ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಭೆ ನೇರ ಪ್ರಸಾರಕ್ಕೆ ಯುಪಿಎ ಹೆದರೋದೇಕೆ?: ಹಜಾರೆ (Anna Hazare | Joint Draft Committe | Lokpal Bill | Kejriwal)
ತಮ್ಮ ವಿರುದ್ಧ ಪ್ರತಿಭಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪ್ರಬಲ ಸಂದೇಶ ನೀಡಿರುವ ಕೇಂದ್ರ ಸರಕಾರ ಮತ್ತು ಪೊಲೀಸರೊಂದಿಗೆ ತಿಕ್ಕಾಟ ಬೇಡ ಎಂದುಕೊಂಡು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬಣವು ಬುಧವಾರ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಸ್ಥಳವನ್ನು ಗಾಂಧಿ ಸಮಾಧಿಯಿರುವ ರಾಜ್‌ಘಾಟ್‌ಗೆ ಸ್ಥಳಾಂತರಿಸಿದೆ. ಇದೇ ವೇಳೆ, ಲೋಕಪಾಲ ಕರಡು ಸಮಿತಿ ಸಭೆಗಳ ನೇರ ಪ್ರಸಾರಕ್ಕೆ ಆಕ್ಷೇಪಿಸುವ ಸರಕಾರವು, ಏನು ಚರ್ಚೆ ನಡೆಯಿತೆಂಬುದನ್ನು ಜನರಿಂದ ಮುಚ್ಚಿಡಲು ಪ್ರಯತ್ನಿಸುತ್ತಿರುವುದೇಕೆ ಎಂದು ಹಜಾರೆ ಬಣ ಪ್ರಶ್ನಿಸಿದೆ.

ಜಂತರ್ ಮಂತರ್ ಸುತ್ತಮುತ್ತ ಜೂ.11ರವರೆಗೆ ನಿಷೇಧಾಜ್ಞೆ ಇದ್ದು, ರಾಜ್ ಘಾಟ್‌ನಲ್ಲಿ ಸೆಕ್ಷನ್ ಜಾರಿಯಾಗಿರುವುದಿಲ್ಲ. ಹೀಗಾಗಿ ಈ ಸ್ಥಳದಲ್ಲಾದರೂ ಪ್ರತಿಭಟನೆ ಮಾಡಲು ಅವಕಾಶ ಕೇಳಿದಾಗ ದೆಹಲಿ ಪೊಲೀಸರು ತಮ್ಮದೇನೂ ಅಭ್ಯಂತರವಿಲ್ಲವೆಂದಿದ್ದಾರೆ ಎಂದು ಅಣ್ಣಾ ಹಜಾರೆ ಬಣದ ಅರವಿಂದ ಕೇಜ್ರಿವಾಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭ್ರಷ್ಟಾಚಾರ ವಿರುದ್ಧ ಪ್ರತಿಭಟಿಸುತ್ತಿದ್ದ ಬಾಬಾ ರಾಮದೇವ್ ಮತ್ತು ಅವರ ಬೆಂಬಲಿಗರ ಮೇಲೆ ಅಮಾನವೀಯವಾಗಿ, ಅಪ್ರಜಾಸತ್ತಾತ್ಮಕವಾಗಿ ದೌರ್ಜನ್ಯ ಎಸಗಿದ ಸರಕಾರದ ಕ್ರಮವನ್ನು ಖಂಡಿಸಿ, ರಾಜ್‌ಘಾಟ್‌ನಲ್ಲಿ ಬುಧವಾರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ. ದಿನವಿಡೀ ಪ್ರಾರ್ಥನೆ ಮತ್ತು ನಿರಶನ ನಡೆಯಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.

ಲೋಕಪಾಲ ಜಂಟಿ ಕರಡು ಸಮಿತಿ ಬಹಿಷ್ಕರಿಸಿಲ್ಲ
ಅಣ್ಣಾ ಹಜಾರೆ ಬಳಗವು ಲೋಕಪಾಲ ಜಂಟಿ ಕರಡು ಸಮಿತಿಯನ್ನು ಬಹಿಷ್ಕರಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿರುವ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅಣ್ಣಾ ಹಜಾರೆ ಬಳಗವು, ತಾವೆಂದಿಗೂ ಸಮಿತಿಯನ್ನು ಬಹಿಷ್ಕರಿಸಿಲ್ಲ. ಆದರೆ, ನಾಗರಿಕ ಸಮಾಜದ ಜನರಿಲ್ಲದೆಯೂ ಕೂಡ, ತಾವಾಗಿಯೇ ಲೋಕಪಾಲ ಮಸೂದೆ ಕರಡು ಸಿದ್ಧಪಡಿಸುತ್ತೇವೆ ಎಂದು ದರ್ಪದಿಂದ ಹೇಳಿರುವುದು ತಮಗೆ ನೋವು ತಂದಿದೆ ಎಂದು ಹೇಳಿದೆ.

