ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆ ತಂಡ ಬಾರದಿದ್ರೂ ಲೋಕಪಾಲ ಮಸೂದೆ ಸಿದ್ಧ: ಸಿಬಲ್ (Corruption | Lok Pal Bill | Anna Hazare | Kapil Sibal | Baba Ramdev)
ಹಜಾರೆ ತಂಡ ಬಾರದಿದ್ರೂ ಲೋಕಪಾಲ ಮಸೂದೆ ಸಿದ್ಧ: ಸಿಬಲ್
ನವದೆಹಲಿ, ಮಂಗಳವಾರ, 7 ಜೂನ್ 2011( 09:22 IST )
ಭ್ರಷ್ಟಾಚಾರದ ವಿರುದ್ಧ ಮತ್ತು ಕಾಳ ಧನ ವಾಪಸ್ ತರುವಂತೆ ಒತ್ತಾಯಿಸಿ ಯೋಗ ಗುರು ಬಾಬಾ ರಾಮದೇವ್ ನಡೆಸುತ್ತಿದ್ದ ಸತ್ಯಾಗ್ರಹವನ್ನು ಹತ್ತಿಕ್ಕಿದ ಕೇಂದ್ರ ಸರಕಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಕೆಗಳಿಂದ ವಿಚಲಿತವಾಗಿರುವ ಕಾಂಗ್ರೆಸ್, ನಾಗರಿಕ ಸಮಿತಿ ಸದಸ್ಯರಿಲ್ಲದಿದ್ದರೂ ಜೂನ್ 30ರೊಳಗೆ ನಾವು ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸಿಯೇ ತೀರುತ್ತೇವೆ ಎಂದು ಘೋಷಿಸುವುದರೊಂದಿಗೆ, ಭ್ರಷ್ಟಾಚಾರದ ವಿರುದ್ಧದ ಹೋರಾಟವು ವಿಫಲವಾಗುವ ಲಕ್ಷಣ ಗೋಚರಿಸತೊಡಗಿದೆ.
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹಾಗೂ ಶಾಂತಿ ಭೂಷಣ್ ಅವರು ಮಾಡಿದ ಟೀಕೆ "ಅಪ್ರಸ್ತುತ" ಎಂದು ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲ ಹೇಳಿದ ಜಂಟಿ ಕರಡು ಸಮಿತಿ ಸದಸ್ಯ, ಕೇಂದ್ರ ಟೆಲಿಕಾಂ ಸಚಿವ ಕಪಿಲ್ ಸಿಬಲ್, ನಮ್ಮನ್ನು (ಸರಕಾರವನ್ನು) ವಂಚಕರು ಎಂದು ದೂರಲಾಗುತ್ತಿದೆ ಎಂದರಲ್ಲದೆ, ಹಜಾರೆ ಅವರು ಸರಕಾರದ ಮೇಲೆ ಮಾಡಿದ ಭಾಷೆಯ ಪ್ರಯೋಗವನ್ನು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸುತ್ತೇವೆ ಎಂದಿದ್ದಾರೆ.
"ಜಂಟಿ ಕರಡು ಸಮಿತಿಯಲ್ಲಿರುವ ನಾಗರಿಕ ಸಮಾಜದ ಸದಸ್ಯರು ಭಾಗವಹಿಸಲಿ, ಬಿಡಲಿ. ನಾವಂತೂ ಜೂ.30ಕ್ಕೆ ಕರಡು ಮಸೂದೆ ಸಿದ್ಧಪಡಿಸಿಯೇ ತೀರುತ್ತೇವೆ" ಎಂದ ಸಿಬಲ್, ಸೋಮವಾರ ಹಜಾರೆ ತಂಡವು ಸಭೆಗೆ ಹಾಜರಾಗದಿದ್ದರೂ, ನಾವಂತೂ ಲೋಕಪಾಲ ಕರಡು ಮಸೂದೆಯ ಹಲವಾರು ವಿಭಾಗಗಳನ್ನು ಅಂತಿಮಗೊಳಿಸಿದ್ದೇವೆ ಎಂದು ನುಡಿದರು.
ಇದರೊಂದಿಗೆ, ಭ್ರಷ್ಟರಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂಬ ಆಶಯವುಳ್ಳ ಬಾಬಾ ರಾಮದೇವ್ ಸತ್ಯಾಗ್ರಹವನ್ನು ಹತ್ತಿಕ್ಕಿದಂತೆಯೇ, ಅಣ್ಣಾ ಹಜಾರೆಯ ಸತ್ಯಾಗ್ರಹವೂ ನಿಷ್ಫಲವಾಯಿತೇ ಎಂಬ ಶಂಕೆ ಹುಟ್ಟಲು ಕಾರಣವಾಗಿದೆ.
ಮುಂದಿನ ಸಭೆಯನ್ನು ಜೂನ್ 15ಕ್ಕೆ ನಿಗದಿಪಡಿಸಿದ್ದೇವೆ. ನಾಗರಿಕ ಸಮಾಜ ಸದಸ್ಯರಿಗೂ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಅವರು ಬಂದರೆ ಬರಲಿ, ಬಾರದಿದ್ದರೂ ನಾವು ಮಸೂದೆ ಸಿದ್ಧಪಡಿಸುತ್ತೇವೆ ಎಂದಿದ್ದಾರೆ ಬಾಬಾ ರಾಮದೇವ್ ಸತ್ಯಾಗ್ರಹ ಮಟ್ಟ ಹಾಕುವಲ್ಲಿ ಪ್ರಧಾನ ಸೂತ್ರದಾರನ ಪಾತ್ರ ವಹಿಸಿದ್ದು ಸಿಬಲ್.