ಗುಜರಾತಿನಲ್ಲೂ 1 ಲಕ್ಷ ಕೋಟಿ ಭ್ರಷ್ಟಾಚಾರ: ಕಾಂಗ್ರೆಸ್ ಆರೋಪ
ನವದೆಹಲಿ, ಶುಕ್ರವಾರ, 3 ಜೂನ್ 2011( 12:37 IST )
ಗುಜರಾತ್‌ನಲ್ಲಿ ನರೇಂದ್ರ ಮೋದಿ ಸರಕಾರವು ಕಳೆದೊಂದು ದಶಕದಿಂದ ಪ್ರತಿ ಚುನಾವಣೆಗಳಲ್ಲಿಯೂ ನೀಡುತ್ತಿದ್ದ ಆಘಾತದಿಂದ ಚೇತರಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು, ಗಾಂಧಿ ನಾಡು ಭ್ರಷ್ಟಾಚಾರದ ಬೀಡಾಗಿದೆ ಎಂಬ ಅಣ್ಣಾ ಹಜಾರೆ ಹೇಳಿಕೆಯಿಂದ ಪ್ರೇರಣೆ ಪಡೆದು, ರಾಜ್ಯದಲ್ಲಿ 1 ಲಕ್ಷ ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದೆ. ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ ಮಾಡಿಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಗಲಾಟೆಯಾದ ಸಂದರ್ಭ ಟಾಟಾ ಕಂಪನಿಯ ನ್ಯಾನೋ ಯೋಜನೆಯು ಗುಜರಾತ್‌ಗೆ ಬಂದಿರುವುದು, ಇದರಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಕೈವಾಡವಿರುವುದನ್ನು ಎತ್ತಿಕೊಂಡಿರುವ ಕಾಂಗ್ರೆಸ್, ಪ್ರತಿಪಕ್ಷ ನಾಯಕ ಶಕ್ತಿಸಿನ್ಹ ಗೋಹಿಲ್ ಅವರು ಆರ್‌ಟಿಐ ಬಳಸುವ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸುವವರೆಗೂ ರಾಜ್ಯ ಸರಕಾರವು ನ್ಯಾನೋ ಒಪ್ಪಂದವನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದೆ.
ಕಂಪನಿಗೆ ಭಾರೀ ರಿಯಾಯಿತಿ ನೀಡಿ, ರಾಜ್ಯವನ್ನೇ ಮೋದಿ ಮಾರಿದ್ದಾರೆ ಎಂದು ಆಪಾದಿಸಿರುವ ಗೋಹಿಲ್ ಮತ್ತು ರಾಜ್ಯ ಪಿಸಿಸಿ ಮುಖ್ಯಸ್ಥ ಅರ್ಜುನ್ ಮೋದವಾಡಿಯಾ, 2002ರ ಗುಜರಾತ್ ದಂಗೆಗಳ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡ (ಎಸ್ಐಟಿ)ದ ಅಧ್ಯಕ್ಷ, ಮಾಜಿ ಸಿಬಿಐ ಮುಖ್ಯಸ್ಥ ಆರ್.ಕೆ.ರಾಘವನ್ ಅವರು, ಹಿಂದೆ ಟಾಟಾ ವಿರುದ್ಧದ ಸೈಬರ್ ಅಪರಾಧದ ತನಿಖಾ ತಂಡದಲ್ಲಿಯೂ ಇದ್ದರು. ಹೀಗಾಗಿ ಅವರೂ ಈ ಒಪ್ಪಂದದಲ್ಲಿ ಭಾಗಿಯಾಗಿರಬಹುದು ಎಂದು ಆರೋಪಿಸಿದ್ದಾರೆ.
ಒಟ್ಟು 2900 ಕೋಟಿ ರೂ. ವೆಚ್ಚದ ಯೋಜನೆಗೆ ಸರಕಾರವು 9570 ಕೋಟಿ ರೂ. ಸಾಲ ನೀಡಿದೆ. ಅದು ಕೂಡ ಶೇ.0.1 ಬಡ್ಡಿ ದರದಲ್ಲಿ, ಅಷ್ಟು ಮಾತ್ರವಲ್ಲದೆ, ಮರುಪಾವತಿಯು ಆರಂಭವಾಗಬೇಕಿರುವುದು 20 ವರ್ಷಗಳ ನಂತರ. ನೀರಾ ರಾಡಿಯಾ ಅವರು ಈ ಡೀಲ್ ಕುದುರಿಸಿದ್ದಾರೆ ಎಂದು ಗೋಹಿಲ್ ಮತ್ತು ಮೋದವಾಡಿಯಾ ಆರೋಪಿಸಿದರು.
ಕಾಂಗ್ರೆಸ್ ನಿಯೋಗವು 'ಹಗರಣ'ಗಳ ವಿವರಗಳುಳ್ಳ 1000 ಪುಟಗಳ ದಾಖಲೆಗಳನ್ನು ರಾಷ್ಟ್ರಪತಿಗೆ ನೀಡಲಿದೆ. 1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರಗಳು ನಡೆದಿವೆ ಎಂದೂ ಅವರು ಹೇಳಿದ್ದಾರೆ.
ಒಂಭತ್ತು ವರ್ಷಗಳಿಂದ ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಿಸಿಲ್ಲ. ಈ ಕಾರಣಕ್ಕಾಗಿಯೇ ಅವ್ಯವಹಾರಗಳು ಹೊರಗೆ ಬರುತ್ತಿಲ್ಲ ಎಂದವರು ಆರೋಪಿಸಿದರು.