ಡಿಎನ್‌ಎ ಪರೀಕ್ಷೆಗಾಗಿ ತಾವು ರಕ್ತದ ಮಾದರಿಯನ್ನು ನೀಡುವುದಿಲ್ಲ ಎಂದು ಸೆಕ್ಸ್ ಕಾಂಡದಲ್ಲಿ ಸಿಲುಕಿಕೊಂಡಿರುವ ಮಾಜಿ ರಾಜ್ಯಪಾಲ ಹಾಗೂ ಕಾಂಗ್ರೆಸ್ ಮುಖಂಡ ಎನ್.ಡಿ.ತಿವಾರಿ ತಿಳಿಸಿದ್ದಾರೆ. ಯುವಕನೊಬ್ಬ ತಾನು ಎನ್.ಡಿ.ತಿವಾರಿ ಅವರ ಪುತ್ರ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿಚಾರಣೆ ನಡೆಯುತ್ತಿದೆ.
ತಿವಾರಿ ಅವರು ರಕ್ತದ ಮಾದರಿಯನ್ನು ನೀಡಬೇಕು ಎಂದು ಮೇ 10 ರಂದು ನ್ಯಾಯಾಲಯ ಆದೇಶ ನೀಡಿತ್ತು. ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ತಿವಾರಿ ಈ ರೀತಿಯಲ್ಲಿ ಸಾಕ್ಷ್ಯ ಒದಗಿಸಲು ತಮ್ಮನ್ನು ಯಾರೂ ಒತ್ತಾಯಿಸುವಂತಿಲ್ಲ ಎಂದು ಹೇಳಿದ್ದಾರೆ.
85 ವರ್ಷದ ತಿವಾರಿ ಅವರ ಪರ ವಕೀಲರು ಜಂಟಿ ರಿಜಿಸ್ಟ್ರಾರ್ ದೀಪಕ್ ಗಾರ್ಗ್ ಅವರಿಗೆ ಅರ್ಜಿ ಸಲ್ಲಿಸಿ, ತಿವಾರಿ ಅವರು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಹಾಗೂ ರಕ್ತದ ಮಾದರಿ ನೀಡುವುದರಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
ತಿವಾರಿ ಅವರ ಪರ ವಕೀಲರು ಸಲ್ಲಿಸಿದ್ದು ಅರ್ಜಿಯ ಕುರಿತು ಜಂಟಿ ರಿಜಿಸ್ಟ್ರಾರ್ ಇದೀಗ ನ್ಯಾಯಾಲಯಕ್ಕೆ ಕಳುಹಿಸಲಿದ್ದು, ಜುಲೈ 7ರಂದು ರೆಗ್ಯುಲರ್ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಈ ಬಗ್ಗೆ ಆದೇಶ ಹೊರಬೀಳಲಿದೆ.
ನಾನು ತಿವಾರಿ ಅವರ ಪುತ್ರ ಎಂದು ಹೇಳಿಕೊಂಡಿರುವ 31 ವರ್ಷದ ರೋಹಿತ್ ಶೇಖರ್ ಅವರ ಪರ ವಕೀಲರು ವಾದಿಸಿದ್ದು, ತಿವಾರಿ ಅವರು ವಿಚಾರಣೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಪೀಠ, ಸುಪ್ರೀಂಕೋರ್ಟ್ ವಿಭಾಗೀಯ ಪೀಠವು ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ನೀಡುವಂತೆ ತಿವಾರಿ ಅವರಿಗೆ ಸೂಚಿಸಿತ್ತು ಎಂದು ರೋಹಿತ್ ಪರ ವಕೀಲರು ತಿಳಿಸಿದ್ದಾರೆ.