ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಖವುಳಿಸಿಕೊಳ್ಳಲು ಕಾಂಗ್ರೆಸ್‌ನಿಂದಲೂ ಜನಾಂದೋಲನ (Baba Ramdev Fiasco | Indefinite Fast | Congress | Anti Corruption | Black Money)
ರಾಮಲೀಲಾ ಮೈದಾನದಲ್ಲಿ ರಾವಣಲೀಲೆ ನಡೆಸಿದ ಪ್ರಕರಣದಿಂದ ಎಲ್ಲ ವಲಯಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್, ಅಣ್ಣಾ ಹಜಾರೆ ಕೂಡ ರಾಮದೇವ್‌ಗೆ ಬೆಂಬಲ ನೀಡಿದ್ದರಿಂದಾಗಿ ಮುಖವುಳಿಸಿಕೊಳ್ಳುವ ಯತ್ನವಾಗಿ ಹಿರಿಯ ಕಾಂಗ್ರೆಸ್ ನಾಯಕರು ಭಾನುವಾರ ತಡರಾತ್ರಿ ಸಭೆ ಸೇರಿ, ಕೇಂದ್ರ ಸರಕಾರ ಹಾಗೂ ಕಾಂಗ್ರೆಸ್ ನಡುವಿನ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ದೇಶಾದ್ಯಂತ ಜನಾಂದೋಲನ ನಡೆಸಲು ನಿರ್ಧರಿಸಿದ್ದಾರೆ.

ಈ ಸಭೆಗೆ ಕೆಲವೇ ಕ್ಷಣಗಳ ಮುನ್ನ ಹಿರಿಯ ಮಂತ್ರಿಗಳಾದ ಪ್ರಣಬ್ ಮುಖರ್ಜಿ, ಎ.ಕೆ.ಆಂಟನಿ, ಪಿ.ಚಿದಂಬರಂ ಹಾಗೂ ಕಪಿಲ್ ಸಿಬಲ್ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ನಿವಾಸಕ್ಕೆ ಕರೆಸಿಕೊಂಡು ಗಂಭೀರ ಸಮಾಲೋಚನೆ ನಡೆಸಿದ್ದರು. ಪ್ರಮುಖ ಕಾರಣವೆಂದರೆ, ಕೆಲವು ಕಾಂಗ್ರೆಸಿಗರಿಗೂ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಅರಿವಿಲ್ಲದಿರುವುದು. ಉಳಿದ ಪ್ರಜೆಗಳಂತೆ ತಮಗೂ ಕೂಡ ಟೀವಿ ನೋಡಿಯೇ ಈ ವಿಷಯ ತಿಳಿಯಿತು ಎಂಬುದು ಕಾಂಗ್ರೆಸ್ ಗೊಂದಲಕ್ಕೆ ಕಾರಣವಾಗಿತ್ತು.

ಇದೇ ಕಾರಣಕ್ಕೆ ಹಿರಿಯ ಕಾಂಗ್ರೆಸಿಗ, ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಜನಾರ್ದನ ದ್ವಿವೇದಿ ಹೇಳಿದ್ದು : "ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ನಮ್ಮ ಸಂಸದೀಯ ಪ್ರಜಾಸತ್ತೆಯನ್ನು, ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ಇದರ ವಿರುದ್ಧ ನಾವೂ ಕೂಡ ಜನಾಂದೋಲನ ನಡೆಸುತ್ತೇವೆ".

ಅಣ್ಣಾ ಹಜಾರೆಯವರು ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದಂತೆಯೇ ಅವರು ಕೂಡ ಕರೆ ನೀಡಿದ್ದಾರೆ. "ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಸೇರಿ ಜನಾಂದೋಲನ ಮಾಡಬೇಕು. ಸರಕಾರದ ಧನಾತ್ಮಕ ಕಾರ್ಯಕ್ರಮಗಳನ್ನು ವಿವರಿಸಬೇಕು ಮತ್ತು ಇದರ (ಭ್ರಷ್ಟಾಚಾರ-ವಿರೋಧೀ ಹೋರಾಟ) ಹಿಂದಿರುವ ನೈಜ ಶಕ್ತಿಗಳನ್ನು ಬಯಲಿಗೆಳೆಯಬೇಕು" ಎಂದು ಹೇಳಿದ್ದಾರೆ.
ಇವನ್ನೂ ಓದಿ