ಮಂಗಳವಾರ ದೆಹಲಿಯಲ್ಲಿ ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅಣ್ಣಾ ಹಜಾರೆ ಬಳಗದ ಅರವಿಂದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಮತ್ತು ಕಿರಣ್ ಬೇಡಿ ಅವರು ಉಪಸ್ಥಿತರಿದ್ದರು.

ಜೂನ್ 15ರ ಸಭೆಗೆ ನಾಗರಿಕ ಸಮಿತಿ ಸದಸ್ಯರು ಖಂಡಿತವಾಗಿಯೂ ಹಾಜರಾಗುತ್ತಾರೆ. ಒಂದು ಒಳ್ಳೆಯ ಮಸೂದೆ ಜಾರಿಗೆ ಬಂದಿತೆಂದರೆ ಮತ್ತು ಭ್ರಷ್ಟಾಚಾರವನ್ನು ತಡೆಯುವಷ್ಟು ಸಮರ್ಥವಾಗುತ್ತದೆ ಎಂದಾದರೆ, ಅದರ ಶ್ರೇಯಸ್ಸು ಸರಕಾರಕ್ಕೇ ದೊರೆಯುತ್ತದೆ ಎಂದು ಕಿರಣ್ ಬೇಡಿ ಹೇಳಿದರು.

ಬಾಬಾ ರಾಮದೇವ್ ಬೆಂಬಲ
ಇದೇ ವೇಳೆ, ಹರಿದ್ವಾರದಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸಿರುವ ಯೋಗ ಗುರು ಬಾಬಾ ರಾಮದೇವ್ ಅವರು, ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.

ಸರಕಾರವು ಎಲ್ಲ ರೀತಿಯ ಪ್ರತಿಭಟನೆ ಹತ್ತಿಕ್ಕಲು ಸನ್ನದ್ಧವಾಗಿದೆ, ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ತಾನು ಸದಾ ಸಿದ್ಧ ಎಂದು ಘೊಷಿಸಿದರಲ್ಲದೆ, ತಮ್ಮ ಸತ್ಯಾಗ್ರಹವು ನಿರಂತರವಾಗಿದ್ದು, ಬೇಡಿಕೆ ಈಡೇರುವವರೆಗೂ ದೇಶಾದ್ಯಂತ ಸತ್ಯಾಗ್ರಹವನ್ನು ಮುಂದುವರಿಸುತ್ತೇವೆ ಎಂದು ಘೋಷಿಸಿದರು.

ನೇರ ಪ್ರಸಾರಕ್ಕೆ ಸರ್ಕಾರ ಹೆದರುತ್ತಿರುವುದೇಕೆ?
ಇದೇ ವೇಳೆ, ಲೋಕಪಾಲ ಮಸೂದೆ ರಚನೆ ಬಗ್ಗೆ ಕೇಂದ್ರ ಸರಕಾರವು ನಾಗರಿಕ ಸಮಾಜದ ಸದಸ್ಯರೊಂದಿಗೆ ದುರಹಂಕಾರ, ದರ್ಪ ತೋರಿಸಬಾರದು ಎಂದಿರುವ ಆರ್‌ಟಿಐ ಹೋರಾಟಗಾರರೂ ಆಗಿರುವ ಕೇಜ್ರಿವಾಲ್, ಸರಕಾರವು ಜಂಟಿ ಕರಡು ಸಮಿತಿಯ ಚರ್ಚೆಗಳನ್ನು ನೇರ ಪ್ರಸಾರ ಮಾಡಲು ಹಿಂದೇಟು ಹಾಕುತ್ತಿರುವುದೇಕೆ, ಜನರಿಂದ ಏನನ್ನು ಬಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಸರಕಾರವನ್ನು, ಸರಕಾರದ ಪ್ರತಿನಿಧಿಗಳನ್ನು ಸುಳ್ಳುಗಾರರು, ವಂಚಕರು ಎಂದೆಲ್ಲಾ ಕರೆಯುತ್ತಿದ್ದಾರೆ ಎಂದು ಕಪಿಲ್ ಸಿಬಲ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನಾವೆಂದಿಗೂ ಯಾರ ಮೇಲೂ ವೈಯಕ್ತಿಕ ದಾಳಿ ಮಾಡಿಲ್ಲ. ಇದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಈ ವ್ಯವಸ್ಥೆ ಸುಧಾರಣೆಯಾಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದರು.

