ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತಿಭಟನೆ ಹತ್ತಿಕ್ತೀರಾ-ಮತ್ತೆ ಉಪವಾಸ ಆರಂಭ:ಅಣ್ಣಾ ಗುಡುಗು (Anna Hazare | Jantar Mantar | hunger strike | Lokpal | Baba Ramdev)
PTI
ರಾಮಲೀಲಾ ಮೈದಾನದಲ್ಲಿ ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಿ ಯೋಗ ಗುರು ರಾಮದೇವ್ ಮತ್ತು ಸತ್ಯಾಗ್ರಹಿಗಳ ಮೇಲೆ ದಾಳಿ ನಡೆಸಿ ಬಲವಂತವಾಗಿ ಉಪವಾಸ ಸತ್ಯಾಗ್ರಹವನ್ನು ತಡೆದಿರುವ ಕೇಂದ್ರ ಸರಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ತಾವು ಮತ್ತೆ ಜಂತರ್ ಮಂತರ್‌ನಲ್ಲಿ ಜೂನ್ 8ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಧ್ಯರಾತ್ರಿ ದಾಳಿ ನಡೆಸಿ ಪ್ರತಿಭಟನೆಯನ್ನು ಹತ್ತಿಕ್ಕಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಗುಡುಗಿರುವ ಅಣ್ಣಾ ಮತ್ತು ಲೋಕಪಾಲ್ ಕರಡು ಮಸೂದೆ ರಚನೆ ಸಮಿತಿಯ ಸದಸ್ಯರು ಜೂನ್ 6ರಂದು ಸರಕಾರದ ಜತೆ ನಡೆಯಲಿರುವ ಸಭೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

ಸರಕಾರ ಇದರಿಂದ ಪಾಠ ಕಲಿಯದಿದ್ದರೆ, ಮುಂದೆ ಈ ಬಗ್ಗೆ ಬೃಹತ್ ಪ್ರಮಾಣದ ಪ್ರತಿಭಟನೆಯನ್ನೇ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಭಾನುವಾರ ರಾತ್ರಿ ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದಲ್ಲಿನ ಮೂಲಭೂತ ಹಕ್ಕನ್ನೇ ಕಸಿದುಕೊಂಡಂತೆ. ಆ ನಿಟ್ಟಿನಲ್ಲಿ ಘಟನೆ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಜನರಿಗೆ ಉತ್ತರ ನೀಡಲೇಬೇಕಾಗಿದೆ ಎಂದರು.

ಬಾಬಾ ರಾಮದೇವ್ ಅವರನ್ನು ಮಧ್ಯರಾತ್ರಿ ಬಂಧಿಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿರುವ ಅಣ್ಣಾ, ಅವರನ್ನು ಬಂಧಿಸುವುದಿದ್ದರೇ ಹಗಲಲ್ಲೇ ಬಂಧಿಸಬಹುದಿತ್ತಲ್ಲ. ಅದೂ ಅಲ್ಲದೇ ಮಕ್ಕಳು, ಮಹಿಳೆಯರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ಅಕ್ಷಮ್ಯ ಅಪರಾಧ. ಅವರೆಲ್ಲಾ ಯಾವ ತಪ್ಪು ಮಾಡಿದ್ದಾರೆ. ಈ ದೇಶದಲ್ಲಿ ಪ್ರತಿಭಟನೆ ನಡೆಸುವುದು ತಪ್ಪಲ್ಲ, ಭ್ರಷ್ಟಾಚಾರ ಮಾಡುವುದು ತಪ್ಪು ಎಂದು ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇವನ್ನೂ ಓದಿ