ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಷ್ಮಾ ನರ್ತನದಿಂದ ಮಹಾತ್ಮ ಸಮಾಧಿ ಅಪವಿತ್ರ: ಕಾಂಗ್ರೆಸ್ (BJP Protest Against Atrocity on Baba Ramdev | Sushma Swaraj Dance)
PR
ಬಾಬಾ ರಾಮದೇವ್ ಅವರ ಅಹಿಂಸಾತ್ಮಕ ಸತ್ಯಾಗ್ರಹ ಹೋರಾಟವನ್ನು ಕೇಂದ್ರ ಸರಕಾರವು ದಮನ ಮಾಡಿರುವುದನ್ನು ಖಂಡಿಸಿ, ಬಿಜೆಪಿ ಮಹಾತ್ಮ ಗಾಂಧೀಜಿ ಸಮಾಧಿ ಇರುವ ರಾಜ್‌ಘಾಟ್‌ನಲ್ಲಿ ಪ್ರತಿಭಟನೆ ಮಾಡಿರುವುದು ಸುದ್ದಿಯಾಗದಿದ್ದರೂ, ಈ ಪ್ರತಿಭಟನೆಯ ವೈಖರಿ ಮಾತ್ರ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ನೃತ್ಯ ಮಾಡಿರುವುದರಿಂದ ಮಹಾತ್ಮ ಸಮಾಧಿಯ ಪಾವಿತ್ರ್ಯ ಹಾಳಾಗಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಬಿಜೆಪಿಯ ಹಿರಿಯ ನಾಯಕರೆಲ್ಲರೂ ಭಾಗಿಯಾಗಿದ್ದ ಈ ಪ್ರತಿಭಟನೆಯ ಬಗ್ಗೆ ದೇಶದ ಪ್ರಮುಖ ಸುದ್ದಿ ವಾಹಿನಿಗಳು ಯಾವುದೇ ಕವರೇಜ್ ನೀಡಿರಲಿಲ್ಲ. ಆದರೆ ಸುಷ್ಮಾ ಸ್ವರಾಜ್ ಅವರು ದೇಶಭಕ್ತಿ ಗೀತೆಯ ತಾಳಕ್ಕೆ ತಕ್ಕಂತೆ ಕುಣಿದ ವೀಡಿಯೋ ತುಣುಕುಗಳನ್ನಷ್ಟೇ ಪದೇ ಪದ್ ಪ್ರಸಾರ ಮಾಡಿರುವ ಬಗ್ಗೆ ಸ್ವತಃ ಸುಷ್ಮಾ ಅವರು ಟ್ವಿಟರ್ ಖಾತೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇಷ್ಟು ದೊಡ್ಡ ನಾಯಕರು ಸೇರಿ ಮಾಡಿದ ಪ್ರತಿಭಟನೆಯಲ್ಲಿ ಇವರಿಗೆ ತನ್ನ ನೃತ್ಯ ಮಾತ್ರವೇ ತೋರಿಸಲು ಸಿಕ್ಕಿತೇ ಎಂದು ಅವರು ವ್ಯಂಗ್ಯವಾಡಿದ್ದರು.

PR
ಇದೀಗ ಸುಷ್ಮಾ ನರ್ತನದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ, ಗಾಂಧಿ ಸಮಾಧಿ ಬಳಿ ಪ್ರತಿಪಕ್ಷ ನಾಯಕಿ ತನ್ನ ಗೆಳೆಯರೊಂದಿಗೆ ನರ್ತನ ಮಾಡುತ್ತಿರುವುದು ಇದೆಂತಹಾ ಉಪವಾಸ ಸತ್ಯಾಗ್ರಹ ಎಂದು ಪ್ರಶ್ನಿಸಿದ್ದಾರೆ.

ಆದರೆ ಭಾನುವಾರ ಸಂಜೆಯಿಂದ ಸೋಮವಾರ ಸಂಜೆವರೆಗೆ ಬಿಜೆಪಿ 24 ಗಂಟೆಗಳ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತನ್ನ ನೃತ್ಯವನ್ನು ಸಮರ್ಥಿಸಿಕೊಂಡಿರುವ ಸುಷ್ಮಾ, ತಾನು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುತ್ತಾ, ಸತ್ಯಾಗ್ರಹ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದೆ ಎಂದು ಹೇಳಿದ್ದಾರೆ.

ಆದರೆ ದ್ವಿವೇದಿ ಪ್ರತಿಕ್ರಿಯಿಸಿದ್ದು: "ಅವರೇನೂ ಆಚರಣೆ ಮಾಡುತ್ತಿದ್ದದ್ದು? ಒಂದೆಡೆ ಅಣ್ಣಾ ಹಜಾರೆಯನ್ನು ಮುಂದಿಟ್ಟುಕೊಂಡು, ಮತ್ತೊಂದೆಡೆ ತಮ್ಮ ಮುಖವಾಡವನ್ನಾಗಿ ಬಾಬಾ ರಾಮದೇವ್ ಅವರನ್ನು ಛೂಬಿಟ್ಟಿರುವುದಕ್ಕೆ ಅವರು ಈ ರೀತಿ ಸಂಭ್ರಮಾಚರಣೆ ಮಾಡುತ್ತಿದ್ದರೇ?"

ಆದರೆ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಮತ್ತಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, 'ಯೇ ದೇಶ್ ಹೈ ವೀರ್ ಜವಾನೋಂ ಕಾ' ಹಾಡಿಗೆ ಸುಷ್ಮಾ ಹೆಜ್ಜೆ ಹಾಕಿರುವುದು ಮಹಾತ್ಮ ಗಾಂಧೀಜಿ ಸಮಾಧಿಯ ಪಾವಿತ್ರ್ಯ ಹಾಳಾಯಿತು ಎಂದು ಹೇಳಿದ್ದಾರೆ.

ಸುಷ್ಮಾ ಇದಕ್ಕೆ ತನ್ನ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿ, ರಾತ್ರಿ 2 ಗಂಟೆ ಸುಮಾರಿಗೆ ತಾನು ಆ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೆ, ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಹುರಿದುಂಬಿಸಲು ಮುಂದಾದೆ. ಯಾವುದೇ ರೀತಿಯ ಪ್ರತಿಭಟನೆಗಳ ಸಂದರ್ಭದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುವುದು ನಮ್ಮ ಪಕ್ಷದ ಸಂಪ್ರದಾಯ. ಅದೇ ರೀತಿ ಪಕ್ಷದ ಹಿರಿಯ ಮುಖಂಡರು ಕೂಡ ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಜತೆಗೂಡುವುದು ಸಾಮಾನ್ಯ ಎಂದಿದ್ದಾರೆ.
ಇವನ್ನೂ ಓದಿ