ಲೋಕಪಾಲ ಮಸೂದೆ ಕರಡು ಕುರಿತು ಕೇಂದ್ರ ಸರಕಾರವು ನಾಗರಿಕ ಹಕ್ಕುಗಳ ಹೋರಾಟಗಾರರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿರುವ ಅಣ್ಣಾ ಹಜಾರೆ, ವಿದೇಶದಲ್ಲಿ ರಾಶಿಬಿದ್ದಿರುವ ಕಪ್ಪು ಹಣ ವಾಪಸಾತಿ ಹಾಗೂ ಭ್ರಷ್ಟಾಚಾರದ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ನಡೆಸಲಿರುವ ನಿರಶನಕ್ಕೆ ತಮ್ಮ ಬೆಂಬಲವನ್ನೂ ಘೋಷಿಸಿದ್ದಾರೆ. ಇದರೊಂದಿಗೆ ಕೇಂದ್ರ ಸರಕಾರವು ದುಪ್ಪಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ.
ನಾಗರಿಕ ಸಮಾಜದ ಸದಸ್ಯರ ನಡುವೆ ಒಡಕುಂಟು ಮಾಡಲು ಕೇಂದ್ರ ಸರಕಾರವು ಪ್ರಯತ್ನಿಸುತ್ತಿದೆ ಎಂಬ ವರದಿಗಳ ನಡುವೆಯೇ, ಬಾಬಾ ರಾಮದೇವ್‌ಗೆ ಅಣ್ಣಾ ಹಜಾರೆ ನೇರ ಬೆಂಬಲ ಘೋಷಿಸಿರುವುದು ಕೇಂದ್ರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದು, ಈ ಕುರಿತು ಚರ್ಚೆಗೆ ಇಂದು ಸಂಪುಟ ಸಭೆ ಸೇರುತ್ತಿದೆ.
ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕುವಲ್ಲಿ ಸರಕಾರವು ಬದ್ಧತೆಯಿಂದ ದೂರವಾಗುತ್ತಿದೆ ಎಂದಿರುವ ಅಣ್ಣಾ ಹಜಾರೆ, ನಾನು ಬಾಬಾ ರಾಮದೇವ್ ಅವರನ್ನು ಜೂ.5ರಂದು ಕೂಡಿಕೊಳ್ಳುತ್ತೇನೆ. ಇದು ಭ್ರಷ್ಟಾಚಾರ ವಿರುದ್ಧದ ಹೋರಾಟ. ಸರಕಾರ ನಮಗೆ ಮೋಸ ಮಾಡಲು ಯತ್ನಿಸಿದೆ. ನಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಸರಕಾರ ಹೇಳಿದೆ ಎಂದು ಗುರುವಾರ ನುಡಿದ ಹಜಾರೆ, ಮುಂದಿನ ಹೋರಾಟದ ಕುರಿತು ಬಾಬಾ ರಾಮದೇವ್ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ನಾವು ನಿರಶನ ಕೈಗೊಂಡಾಗ ಮಾಡಿದಂತೆ ಸರಕಾರವು ಮಾಡಬಾರದು. ಈ ಕಾರಣಕ್ಕಾಗಿ ನಾನು ರಾಮದೇವ್ ಜತೆ ಸೇರುತ್ತಿದ್ದೇನೆ. ಒಟ್ಟಾಗಿ ಭ್ರಷ್ಟಾಚಾರ ವಿರುದ್ಧ ಹೋರಾಡುತ್ತೇವೆ ಎಂದ ಹಜಾರೆ, ಇನ್ನು ಮುಂದೆ ಬಾಯಿ ಮಾತಿನ ಭರವಸೆಗಳಿಗೆ ಎಂದಿಗೂ ಸೊಪ್ಪು ಹಾಕುವುದಿಲ್ಲ ಎಂದರು.
ಬಾಬಾ ರಾಮದೇವ್ ಅವರಿಗೂ ದೇಶಾದ್ಯಂತ ಕೋಟ್ಯಂತರ ಬೆಂಬಲಿಗರು ಇದ್ದು, ಅಣ್ಣಾ ಹಜಾರೆಯವರ ಹೋರಾಟಕ್ಕೆ ರಾಷ್ಟ್ರದೆಲ್ಲೆಡೆ ಭಾರೀ ಜನ ಬೆಂಬಲ ವ್ಯಕ್ತವಾಗಿರುವುದರಿಂದ ಕೇಂದ್ರದ ಯುಪಿಎ ಸರಕಾರವು ಇದೀಗ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಯ ಒತ್ತಡದಲ್ಲಿ ಸಿಲುಕಿದೆ.