ಬಾಬಾ ರಾಮದೇವ್ ವಿರುದ್ಧ ಪೊಲೀಸ್ ಬಲ ಪ್ರಯೋಗದಿಂದ ವಿಚಲಿತವಾಗಿರುವ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜದ ಕಾರ್ಯಕರ್ತರು, ಕೇಂದ್ರ ಸರಕಾರವು ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಬಲ ಕಾಯ್ದೆ ರೂಪಿಸುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು, ಸೋಮವಾರ ನಡೆಯಬೇಕಿದ್ದ ಜನ ಲೋಕಪಾಲ ಮಸೂದೆ ಕರಡು ಸಮಿತಿ ಸಭೆಯನ್ನು ಬಹಿಷ್ಕರಿಸಿದ್ದಾರೆ. ಅಲ್ಲದೆ, ಬಾಬಾ ಬಂಧನ ಪ್ರತಿಭಟಿಸಿ ಜೂ.8ರಂದು ಹಜಾರೆ ಅವರು ಉಪವಾಸ ನಡೆಸಲಿದ್ದು, ಇದಕ್ಕೆ ಅವಕಾಶ ನೀಡದಿದ್ದರೆ ಸಾಮೂಹಿಕ ಬಂಧನಕ್ಕೊಳಗಾಗುವುದಾಗಿ ಘೋಷಿಸಿದ್ದಾರೆ.
ಬುಧವಾರ ಜಂತರ್ ಮಂತರ್ ಬಳಿ ನಡೆಯುವ ತಮ್ಮ ಸತ್ಯಾಗ್ರಹಕ್ಕೆ ಅವಕಾಶ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಅವಕಾಶ ನೀಡದಿದ್ದರೆ ಸಾಮೂಹಿಕ ಬಂಧನಕ್ಕೆ ಒಳಗಾಗಲು ಸಿದ್ಧ ಎಂದು ಅಣ್ಣಾ ಹಜಾರೆ ಬಳಗದ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಎಚ್ಚರಿಸಿದ್ದಾರೆ.
ಬಾಬಾ ರಾಮದೇವ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಹಿಂಸಾತ್ಮಕ ಉಪವಾಸ ಸತ್ಯಾಗ್ರಹವನ್ನು ಕೆಡಿಸಿ, ಅವರೆಲ್ಲರನ್ನೂ ದೆಹಲಿಯ ರಾಮಲೀಲಾ ಮೈದಾನದಲ್ಲಿ ಓಡಿಸಲು ಸರಕಾರವು ದೆಹಲಿಯಲ್ಲಿ ಎರಡು ವಾರಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿತ್ತು. ಇದರ ಪ್ರಕಾರ ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ ಮತ್ತು ಸಾರ್ವಜನಿಕ ಸಭೆ ನಡೆಸುವಂತಿಲ್ಲ. ಹೀಗಾಗಿ ಹಜಾರೆ ಬಣದ ಈ ಬೇಡಿಕೆ ಕುತೂಹಲ ಕೆರಳಿಸಿದೆ.
ಮಲಗಿದ್ದ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ನಡೆಸಿರುವುದು ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಕಪ್ಪು ಚುಕ್ಕೆ ಮತ್ತು ಇದು ಪ್ರಜಾಪ್ರಭುತ್ವಕ್ಕೆ ವಿರೋಧ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. ಜೂ.8ರಂದು ತಾನು ಉಪವಾಸ ಸತ್ಯಾಗ್ರಹ ಮಾಡಲಿದ್ದು, ದೇಶವಾಸಿಗಳೂ ಈ ಎರಡನೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಜಂಟಿ ಕರಡು ಸಮಿತಿ ಸಭೆ ಮುಂದೂಡಿ ಸೋಮವಾರ ನಡೆಯಬೇಕಿದ್ದ ಜಂಟಿ ಕರಡು ಸಮಿತಿ ಸಭೆಗೆ ಬಹಿಷ್ಕಾರ ಹಾಕಿರುವ ನಾಗರಿಕ ಸಮಾಜದ ಸದಸ್ಯರಾದ ಅಣ್ಣಾ ಹಜಾರೆ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್ ಮುಂತಾದವರು, ಸಮಿತಿಯ ಮುಂದಿನ ಸಭೆಯ ದಿನಾಂಕ ಬದಲಿಸಬೇಕು. ಯಾಕೆಂದರೆ ಹಜಾರೆಯವರಿಗೆ ಬೇರೆ ಪೂರ್ವನಿಗದಿತ ಕಾರ್ಯಕ್ರಮಗಳಿವೆ ಎಂದು ಹೇಳಿದ್ದಾರೆ.
ಮುಂದಿನ ಸಭೆ ಜೂ.10ಕ್ಕೆ ನಿಗದಿಯಾಗಿದೆ. ಆದರೆ ಜೂ.9ರಿಂದ ಜೂ.11ರವರೆಗೆ ಅಣ್ಣಾ ಹಜಾರೆಯವರಿಗೆ ಪೂರ್ವನಿಗತದಿತ ಕಾರ್ಯಕ್ರಮಗಳಿವೆ. ಹೀಗಾಗಿ ಸಭೆಯ ದಿನಾಂಕ ಬದಲಿಸುವಂತೆ ನಾವು ಪತ್ರದಲ್ಲಿ ಕೇಳಿಕೊಂಡಿದ್ದೇವೆ ಎಂದರು.
ಈ ಕುರಿತು ಸಮಿತಿಯ ಅಧ್ಯಕ್ಷರಾಗಿರುವ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಗೆ ಪತ್ರ ಬರೆದಿರುವ ಪ್ರಶಾಂತ್ ಭೂಷಣ್ ಅವರು, ಸರಕಾರವು ಲೋಕಪಾಲ ವ್ಯಾಪ್ತಿಯಿಂದ ಪ್ರಧಾನಿಯನ್ನು, ಸಂಸದರ ಕುದುರೆ ವ್ಯಾಪಾರವನ್ನು, ಮಧ್ಯಮ ಮತ್ತು ಕೆಳ ಮಟ್ಟದ ಅಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳನ್ನು ಹೊರಗಿಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಲೋಕಪಾಲದ ಉದ್ದೇಶದ ಬಗೆಗೇ ಸರಕಾರದಲ್ಲಿ ಭಿನ್ನಾಭಿಪ್ರಾಯವಿದೆ. ಸರಕಾರ ಹೇಳಿದ್ದಕ್ಕೆ ಒಪ್ಪಿದರೆ ಕೇವಲ 300ರಷ್ಟು ಅಧಿಕಾರಿಗಳು, ಮಂತ್ರಿಗಳು ಮಾತ್ರವೇ ಲೋಕಪಾಲ ವ್ಯಾಪ್ತಿಗೆ ಬರುತ್ತಾರೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.
ಬಾಬಾ ರಾಮದೇವ್ ಅವರನ್ನು ದೆಹಲಿಯಿಂದ ಅಕ್ಷರಶಃ ಓಡಿಸಲು ಶನಿವಾರ ಮಧ್ಯರಾತ್ರಿ ನಡೆದ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಘಟನೆಯು ನಮ್ಮ ಸಂದೇಹಗಳನ್ನು ಬಲಗೊಳಿಸಿದೆ. ಸರಕಾರದ ಉದ್ದೇಶದ ಬಗೆಗೆ ನಮಗೆ ಸಂದೇಹಗಳಿರುವುದರಿಂದ ಈ ಸಭೆ ಬಹಿಷ್ಕರಿಸಿದ್ದೇವೆ ಎಂದರು.