ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಕೈ' ವಿರುದ್ಧ ಆಕ್ರೋಶ: ಬಾಬಾ ರಾಮದೇವ್ ಬಂಧನ, ಲಾಠಿಚಾರ್ಜ್ (yoga guru Ramdev | Ramlila | Delhi Police | UPA)
ವಿದೇಶಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಕೂಡಿಟ್ಟಿರುವ ಕಪ್ಪು ಹಣ ವಾಪಸ್ ತರಬೇಕು ಎಂದು ಒತ್ತಾಯಿಸಿ ಯೋಗಗುರು ಬಾಬಾ ರಾಮದೇವ್ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಕೇಂದ್ರ ಮತ್ತು ಬಾಬಾ ನಡುವೆ ಸಾಕಷ್ಟು ಜಟಾಪಟಿಗೆ ಕಾರಣವಾಗಿತ್ತು. ಏತನ್ಮಧ್ಯೆ ಭಾನುವಾರ ರಾತ್ರಿ 1-10ಕ್ಕೆ ದಿಢೀರ್ ಬೆಳವಣಿಗೆ ಎಂಬಂತೆ ಪ್ರತಿಭಟನಾಕಾರರು ನಿದ್ರಿಸುತ್ತಿದ್ದ ವೇಳೆ ಸಾವಿರಾರು ಮಂದಿ ಪೊಲೀಸರು ಒಳನುಗ್ಗಿ ಲಾಠಿ ಪ್ರಹಾರ ನಡೆಸಿ ಬಾಬಾ ರಾಮದೇವ್ ಅವರನ್ನು ಬಂಧಿಸಿರುವ ಘಟನೆ ನಡೆದಿದ್ದು, ಕೇಂದ್ರ ಮತ್ತು ದೆಹಲಿ ಸರಕಾರದ ಈ ಕ್ರಮದ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಶನಿವಾರ ಮಧ್ಯರಾತ್ರಿ ಏನು ನಡೆಯಿತು:
ಜೂನ್ 4ರ ಸಂಜೆ ಯುಪಿಎ ಸರಕಾರ ಕೊನೆಗೂ ಮಣಿದಿತ್ತು. ಬಾಬಾ ಅವರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಕೇಂದ್ರ ಸರಕಾರ ಲಿಖಿತ ರೂಪದಲ್ಲಿಯೇ ಭರವಸೆ ನೀಡಿದೆ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ಘೋಷಿಸಿದ್ದರು.

ತದನಂತರ ಬೇಡಿಕೆಗಳಿಗೆ ಸ್ಪಂದಿಸಿದ್ದೇವೆ ಎಂದು ಕೇಂದ್ರ ಸರಕಾರ ಘೋಷಿಸಿದೆಯಾದರೂ, ಲಿಖಿತ ಭರವಸೆ ಪತ್ರವು ಕೈಗೆ ಸಿಗುವವರೆಗೆ ಉಪವಾಸ ಮುಂದುವರಿಯುತ್ತದೆ ಎಂದು ಹೇಳಿದ ಯೋಗಗುರು ಬಾಬಾ ರಾಮದೇವ್, ಸರಕಾರ ಇಷ್ಟೊಂದು ಕುಟಿಲ ನೀತಿ ಅನುಸರಿಸುತ್ತದೆ ಎಂದು ಗೊತ್ತಿರಲಿಲ್ಲ ಎಂದು ಕಿಡಿಕಾರಿದ್ದರು.

ಅಷ್ಟೇ ಅಲ್ಲ ಸರಕಾರ ತನ್ನನ್ನು ಬಂಧಿಸಿ ಕರೆದೊಯ್ಯಬಹುದು ಎಂದು ಬಾಬಾ ಆತಂಕ ವ್ಯಕ್ತಪಡಿಸಿ, ಬೆಂಬಲಿಗರು ಇಲ್ಲೇ ಇರುವಂತೆ ಕೋರಿಕೊಳ್ಳುವ ಮೂಲಕ ಬಿಕ್ಕಟ್ಟು ಮುಂದುವರಿದಿತ್ತು.

ರಾತ್ರಿ 1-10ಕ್ಕೆ ಸಾವಿರಾರು ಪೊಲೀಸರು ರಾಮಲೀಲಾ ಮೈದಾನಕ್ಕೆ ಪ್ರವೇಶಿಸಿದ್ದರು.ಅಷ್ಟರಲ್ಲಾಗಲೇ ಬಾಬಾ ಬೆಂಬಲಿಗರಿಗೆ ವಿಷಯ ತಿಳಿದು ಬಾಬಾ ಅವರನ್ನು ಬಂಧಿಸುತ್ತಾರೆಂಬ ಭಯದಿಂದ ಪೊಲೀಸರಿಗೆ ಒಳನುಗ್ಗಲು ಅವಕಾಶವೇ ಕೊಡಲಿಲ್ಲ. ಆ ಹೊತ್ತಿಗೆ ಪೊಲೀಸರು ಮತ್ತು ಬಾಬಾ ಬೆಂಬಲಿಗರ ಜತೆ ಜಟಾಪಟಿ ನಡೆದಿತ್ತು.

