊಳ್ಳಲು ಕಾರಣವಾಯಿತು ಎಂದು ತೆಹಲ್ಕಾ ವರದಿ ಮಾಡಿತ್ತು.

ಧ್ವನಿಯೆತ್ತಿತು ಬಿಜೆಪಿ...
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ದಯಾನಿಧಿ ಮಾರನ್‌ಗೆ ಪ್ರಶ್ನೆಗಳನ್ನು ಕೇಳಿದೆ. ದಯಾನಿಧಿ ಮಾರನ್ ಕುಟುಂಬದ ಒಡೆತನದ ಸನ್ ಟಿವಿ ಕಂಪನಿಯಲ್ಲಿ ಮ್ಯಾಕ್ಸಿಸ್ ಕಮ್ಯುನಿಕೇಶನ್ ಸಂಸ್ಥೆಯು ಅಪಾರ ಹಣ ಹೂಡಿರುವುದು ನಿಜವೇ? ಎರಡನೆಯದಾಗಿ, ಈ ಹೂಡಿಕೆ ಮಾಡಿರುವುದು ಮ್ಯಾಕ್ಸಿಸ್ ಸಂಸ್ಥೆಯು ಏರ್‌ಸೆಲ್ ಕಂಪನಿಯನ್ನು ಖರೀದಿಸುವ ಮೊದಲು ಅಥವಾ ನಂತರವೇ? ಇದು ನಿಜವೇ ಆಗಿದ್ದರೆ, ಹಿತಾಸಕ್ತಿಯ ನೇರ ಸಂಘರ್ಷವಲ್ಲವೇ? ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.

ಮಾರನ್‌ರಿಂದ ದೂರ ಸರಿದ ಕಾಂಗ್ರೆಸ್
ಆದರೆ, ಕಾಂಗ್ರೆಸ್ ಈಗ ದಯಾನಿಧಿ ಮಾರನ್ ಅವರಿಂದ ತನ್ನನ್ನು ದೂರೀಕರಿಸಿಕೊಳ್ಳತೊಡಗಿದೆ. ಬಿಜೆಪಿ ಪ್ರಶ್ನೆಗಳ ಬಗ್ಗೆ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪ್ರತಿಕ್ರಿಯಿಸುತ್ತಾ, ಈ ಪ್ರಶ್ನೆಗಳಿಗೆ ಜವಳಿ ಸಚಿವರಾಗಿರುವ ಮಾರನ್ ಅವರೇ ಉತ್ತರ ಹೇಳಬೇಕಷ್ಟೇ ಎಂದಿದ್ದಾರೆ.

ಆದರೆ, ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಈಗ ತನ್ನ ಕೆಲಸ (2ಜಿ ಹಗರಣದ ತನಿಖೆ) ಮಾಡುತ್ತಿದೆ. ವರ್ಷಗಳಿಂದ ನಡೆದುಕೊಂಡು ಬಂದಿರುವ ಟೆಲಿಕಾಂ ನೀತಿಗಳನ್ನು ಅದು ಪರಿಶೀಲಿಸಲಿದೆ ಎಂದು ತಿವಾರಿ ಹೇಳಿದ್ದಾರೆ.

ತಮಿಳುನಾಡಿನ ಮತ್ತೊಂದು ಪ್ರಭಾವಿ ರಾಜಕಾರಣಿ
2ಜಿ ಹಗರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರಿ ಕನಿಮೊಳಿ ಮುಖ್ಯಸ್ಥರಾಗಿರುವ ಕಲೈಞ್ಞರ್ ಟಿವಿಗೆ 213 ಕೋಟಿ ಹಣ ಸಂದಾಯವಾಗಿದೆ ಎಂಬ ಆರೋಪಗಳ ಆಧಾರದಲ್ಲಿ ಆಕೆಯೀಗ ಜೈಲಿನಲ್ಲಿದ್ದಾರೆ. ಇದೀಗ ಡಿಎಂಕೆ ಒಡೆತನದ ಮತ್ತೊಂದು ಟಿವಿ ಗ್ರೂಪ್ ಕೂಡ ವಿವಾದದ ಸುಳಿಯಲ್ಲಿ ಸಿಲುಕಿದಂತಾಗಿದೆ.

ತೆಹಲ್ಕಾ ವರದಿ ಪ್ರಕಾರ, 700 ಕೋಟಿ ರೂಪಾಯಿ ಹಣವು ಸನ್ ಟಿವಿಯಲ್ಲಿ ಮ್ಯಾಕ್ಸಿಸ್ ಕಂಪನಿ ಹೂಡಿಕೆ ಮಾಡಿದೆ. ಈ ಕಾರಣಕ್ಕೆ ತೆಹಲ್ಕಾ ಮಾಧ್ಯಮ ಸಂಸ್ಥೆಗೆ ಮಾರನ್ ಅವರು ಕಾನೂನು ನೋಟೀಸ್ ಜಾರಿ ಮಾಡಿದ್ದಾರೆ. ಈ ವರದಿಯೆಲ್ಲವೂ ಸುಳ್ಳು, ಅವಮಾನಕಾರಿ ಮತ್ತು ದುರುದ್ದೇಶಪೂರಿತ ಎಂದು ಮಾರನ್ ಹೇಳಿದ್ದಾರೆ.

ಈಗಾಗಲೇ ಡಿಎಂಕೆ ಸಚಿವ ಎ.ರಾಜಾ ಅವರು ತಿಹಾರ್ ಜೈಲು ಸೇರಿದ್ದಾರೆ, ಐದು ಉದ್ಯಮಪತಿಗಳು ಕೂಡ ತಿಹಾರ್ ಜೈಲಿಗೆ ಹೋಗಿದ್ದಾರೆ. ಕನಿಮೊಳಿ, ಬಾಲಿವುಡ್ ಉದ್ಯಮಿ ಕರೀಂ ಮೊರಾನಿ ಕೂಡ ಜೈಲು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ರಾಜಕೀಯ ವ್ಯಕ್ತಿಯ ಹೆಸರು ಕೂಡ ಕೇಳಿಬರತೊಡಗಿರುವುದು ರಾಜಕೀಯ ಸಂಚಲನ ಮೂಡಿಸಿದೆ.
ಇವನ್ನೂ ಓದಿ