'ರಾವಣ'ಲೀಲೆ: 2 ದಿನದಲ್ಲಿ ವರದಿ ಕೊಡಿ - ಮಾನವ ಹಕ್ಕು ಆಯೋಗ
ಮಾಧ್ಯಮಗಳ ವರದಿಗಳಿಂದ ಮನಕರಗಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಸತ್ಯಾಗ್ರಹ ನಿರತ ಬಾಬಾ ರಾಮದೇವ್ ಮತ್ತು ಬೆಂಬಲಿಗರ ಮೇಲೆ ಶನಿವಾರ ಮಧ್ಯರಾತ್ರಿ ನಡೆದ ದೌರ್ಜನ್ಯ ಸಂವಿಧಾನ ಬಾಹಿರ ಪೊಲೀಸ್ ಕ್ರಮವಾಗಿದ್ದು, ಯಾವ ಆಧಾರದ ಮೇಲೆ ಇಂತಹ ಕ್ರಮ ಕೈಗೊಂಡಿದ್ದೀರಿ ಎಂದು ಗೃಹ ಇಲಾಖೆ ಮತ್ತು ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ. ಈ ಕುರಿತು ಎರಡೇ ದಿನಗಳಲ್ಲಿ ಸಂಪೂರ್ಣ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನೋಟೀಸು ಜಾರಿಮಾಡಿದೆ.
ರಾಮ್ ಲೀಲಾ ಮೈದಾನದಲ್ಲಿ ಕಪ್ಪುಹಣ ವಾಪಸಾತಿಗೆ ಆಗ್ರಹಿಸಿ ಉಪವಾಸ ನಿರಶನ ಕೈಗೊಂಡಿರುವ ಬಾಬಾ ರಾಮದೇವ್ ಮತ್ತವರ ಅಪಾರ ಸಂಖ್ಯೆಯ ಬೆಂಬಲಿಗರು ನಿದ್ರಿಸುತ್ತಿದ್ದ ವೇಳೆ ಏಕಾಏಕಿ ಧಾವಿಸಿದ ಪೊಲೀಸರು, ಮಕ್ಕಳು, ಮಹಿಳೆಯರು, ಹಿರಿಯರು ಎನ್ನದೆ ಎಲ್ಲರನ್ನೂ ಎಬ್ಬಿಸಿ ಲಾಠಿ ಚಾರ್ಜ್ ಕೂಡ ಮಾಡಿದ್ದರು.
ಪೊಲೀಸರ ಈ ಕೃತ್ಯ ಮಾನವ ಹಕ್ಕಿನ ಉಲ್ಲಂಘನೆಯಾಗಿದ್ದು ಇದೊಂದು ಅಸಂವಿಧಾನಿಕ ಕ್ರಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಆಯೋಗ, ಅಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುತ್ತಿರುವವರ ಮೇಲೆ ಲಾಠಿಚಾರ್ಜ್ ಮಾಡಿರುವುದಕ್ಕೆ ಕಾರಣ ನೀಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ, ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಗರ ಪೊಲೀಸ್ ಆಯುಕ್ತರಿಗೆ ನೋಟೀಸು ನೀಡಿದೆ.
ಪೆಂಡಲ್‌ನ ಕೆಳಗೆ ನಿದ್ರಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸುತ್ತಿದ್ದ ಲಾಠಿ ಚಾರ್ಜ್, ಅಶ್ರುವಾಯು ಸಿಡಿಸಿರುವುದನ್ನು ಮಾಧ್ಯಮಗಳಲ್ಲಿ ನೋಡಿ ಮನನೊಂದಿರುವುದಾಗಿ ಆಯೋಗ ತಿಳಿಸಿದೆ.
ಪೊಲೀಸರ ಈ ಕ್ರಮದಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಹಿರಿಯರೂ ಗಾಯಗೊಂಡಿದ್ದು, ಇನ್ನೂ ಹಲವರು ಕಾಣೆಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ನೋಟೀಸಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಎಲ್ಲಾ ವಿವರಗಳನ್ನು ತನಗೆ ಸಲ್ಲಿಸುವಂತೆ ಸೂಚಿಸಿದೆ.
ಪೊಲೀಸರ ಈ ದಾಳಿಯನ್ನು ಖಂಡಿಸಿರುವ ಬಾಬಾ, ಸುಪ್ರೀಂ ಕೋರ್ಟು ಸ್ವಯಂಪ್ರೇರಿತವಾಗಿ ಇದನ್ನು ಗಮನಿಸಿ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಅದೇ ರೀತಿ ಮಾನವ ಹಕ್ಕು ಆಯೋಗ ಮತ್ತು ಮಹಿಳಾ ಹಕ್ಕು ಆಯೋಗಗಳು ಕೂಡ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿರುವುದು ಇಲ್ಲಿ ಉಲ್ಲೇಖಾರ್ಹ.