2-20ರ ಸುಮಾರಿಗೆ ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್ ನಡೆಸಿದ ಪರಿಣಾಮ ಪ್ರತಿಭಟನಾಕಾರರು ದಿಕ್ಕಾಪಾಲಾಗಿದ್ದರು. ಸತ್ಯಾಗ್ರಹ ನಡೆಸುತ್ತಿದ್ದ ಪೆಂಡಾಲ್‌ಗೂ ಬೆಂಕಿ ಹಿಡಿದಿತ್ತು. ಅಷ್ಟರಲ್ಲಿ ಬಾಬಾ ಅವರನ್ನು ಬಂಧಿಸಲು ಪೊಲೀಸರು ಮುಂದಾಗುತ್ತಿದ್ದಂತೆಯೇ ಪ್ರತಿಭಟನಾಕಾರರು ಅಡ್ಡಗಟ್ಟಿದ್ದರು. ಆಗ ಬಾಬಾ ಆರು ಅಡಿ ಎತ್ತರದ ವೇದಿಕೆಯಿಂದ ಕೆಳ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು.

3-30ರ ಹೊತ್ತಿಗೆ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗದ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿ, ಬಾಬಾ ಅವರನ್ನು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಗಾಯಗೊಂಡಿದ್ದರು. ಬಾಬಾ ರಾಮದೇವ್ ಅವರನ್ನು ಕೂಡಲೇ ಬಂಧಮುಕ್ತಗೊಳಿಸುವಂತೆ ಎಲ್ಲೆಡೆ ಒತ್ತಡ ಹೆಚ್ಚಾಗುತ್ತಿದೆ. ಏತನ್ಮಧ್ಯೆ, ಬಾಬಾ ಅವರನ್ನು ಹರಿದ್ವಾರಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳುತ್ತಿದ್ದಾರೆ. ಆದರೆ ಅದು ಸುಳ್ಳು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಅನುಮತಿ ರದ್ದು:
ರಾಮಲೀಲಾ ಮೈದಾನದಲ್ಲಿ ಬಾಬಾ ರಾಮದೇವ್ ಅವರ ಯೋಗ ಶಿಬಿರಕ್ಕೆ ನೀಡಿದ್ದ ಅನುಮತಿಯನ್ನು ದೆಹಲಿ ಸರಕಾರ ರದ್ದು ಪಡಿಸಿದೆ. ಬಾಬಾ ಅವರು ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ಪಡೆದಿರಲಿಲ್ಲ ಎಂಬುದಾಗಿಯೂ ಸ್ಪಷ್ಟನೆ ನೀಡಿದೆ. ಬಾಬಾ ರಾಮದೇವ್ ಅವರು ದೆಹಲಿ ಪೊಲೀಸರ ವಶದಲ್ಲಿದ್ದು, ಅವರನ್ನು ವಿಶೇಷ ಹೆಲಿಕಾಪ್ಟರ್‌ನಲ್ಲಿ ಹರಿದ್ವಾರಕ್ಕೆ ರವಾನಿಸಲಾಗುವುದು ಎಂದು ಹೇಳಲಾಗುತ್ತಿದೆ.

ಬಾಬಾ ರಾಮದೇವ್ ಅವರ ಯೋಗಶಿಬಿರದ ಅನುಮತಿ ರದ್ದುಪಡಿಸಿರುವ ದೆಹಲಿ ಸರಕಾರ, ರಾಮಲೀಲಾ ಮೈದಾನದಲ್ಲಿ ಸೆಕ್ಷನ್ 144 ಜಾರಿ ಮಾಡಿದೆ.

ದೇಶಾದ್ಯಂತ ಬೆಂಬಲಿಗರ ಆಕ್ರೋಶ:
ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಬಾಬಾರಾಮ ದೇವ್ ಅವರು ಹೋರಾಟ ಮಾಡುತ್ತಿದ್ದರೂ ಕೂಡ ರಾತ್ರೋರಾತ್ರಿ ಕೇಂದ್ರ ಮತ್ತು ದೆಹಲಿ ಸರಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಂಡು ಅವರನ್ನು ಬಂಧಿಸಿರುವ ಕ್ರಮಕ್ಕೆ ಬಾಬಾ ಬೆಂಬಲಿಗರು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಕಾಂಗ್ರೆಸ್ ಕುತಂತ್ರ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರನ್ನು ರಾತ್ರೋರಾತ್ರಿ ಪೊಲೀಸರ ಮೂಲಕ ಹತ್ತಿಕ್ಕಿಸುವ ಕಾಂಗ್ರೆಸ್ ಕ್ರಮ ಬ್ರಿಟಿಷರಿಗಿಂತಲೂ ಕ್ರೂರವಾದದ್ದು ಎಂದು ಬಾಬಾ ಬೆಂಬಲಿಗರು ವಾಗ್ದಾಳಿ ನಡೆಸಿದ್ದಾರೆ.
ಇವನ್ನೂ ಓದಿ