ತಾನು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಣಯಗಳು ಯಾವುದೇ ರೀತಿಯಲ್ಲಿಯೂ ತನ್ನ ಸಹೋದರನ ಸನ್ ಟಿವಿ ನೆಟ್ವರ್ಕ್‌ಗೆ ಸಹಾಯಕವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಟೆಲಿಕಾಂ ಸಚಿವ, ಹಾಲಿ ಜವಳಿ ಸಚಿವ, ಡಿಎಂಕೆ ನಾಯಕ ದಯಾನಿಧಿ ಮಾರನ್, ಆರೋಪಗಳು ಆಧಾರರಹಿತವಾಗಿದ್ದು, ಆರೋಪಿತ ಆಸ್ಟ್ರೋ ಕಂಪನಿಯು ಸನ್ ನೆಟ್ವರ್ಕ್‌ನಲ್ಲಿ ಹೂಡಿಕೆ ಮಾಡುವಾಗ ತಾನಿನ್ನೂ ಮಂತ್ರಿಯೇ ಆಗಿರಲಿಲ್ಲ ಎಂದು ಹೇಳಿದ್ದಾರೆ.
ಬುಧವಾರ ಹಾಲಿ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರನ್ನು ಭೇಟಿಯಾದ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಮಾರನ್, ತಾನು ಕೇಂದ್ರ ಟೆಲಿಕಾಂ ಸಚಿವನಾಗಿದ್ದ ಅವಧಿಯಲ್ಲಿ ಕೇಂದ್ರದ ಖಜಾನೆಗೆ ಯಾವುದೇ ರೀತಿಯಲ್ಲಿಯೂ ನಷ್ಟವಾಗಿಲ್ಲ. ಸನ್ ನೆಟ್ವರ್ಕ್‌ನಲ್ಲಿಯೂ ನನಗೆ ಯಾವುದೇ ಶೇರುಗಳಿಲ್ಲ ಎಂದು ಹೇಳಿದರು.
ಮಾರನ್ ಸಹೋದರ ಕಲಾನಿಧಿ ಮಾರನ್‌ಗೆ ಸೇರಿದ ಸನ್ ನೆಟ್ವರ್ಕ್ ಸಂಸ್ಥೆಯು ಟೆಲಿಕಾಂ ಸಚಿವರಾಗಿ ದಯಾನಿಧಿ ಕೈಗೊಂಡ ನಿರ್ಣಯದಿಂದ ಲಾಭ ಗಳಿಸಿದೆ ಎಂದು ಬಿಜೆಪಿಯು ತೆಹಲ್ಕಾ ವರದಿಯನ್ನು ಉಲ್ಲೇಖಿಸಿ ಆರೋಪಿಸಿತ್ತು. ಮಾರನ್ ಅವರು ಮೇ 2004ರಿಂದ ಮೇ 2007ರವರೆಗೆ ಟೆಲಿಕಾಂ ಸಚಿವರಾಗಿದ್ದರು.
ಬಿಜೆಪಿ ಆರೋಪದ ಪ್ರಕಾರ, ಮಲೇಷ್ಯಾದ ಮ್ಯಾಕ್ಸಿಸ್ ಕಮ್ಯುನಿಕೇಶನ್ ಕಂಪನಿಯ ಅಂಗ ಸಂಸ್ಥೆ ಆಸ್ಟ್ರಾ, ಮಾರನ್ ಟೆಲಿಕಾಂ ಸಚಿವರಾಗಿದ್ದಾಗ ಏರ್‌ಸೆಲ್‌ನ ಶೇ.74 ಶೇರುಗಳನ್ನು ಖರೀದಿಸಿತ್ತು. ಬಳಿಕ ಅದಕ್ಕೆ ಹೆಚ್ಚು ಸರ್ಕಲ್‌ಗಳಲ್ಲಿ ಕಾರ್ಯಾಚರಣೆಗೆ ಅನುಮತಿ ನೀಡಲಾಯಿತು ಎಂಬುದು ಬಿಜೆಪಿ ಆರೋಪ. ಮ್ಯಾಕ್ಸಿಸ್ ಕಂಪನಿಯು ಸನ್ ನೆಟ್ವರ್ಕ್‌ನ ಸನ್ ಡಿಟಿಎಚ್ ವಿಭಾಗದಲ್ಲಿ 600 ಕೋಟಿ ರೂ. ಹೂಡಿಕೆ ಮಾಡಿತ್ತು.
ಮೂಲಗಳ ಪ್ರಕಾರ, ಸಿಬಿಐ ಶೀಘ್ರವೇ ದಯಾನಿಧಿ ಮಾರನ್ ಅವರನ್ನು ವಿಚಾರಣೆಗೆ ಗುರಿಪಡಿಸಲಿದ್ದು, ಚಾರ್ಜ್ ಶೀಟ್ ಕೂಡ ಸಲ್ಲಿಸಲಿದೆ ಎನ್ನಲಾಗುತ್ತಿದೆ.