ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಾ ಹಿಂದಿನ 'ರಾಜ': 323 ಫೋನ್ ಹೊಂದಿದ್ದ ಮಾರನ್! (2G Scam | Dayanidhi Maran | BSNL | CBI | Raja)
2ಜಿ ಟೆಲಿಕಾಂ ತರಂಗ ಗುಚ್ಛವನ್ನು ಬೇಕು ಬೇಕಾದವರಿಗೆ ಅತಿ ಕಡಿಮೆ ಬೆಲೆಯಲ್ಲಿ ಕೊಡಿಸುವ ಮೂಲಕ ದೇಶದ ಖಜಾನೆಗೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಎಲ್ಲರೂ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರನ್ನೇ ಬೆಟ್ಟು ಮಾಡಿ ತೋರಿಸುತ್ತಿರುವ ಹಂತದಲ್ಲಿ, ಅವರಿಗಿಂತ ಹಿಂದೆ ಈ ಖಾತೆ ನಿರ್ವಹಿಸುತ್ತಿದ್ದ ಡಿಎಂಕೆ ಮತ್ತೊಬ್ಬ ಪ್ರಭಾವೀ ನಾಯಕ ದಯಾನಿಧಿ ಮಾರನ್ ಕೂಡ ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಂಡು ಬಿಎಸ್ಎನ್ಎಲ್ ಅನ್ನು ಲೂಟಿ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ಈ ಆಘಾತಕಾರಿ ವರದಿಗಳ ಪ್ರಕಾರ, ಮಾರನ್ ಅವರು ಚೆನ್ನೈಯಲ್ಲಿರುವ ತಮ್ಮ ಮನೆಯೊಂದರಲ್ಲಿಯೇ 323 ದೂರವಾಣಿ ಸಂಪರ್ಕಗಳನ್ನು ಸ್ಥಾಪಿಸುವ ಮೂಲಕ ಒಂದು ಖಾಸಗಿ ಟೆಲಿಫೋನ್ ಎಕ್ಸ್‌ಚೇಂಜನ್ನೇ ನಿರ್ಮಿಸಿಕೊಂಡಿದ್ದರು. ಅಧಿಕೃತ ಉದ್ದೇಶಕ್ಕಾಗಿ ಅಲ್ಲದಿರುವ ಈ ದೂರವಾಣಿ ಲೈನುಗಳೆಲ್ಲವೂ ಬಿಎಸ್ಎನ್ಎಲ್ ಚೆನ್ನೈಯ ಮುಖ್ಯ ಮಹಾ ವ್ಯವಸ್ಥಾಪಕ (ಸಿಜಿಎಂ) ಹೆಸರಲ್ಲೇ ಇದ್ದುದು ವಿಶೇಷ.

ಎಲ್ಲ 323 ಲೈನುಗಳು ಕೂಡ ಮಾರನ್ ಅವರ ಕುಟುಂಬದ ವ್ಯವಹಾರಗಳಿಗಾಗಿ ಬಳಕೆಯಾಗುತ್ತಿದ್ದು, ಇದಕ್ಕಾಗಿಯೇ ಪ್ರಾದೇಶಿಕ ಬಿಎಸ್ಎನ್ಎಲ್ ಕಚೇರಿಯು 3.4 ಕಿ.ಮೀ. ಉದ್ದದ ಕೇಬಲ್‌ಗಳನ್ನು ಅವರ ಮನೆಯಿರುವ ಬೋಟ್ ಕ್ಲಬ್‌ನಿಂದ ಅಣ್ಣಾ ಸಾಲೈಯಲ್ಲಿ ಇರುವ ಸನ್ ಟಿವಿ ಕಚೇರಿವರೆಗೆ ಅಳವಡಿಸಿತ್ತು. ಅದೂ ಉಚಿತವಾಗಿ ಎನ್ನುತ್ತದೆ ಸಿಬಿಐ ವರದಿ. ಸನ್ ಟಿವಿಯು ದಯಾನಿಧಿ ಅವರ ಸಹೋದರ ಕಲಾನಿಧಿ ಮಾರನ್ ಒಡೆತನದಲ್ಲಿದೆ. ಈ ಕುರಿತು ಸಿಬಿಐ ತನಿಖೆ 2007ರ ಸೆಪ್ಟೆಂಬರ್ 10ರಂದು ನಡೆಸಿ ಟೆಲಿಕಾಂ ಕಾರ್ಯದರ್ಶಿಯ ಅವಗಾಹನೆಗೂ ತಂದಿತ್ತಲ್ಲದೆ, ಮಾರನ್ ಈ ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು. ಇದಕ್ಕಾಗಿ ಅಳವಡಿಸಲಾಗಿದ್ದ ಭೂಗತ ಕೇಬಲ್‌ಗಳೇನೂ ಸಾಮಾನ್ಯದ್ದಾಗಿರಲಿಲ್ಲ. ಟಿವಿ ಕಾರ್ಯಕ್ರಮಗಳನ್ನು ಸುಲಲಿತವಾಗಿ ಪ್ರಸಾರ ಮಾಡಬಲ್ಲ ಅತ್ಯಂತ ದುಬಾರಿ ಐಎಸ್‌ಡಿಎನ್ ಲೈನುಗಳಾಗಿದ್ದವು ಅವು.