ಸರಕಾರವು ಯಾವುದೇ ಹೆಜ್ಜೆಯಲ್ಲಿಯೂ ಪಾರದರ್ಶಕತೆ ತೋರುತ್ತಿಲ್ಲ ಎಂದು ಕಿರಣ್ ಬೇಡಿ ಧ್ವನಿಗೂಡಿಸಿದರು.

ನಾವು ಮತ್ತೊಂದು ಪತ್ರ ಬರೆಯುತ್ತೇವೆ. ಜಂಟಿ ಸಮಿತಿಯ ಸಭೆಯ ಕಲಾಪಗಳನ್ನು ನೇರ ಪ್ರಸಾರ ಮಾಡಲು ಏನು ಅಡ್ಡಿಯಿದೆ ಎಂದು ಕೇಳುತ್ತೇವೆ. ವೀಡಿಯೋ ದಾಖಲೀಕರಣಕ್ಕೆ ಸರಕಾರ ಯಾಕೆ ಹೆದರುತ್ತಿದೆ ಎಂಬುದು ನಮಗೆ ತಿಳಿಯಬೇಕು ಎಂದು ಕೇಜ್ರಿವಾಲ್ ಹೇಳಿದರು.

ಇದಕ್ಕೆ ಮೊದಲು, ಅಣ್ಣಾ ಹಜಾರೆ ಬಣದ ಬಗ್ಗೆ ತನ್ನ ನಿಲುವು ತೀಕ್ಷ್ಣಗೊಳಿಸಿದ್ದ ಕೇಂದ್ರ ಸರಕಾರವು, ಲೋಕಪಾಲ ಮಸೂದೆ ಕುರಿತಾಗಿ ಮುಂದೆ ಮಾತುಕತೆ ಏನೂ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು. ಸರಕಾರಕ್ಕೆ ತನ್ನದೇ ಆದ ಕಾರ್ಯವಿಧಾನವಿದ್ದು, ಕಾನೂನು ರೂಪಿಸುವುದು ಕೂಡ ಸರಕಾರದ ಆದ್ಯ ಹಕ್ಕು. ಹೆಚ್ಚೆಂದರೆ ಸರಕಾರವು ನಾಗರಿಕ ಸಮಾಜದ ಸಲಹೆಗಳನ್ನು ಕೇಳಬಹುದಷ್ಟೇ. ಅಂತಿಮ ತೀರ್ಮಾನ ಸರಕಾರದ್ದು ಎಂದು ಕೇಂದ್ರವು ಸ್ಪಷ್ಟಪಡಿಸಿತ್ತು. ಅಲ್ಲದೆ, ನಾಗರಿಕ ಸಮಾಜದ ಸದಸ್ಯರು ಬಾರದಿದ್ದರೂ ಜೂ.30ರೊಳಗೆ ತಾವು ಕರಡು ಸಿದ್ಧಪಡಿಸಿಬಿಡುತ್ತೇವೆ ಎಂದು ಘೋಷಿಸಿರುವುದು, ತನಗೆ ಮನಬಂದಂತೆ ಈ ಭ್ರಷ್ಟಾಚಾರ-ವಿರೋಧೀ ಕಾಯ್ದೆಯನ್ನು ರೂಪಿಸಿ ಕೈತೊಳೆದುಕೊಳ್ಳುತ್ತದೆಯೇ ಎಂಬ ಆತಂಕಕ್ಕೂ ಕಾರಣವಾಗಿತ್ತು.

ಸರಕಾರ ಸುಳ್ಳು ಹೇಳುತ್ತಿದೆ, ಷಡ್ಯಂತ್ರ ಮಾಡುತ್ತಿದೆ ಎಂದು ಅಣ್ಣಾ ಹಜಾರೆ ಹೇಳಿರುವುದನ್ನು ಸಮರ್ಥಿಸಿಕೊಂಡಿರುವ ಕೇಜ್ರಿವಾಲ್, ಸರಕಾರ ಹೀಗೆ ಮಾಡಿದ್ದು ಹೌದು. ಕಲೆದ 62 ವರ್ಷಗಳಿಂದ ನಾಗರಿಕ ಸಮಾಜದ ಬಗ್ಗೆ ಯಾವುದೇ ಸರಕಾರ ತಲೆಕೆಡಿಸಿಕೊಳ್ಳದೆ, ತಮಗೆ ಬೇಕಾದಂತೆ ಕಾನೂನು ರೂಪಿಸಿತ್ತು. ಈಗಲಾದರೂ, ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ, ಒಳ್ಳೆಯ ಕಾನೂನು ರೂಪಿಸುವ ನಿಟ್ಟಿನಲ್ಲಿ ಅವಕಾಶ ಕೊಡಿ ಅಂತ ಕೇಳುತ್ತಿದ್ದೇವೆ ಎಂದರು.
ಇವನ್ನೂ ಓದಿ