ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೌನ ಮುರಿದ ಪ್ರಧಾನಿ: ಭ್ರಷ್ಟಾಚಾರ ತಡೆಗೆ ಮಂತ್ರದಂಡ ಇಲ್ಲ
(Baba Ramdev | Prime Minister | Manmohan Singh | Black Money)
ಮೌನ ಮುರಿದ ಪ್ರಧಾನಿ: ಭ್ರಷ್ಟಾಚಾರ ತಡೆಗೆ ಮಂತ್ರದಂಡ ಇಲ್ಲ
ನವದೆಹಲಿ, ಸೋಮವಾರ, 6 ಜೂನ್ 2011( 20:48 IST )
ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕೊನೆಗೂ ಮೌನ ಮುರಿದಿದ್ದಾರೆ. ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಪರಿವಾರವನ್ನು ಹೊಡೆದೋಡಿಸಿದ, ಸತ್ಯಾಗ್ರಹವನ್ನು ಮಟ್ಟ ಹಾಕಿದ ಎರಡು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದ ಡಾ.ಸಿಂಗ್, ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ದುರದೃಷ್ಟಕರ ಎಂದೂ ಹೇಳಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕಿದ್ದರೆ, ಬೇರೆ ದಾರಿಯೇ ಇರಲಿಲ್ಲ ನಮಗೆ ಎಂದಿದ್ದಾರೆ ಪ್ರಧಾನಿ. ಅಂತೆಯೇ, ಯುಪಿಎ ಸರಕಾರವು ಭ್ರಷ್ಟಾಚಾರದ ವಿರುದ್ಧ ಗಂಭೀರವಾಗಿಯೇ ಹೋರಾಡುತ್ತಿದೆ. ಆದರೆ, ಭ್ರಷ್ಟಾಚಾರ ನಿಲ್ಲಿಸಲು ನಮ್ಮ ಬಳಿಯೇನೂ "ಮಂತ್ರದಂಡ"ವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
2ಜಿ ಹಗರಣಕ್ಕೆ ಸಂಬಂಧಿಸಿದಂತೆ, ಇದೀಗ ತಮ್ಮ ಸಂಪುಟದ ಮತ್ತೊಬ್ಬ ಸಚಿವ ದಯಾನಿಧಿ ಮಾರನ್ ಅವರ ಹಗರಣಗಳು ಬೆಳಕಿಗೆ ಬಂದಿರುವ ಕುರಿತು ಒಂದು ವಾರದ ಬಳಿಕ ಪ್ರತಿಕ್ರಿಯೆ ನೀಡಿದ ಪ್ರಧಾನಿ, ಇಂಥಾ ವಿಷಯಗಳನ್ನೆಲ್ಲಾ ಕಾನೂನು ಅನುಷ್ಠಾನ ಏಜೆನ್ಸಿಗಳು ನೋಡಿಕೊಳ್ಳುತ್ತಿವೆ. ಅವುಗಳು ಯಾವುದೇ ಭಯಾತಂಕವಿಲ್ಲದೆ ಕೆಲಸ ಮಾಡಲು ಬಿಡಬೇಕಾಗಿದೆ ಎಂಬ ವಿಲಕ್ಷಣ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ರಾಷ್ಟ್ರಪತಿಗೆ ಮೊರೆ ಈ ಮಧ್ಯೆ, ಬಾಬಾ ರಾಮದೇವ್ ಮತ್ತು ಮೌನವಾಗಿ ಪ್ರತಿಭಟನೆ ಮಾಡುತ್ತಿದ್ದರನ್ನು ರಾಮಲೀಲಾ ಮೈದಾನದಲ್ಲಿ ನಿದ್ದೆಯಿಂದೆಬ್ಬಿಸಿ ಬಡಿದೋಡಿಸಿದ ಪ್ರಕರಣವನ್ನು ವಿರೋಧಿಸಿ ಬಿಜೆಪಿಯ ಹಿರಿಯ ಮುಖಂಡರು ದೆಹಲಿಯ ರಾಜಘಾಟ್‌ನಲ್ಲಿ ಒಂದು ದಿನದ ಪ್ರತಿಭಟನಾ ಪ್ರದರ್ಶನ ನಡೆಸಿ, ರಾಷ್ಟ್ರಪತಿಯನ್ನು ಭೇಟಿಯಾಗಿ ದೂರು ನೀಡಿದರು.
ಪ್ರತಿಭಟನೆಯಲ್ಲಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಮುಂತಾದವರು ಭಾಗವಹಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಭೇಟಿಯಾಗಿ, ವಿದೇಶದಲ್ಲಿ ಕೂಡಿಟ್ಟ ಹಣವನ್ನು ರಾಷ್ಟ್ರೀಯ ಆಸ್ತಿ ಎಂದು ಘೋಷಿಸುವ ನಿಟ್ಟಿನಲ್ಲಿ ಹಾಗೂ ಬಾಬಾ ಬೆಂಬಲಿಗರ ಉಪವಾಸವನ್ನು ಮಟ್ಟ ಹಾಕಿದ ಕುರಿತು ಚರ್ಚಿಸಲು ತಕ್ಷಣವೇ ವಿಶೇಷ ಸಂಸತ್ ಅಧಿವೇಶನ ಕರೆಯುವಂತೆ ಕೋರಿದರು.
ಸರಕಾರವು ನಡೆಸಿದ ಈ ದೌರ್ಜನ್ಯಕ್ಕಾಗಿ ಅದು ವಿವರಣೆ ನೀಡಬೇಕು ಮತ್ತು ದೇಶದ ಕ್ಷಮೆ ಯಾಚಿಸುವಂತೆ ಮಾಡಬೇಕು ಎಂದು ಬಿಜೆಪಿ ನಿಯೋಗವು ರಾಷ್ಟ್ರಪತಿಯನ್ನು ಒತ್ತಾಯಿಸಿತು.
ಬಿಜೆಪಿಯ ಘಟಾನುಘಟಿ ನಾಯಕರು ಭಾನುವಾರ ಸಂಜೆ 7 ಗಂಟೆಯಿಂದ ಸೋಮವಾರ ಸಂಜೆ 7 ಗಂಟೆಯವರೆಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ಕವರೇಜ್ ನೀಡದೇ ಇದ್ದುದು, ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಕೆಂಗಣ್ಣಿಗೂ ಕಾರಣವಾಗಿ, ಅವರು ಟ್ವಿಟ್ಟರ್‌ನಲ್ಲಿ ಈ ಅಸಮಾಧಾನವನ್ನು ತೋಡಿಕೊಂಡಿದ್ದರು.