ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಗ್ವಿಜಯ್ ವಿರುದ್ಧ 'ರಾಜ್ಯದ್ರೋಹ' ಕೇಸು, ಮನೆಗೆ ಭದ್ರತೆ
(Sedtion Case Against Digivijay Singh | Baba Ramdev | Fraud)
ದಿಗ್ವಿಜಯ್ ವಿರುದ್ಧ 'ರಾಜ್ಯದ್ರೋಹ' ಕೇಸು, ಮನೆಗೆ ಭದ್ರತೆ
ಮುಜಾಫರ್ಪುರ, ಸೋಮವಾರ, 6 ಜೂನ್ 2011( 16:12 IST )
ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳಿರುವ ಯೋಗ ಗುರು ಬಾಬಾ ರಾಮದೇವ್ ಅವರನ್ನು "ಠಕ್ಕ" ಎಂದು ಕರೆದು ಅವಮಾನಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ರಾಜ್ಯದ್ರೋಹದ ದೂರು ದಾಖಲಿಸಲಾಗಿದೆ.
PTI
ವಕೀಲ ಸುಧೀರ್ ಓಝಾ ಎಂಬವರು ಸಲ್ಲಿಸಿದ ದೂರನ್ನು ಸ್ಥಳೀಯ ನ್ಯಾಯಾಲಯವು ಸ್ವೀಕರಿಸಿದೆ. ಅವರ ವಿರುದ್ಧ 154-ಎ (ರಾಜ್ಯದ್ರೋಹ), 153 (ದಂಗೆ ಎಬ್ಬಿಸುವ ಉದ್ದೇಶದ ಪ್ರಚೋದನೆ) ಮತ್ತು 504 (ಶಾಂತಿ ಕದಡುವ ಉದ್ದೇಶದಿಂದ ಅವಮಾನಕಾರಿ ಹೇಳಿಕೆ ನೀಡುವುದು) ಸೆಕ್ಷನ್‌ಗಳ ಪ್ರಕಾರ ಕೇಸು ದಾಖಲಿಸಲು ಮುಖ್ಯ ಮ್ಯಾಜಿಸ್ಟ್ರೇಟ್ ಆರ್.ಸಿ.ಮಾಳವೀಯ ಅನುಮತಿ ನೀಡಿದ್ದಾರೆ.
ಈ ಪ್ರಕರಣದ ವಿಚಾರಣೆಯನ್ನು ಜೂನ್ 16ರಂದು ನಿಗದಿಪಡಿಸಲಾಗಿದೆ.
ದಿಗ್ವಿಜಯ್ ಸಿಂಗ್ ಮನೆಗೆ ಕಲ್ಲು, ಭದ್ರತೆ ಭೋಪಾಲ ವರದಿ: ಇದೇ ವೇಳೆ, ಕುಖ್ಯಾತ ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ನನ್ನು "ಲಾಡೆನ್‌ಜೀ" ಎಂದು ಕರೆದು, ಈಗ ಬಾಬಾ ರಾಮದೇವ್ ವಿರುದ್ಧ ಅವಹೇಳನಕಾರಿಯಾಗಿ ಠಕ್ಕ ಎಂದೆಲ್ಲಾ ಟೀಕಿಸುತ್ತಿರುವ ದಿಗ್ವಿಜಯ್ ಸಿಂಗ್‌ಗೆ ಬೆದರಿಕೆ ಇದೆ ಎಂದು ಗುಪ್ತಚರ ವರದಿಗಳು ತಿಳಿಸಿರುವುದರಿಂದ, ಸಿಂಗ್ ಬಂಗಲೆ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಆಕ್ರೋಶಿತ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂಬ ವದಂತಿಗಳು ಕೇಳಿಬಂದಿದ್ದವಾದರೂ, ಇದನ್ನು ಪೊಲೀಸರು ನಿರಾಕರಿಸಿದ್ದಾರೆ.
ಶನಿವಾರ ಮಧ್ಯರಾತ್ರಿ ಬಾಬಾ ಮೇಲಿನ ಪೊಲೀಸ್ ದೌರ್ಜನ್ಯವನ್ನು ಸಮರ್ಥಿಸಿಕೊಂಡಿದ್ದ ದಿಗ್ವಿಜಯ್ ಸಿಂಗ್, ಬಾಬಾರನ್ನು ಠಕ್ಕ ಎಂದು ಕರೆದಿದ್ದರಲ್ಲದೆ, ಅವರ "ಸಾವಿರಾರು ಕೋಟಿ ರೂಪಾಯಿ" ಮೊತ್ತ ಆಸ್ತಿಪಾಸ್ತಿಯ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು. "ಇಲ್ಲೇನೂ ರಾಜಕೀಯ ತರಬೇಡಿ. ಠಕ್ಕನ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕೋ, ಅದನ್ನೇ ಅವರಿಗೂ ಮಾಡಲಾಗಿದೆ" ಎಂದಿದ್ದರು.