ಸಚಿವರಿಗಾಗಿಯೇ ರಚಿಸಲಾಗಿದ್ದ ಈ "ಖಾಸಗಿ ದೂರವಾಣಿ ವಿನಿಮಯ" ವ್ಯವಸ್ಥೆಯ ಬಗ್ಗೆ ಬಿಎಸ್ಎನ್ಎಲ್ ಸಿಬ್ಬಂದಿಗಳಲ್ಲೇ ಹೆಚ್ಚಿನವರಿಗೆ ಗೊತ್ತಿಲ್ಲ. ಈ ಲೈನುಗಳ ಮೂಲಕ ಮಾಡಲಾದ ಕರೆಗಳು, ಬಹುಮಾಧ್ಯಮ (ಮಲ್ಟಿಮೀಡಿಯಾ) ಡೇಟಾ ವರ್ಗಾವಣೆ ಇವೆಲ್ಲವನ್ನೂ ಲೆಕ್ಕಾಚಾರ ಹಾಕಿದ ಸಿಬಿಐ, ದೇಶದ ಖಜಾನೆಗೆ ಇದರಿಂದ ಸುಮಾರು 630 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಿದೆ.

ಸಿಬಿಐ ತನಿಖೆ ನಡೆದದ್ದು ಹೇಗೆ?
ಎಲ್ಲವೂ ತಮಿಳುನಾಡು ರಾಜಕೀಯ. ಅಂದು, ಕಲಾನಿಧಿ ಮಾರನ್ ಒಡೆತನದ ತಮಿಳು ಪತ್ರಿಕೆ "ದಿನಕರನ್" ತಮಿಳುನಾಡಿನಲ್ಲಿ ಸಮೀಕ್ಷೆ ನಡೆಸಿ, ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯ ಹಿರಿಯ ಪುತ್ರ ಅಳಗಿರಿಯ ಜನಪ್ರಿಯತೆ ತೀರಾ ಕಡಿಮೆ, ರಾಜ್ಯ ರಾಜಕೀಯದಲ್ಲಿ ಅವರಿಗೆ ಬೆಂಬಲವೇ ಇಲ್ಲ ಎಂಬರ್ಥದ ವರದಿ ಪ್ರಕಟಿಸಿತ್ತು. (ಈ ಮಾರನ್ ಕುಟುಂಬಿಕರು ಬೇರಾರೂ ಅಲ್ಲ. ಕರುಣಾನಿಧಿಯ ಸಹೋದರಿಯ ಮಗ ಮುರಸೊಳಿ ಮಾರನ್ ಅವರ ಪುತ್ರರು ದಯಾನಿಧಿ ಮತ್ತು ಕಲಾನಿಧಿ.) ಈ ವರದಿಯು ಕರುಣಾ ಕುಟುಂಬದಲ್ಲಿ ಒಡಕು ಸೃಷ್ಟಿಸಿತು. ದಯಾನಿಧಿ ಮಾರನ್ ಅವರನ್ನು ಪಕ್ಷದಿಂದಲೇ ಹೊರ ಹಾಕಲಾಯಿತು ಮತ್ತು ಅದೇ ಹೊತ್ತಿಗೆ ಅವರು ಕೇಂದ್ರದ ಟೆಲಿಕಾಂ ಮಂತ್ರಿ ಪಟ್ಟಕ್ಕೂ ರಾಜೀನಾಮೆ ನೀಡಬೇಕಾಯಿತು. ಆ ಸಂದರ್ಭದಲ್ಲಿಯೇ ಸಿಬಿಐ ತನಿಖೆ ನಡೆದಿತ್ತು. ಕರುಣಾನಿಧಿ ಮತ್ತು ಮಾರನ್ ಕುಟುಂಬ ಮುಖ ಮುಖ ನೋಡುತ್ತಿರಲಿಲ್ಲ. ಈಗ ಮತ್ತೆ ಒಂದಾಗಿದೆ ಎಂಬುದು ಹಳೆಯ ಸಂಗತಿ.

ಈ 323 ಟೆಲಿಫೋನ್ ಲೈನುಗಳಿರುವುದು ಕೂಡ ದಯಾನಿಧಿ ಅವರು ಕೆಲಸ ಮಾಡಬೇಕಿದ್ದ ದೆಹಲಿಯಲ್ಲಲ್ಲ, ಬದಲಾಗಿ, ತನ್ನೂರಾದ ಚೆನ್ನೈಯಲ್ಲಿ ಎಂಬುದೇ ವಿಶೇಷ. ಆದರೆ, ಕೇಂದ್ರ ಸರಕಾರವು ಈ ಸಿಬಿಐ ವರದಿಯ ಮೇಲೆ ಸುಮ್ಮನೇ ಕುಳಿತುಬಿಟ್ಟದ್ದೇಕೆ ಎಂಬುದು ಇನ್ನೂ ಅರ್ಥವಾಗದ ಸಂಗತಿ.
ಇವನ್ನೂ ಓದಿ