ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ಹಿಂದೆ ಆರೆಸ್ಸೆಸ್, ಅವ್ರಿಗೆ ಯೋಗ ಗೊತ್ತಿಲ್ಲ: ದಿಗ್ವಿಜಯ್ (Yogasan | Baba Ramdev | Digvijay Singh | Black Money | Indefinite Fast)
PTI
ವಿದೇಶದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಕೂಡಿಟ್ಟಿರುವ ಕಪ್ಪು ಹಣ ವಾಪಸ್ ತರಿಸಬೇಕು ಎಂದು ಒತ್ತಾಯಿಸಿ ಯೋಗ ಗುರು ಬಾಬಾ ರಾಮದೇವ್ ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ದೇಶದೆಲ್ಲೆಡೆ ಯಾವುದೇ ಧರ್ಮ ಭೇದವಿಲ್ಲದೆ ಬೆಂಬಲ ವ್ಯಕ್ತವಾಗುತ್ತಿರುವಂತೆಯೇ, ಸರಕಾರದ ಪರವಾಗಿರುವ ಮಾಧ್ಯಮಗಳು ಈ ಸತ್ಯಾಗ್ರಹಕ್ಕೆ ಕೋಮು ಬಣ್ಣ ಹಚ್ಚಲಾರಂಭಿಸಿವೆ.

ಇದರ ನಡುವೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಮತ್ತೆ ಬಾಬಾ ಮೇಲೆ ವಾಗ್ದಾಳಿ ನಡೆಸಿದ್ದು, ಕಪ್ಪು ಹಣವೆಂದರೇನೆಂದೇ ತಿಳಿಯದ ಬಾಬಾ ಅವರ ಉಪವಾಸ ಸತ್ಯಾಗ್ರಹದ ಹಿಂದೆ ಬಿಜೆಪಿ, ಆರೆಸ್ಸೆಸ್ ಕುಮ್ಮಕ್ಕು ಇದೆ ಎಂದು ಆರೋಪಿಸಿದ್ದು, ಬಾಬಾ ಬೋಧಿಸುವ ಯೋಗಾಸನ ವಿಧಾನವೇ ಸರಿಯಿಲ್ಲ ಎಂದು ಹೇಳಿದ್ದಾರೆ.

ರಾಮದೇವ್ ಸತ್ಯಾಗ್ರಹಕ್ಕೆ ದೊರೆಯುತ್ತಿರುವ ಭರ್ಜರಿ ಬೆಂಬಲದಿಂದ ಕಂಗೆಟ್ಟಿರುವಂತೆ ಕಂಡುಬಂದ ದಿಗ್ವಿಜಯ್ ಸಿಂಗ್ ಬಾಬಾ ವಿರುದ್ಧ ಕೆಂಡ ಕಾರುತ್ತಾ, "ಯೋಗ ತರಬೇತಿ ನೀಡುತ್ತೀರಾದರೆ, ನನ್ನದೇನೂ ಅಭ್ಯಂತರವಿಲ್ಲ. ಆದರೆ, ರಾಜಕಾರಣ ಮಾಡುತ್ತೀರಿ ಎಂದಾದರೆ, ರಾಜಕೀಯಕ್ಕೆ ಬನ್ನಿ" ಎಂದು ಪಂಥಾಹ್ವಾನ ನೀಡಿದ್ದಾರಲ್ಲದೆ, ಕಪ್ಪು ಹಣದ ಬಗ್ಗೆ ಬಾಬಾಗೆ ಜ್ಞಾನವೇ ಇಲ್ಲ, ಅವರು ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಉಪವಾಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ವಿದೇಶದಲ್ಲಿ 4 ಲಕ್ಷ ಕೋಟಿ ರೂಪಾಯಿ ಮೊತ್ತದ ಕಪ್ಪು ಹಣ ಇದೆ ಎಂದು ಬಾಬಾ ಅವರಿಗೆ ಹೇಳಿದವರಾದರೂ ಯಾರು ಎಂದು ಅಚ್ಚರಿ ವ್ಯಕ್ತಪಡಿಸಿದ ದಿಗ್ವಿಜಯ್, ಅವರಿಗೆ ಕಪ್ಪು ಹಣದ ಕುರಿತು ಮಾಹಿತಿ ಇಲ್ಲ. ಸರಕಾರ ಹೇಗೆ ನಡೆಯುತ್ತಿದೆ ಎಂಬುದರ ಅರಿವಿಲ್ಲ ಎಂದು ಹೇಳಿದರು.

ಬಾಬಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡದಂತೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಪರೋಕ್ಷ ಎಚ್ಚರಿಕೆಯ ಹೊರತಾಗಿಯೂ ದಿಗ್ವಿಜಯ್ ಸಿಂಗ್ ಅವರು ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು, ಬಾಬಾ ಪ್ರತಿಭಟನೆಯ ಹಿಂದೆ ಆರೆಸ್ಸೆಸ್ ಸ್ವಯಂಸೇವಕರ ಕೈವಾಡ ನಿಚ್ಚಳವಾಗಿದೆ ಎಂದರಲ್ಲದೆ, ಸತ್ಯಾಗ್ರಹಕ್ಕಾಗಿ ಪೆಂಡಾಲ್ ನಿರ್ಮಾಣದಿಂದ ಹಿಡಿದು, ಸಭೆಗಳನ್ನು ಸಂಘಟಿಸುವವರೆಗೂ, ಎಲ್ಲೆಡೆಯೂ ಆರೆಸ್ಸೆಸ್ ಇದೆ ಎಂದರು.

ಇಷ್ಟು ಮಾತ್ರವೇ? ಇನ್ನೂ ಇದೆ ಕೇಳಿ. ಯೋಗ ಗುರು ಬಾಬಾ ರಾಮದೇವ್ ಬೋಧಿಸುವ ಯೋಗಾಸನ ವಿಧಾನ ಕೂಡ ಸರಿಯಿಲ್ಲವಂತೆ. ಹಲವಾರು ಯೋಗ ಪರಿಣತರು ಬಾಬಾ ಅವರ ಆಸನಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ, ತಮ್ಮ ಪಕ್ಷದ ಇಷ್ಟು ಮಂದಿ ಹಿರಿಯ ಮುಖಂಡರು, ಸಚಿವರೆಲ್ಲಾ ಬಂದು ಮಾತನಾಡುತ್ತಿರುವಾಗ, ಮತ್ತು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿರುವಾಗ, ಬಾಬಾ ಅವರು ಅವರ ಭಾವನೆಗಳನ್ನು "ಗೌರವಿಸಬೇಕು" ಎಂದೂ ದಿಗ್ವಿಜಯ್ ಹೇಳಿದ್ದಾರೆ.
ಇವನ್ನೂ ಓದಿ