ಭ್ರಷ್ಟಾಚಾರದ ವಿರುದ್ಧ ಮತ್ತು ವಿದೇಶೀ ಬ್ಯಾಂಕುಗಳಲ್ಲಿ ರಾಶಿಬಿದ್ದಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಲು ಒತ್ತಾಯಿಸಿ ಯೋಗ ಗುರು ಬಾಬಾ ರಾಮದೇವ್ ಅವರ ಪ್ರಸ್ತಾಪಿತ ಉಪವಾಸ ಸತ್ಯಾಗ್ರಹವು ರಾಜಕೀಯ ಉದ್ದೇಶದಿಂದ ಕೂಡಿದ್ದು, ತಾನು ಈ ಚಳವಳಿಗೆ ಬೆಂಬಲಿಸುವುದಿಲ್ಲ ಎಂದು ಬಾಲಿವುಡ್‌ನ ಖ್ಯಾತ ನಟ ಶಾರೂಖ್ ಖಾನ್ ಹೇಳಿದ್ದಾರೆ.
ಯಾವುದೇ ಬೆಂಬಲ ನೀಡುವುದಿಲ್ಲ, ಅವರಿಗೊಂದು ಅಜೆಂಡಾ ಇದೆ. ಯಾರೇ ಆದರೂ ನಾಯಕನಾಗುತ್ತಾರೆ ಎಂದಾದಾಗ, ಅವರು ಈ ರೀತಿಯ ಹೋರಾಟಗಳಿಗೆ ಮುಂದಾಗುತ್ತಾರೆ ಎಂದು ತಮ್ಮ "ರಾ.ಒನ್" ಚಿತ್ರದ ಪ್ರಚಾರಾರ್ಥ ಇಂದೋರ್‌ಗೆ ಬಂದಿದ್ದ ಶಾರೂಖ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ತನ್ನ ಕೆಲಸವೇನಿದೆಯೋ ಅದನ್ನಷ್ಟೇ ಮಾಡಬೇಕು. ಆದರೆ, ರಾಜಕಾರಣಿಯಾಗಿ ಅದನ್ನು ಮಾಡುತ್ತೇನೆ ಎಂದಾದರೆ, ಅದು ಸರಿಯಾದ ಮಾರ್ಗ ಅಲ್ಲ ಎಂದು ಹೇಳಿದ ಶಾರೂಖ್, ಆದರೆ 2ಜಿ ಹಗರಣ ಮತ್ತಿತರ ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರ ವಿಷಯಗಳಿಂದಾಗಿ ತನಗೆ ಖೇದವಾಗಿದೆ ಎಂದಿದ್ದಾರೆ.
ನೀವು ರಾಜಕೀಯಕ್ಕೆ ಸೇರುತ್ತೀರಾ ಎಂದು ಕೇಳಿದಾಗ, ನೀವು ನನ್ನನ್ನು ರಾಜಕೀಯಕ್ಕೆ ಸೇರುತ್ತೇನೆ ಅಂತ ಯಾಕೆ ಯೋಚಿಸುತ್ತೀರಿ? ರಾಜಕಾರಣಿಗಳು ಚಿತ್ರೋದ್ಯಮಕ್ಕೆ ಬರುತ್ತಾರೆ ಅಂತ ಯಾಕೆ ಕಲ್ಪಿಸುವುದಿಲ್ಲ ಎಂದು ಪ್ರಶ್ನಿಸಿದರು.