ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಜಾಪ್ರಭುತ್ವದ ಕಳಂಕ, ಇತಿಹಾಸ ಕ್ಷಮಿಸಲ್ಲ: ಪ್ರಧಾನಿಗೆ ಬಾಬಾ (Baba Ramdev | Manmohan Singh | Black Money| Janardan Dwivedi)
ಕಪ್ಪುಹಣದ ವಿರುದ್ಧ ನಿರಶನ ಕೈಗೊಂಡಿರುವ ತನ್ನ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಕೇಂದ್ರದ ಹೇಯ ವರ್ತನೆಗೆ ಕೆಂಡ ಕಾರಿರುವ ಯೋಗ ಗುರು ಬಾಬಾ ರಾಮದೇವ್, ನನ್ನ ಮೇಲೆ ಮತ್ತು ಪ್ರತಿಭಟನಾಕಾರರ ಮೇಲೆ ನಡೆಸಿದ ದೌರ್ಜನ್ಯವನ್ನು ನಾನು ಕ್ಷಮಿಸಬಹುದು ಆದರೆ ಪ್ರಧಾನಿಯ ಮಾಡಿದ ರಾಜಕೀಯ 'ಪಾಪ'ವನ್ನು ಇತಿಹಾಸ ಎಂದಿಗೂ ಕ್ಷಮಿಸದು ಎಂದರು.

ರಾಜಕೀಯ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಪ್ರಧಾನಿ ಮನಮೋಹನ್ ಸಿಂಗ್ ಮಾಡಿದ ದೌರ್ಜನ್ಯವನ್ನು ವೈಯಕ್ತಿಕವಾಗಿ ನಾನು ಕ್ಷಮಿಸಿದ್ದೇನೆ. ಆದರೆ ಭಾರತದ ಇತಿಹಾಸವೇಕೆ, ಇಡೀ ವಿಶ್ವದ ಚರಿತ್ರೆ ಕೂಡ ಈ ದುಷ್ಕೃತ್ಯವನ್ನು ಕ್ಷಮಿಸುವುದಿಲ್ಲ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಧಾನಿ ಕಳಂಕ ತಂದಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಆದದ್ದೇನೊ ದುರದೃಷ್ಟಕರ, ಆದರೆ ಬೇರೆ ದಾರಿಯೇ ಇರಲಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ರಾಮದೇವ್ ಪ್ರತಿಕ್ರಿಯಿಸುತ್ತಿದ್ದರು.

ಶಿವಾಜಿಯ ಮಾರ್ಗ ಅನುಸರಿಸಿದೆ
ನಿರಶನ ನಿರತರಾಗಿದ್ದವರ ಮೇಲೆ ದಿಢೀರ್ ಪೊಲೀಸ್ ದಾಳಿ ಸಂದರ್ಭ ಮಹಿಳೆಯರ ಉಡುಪಿನಲ್ಲಿ ಪಾರಾಗಲು ಯತ್ನಿಸಿದ ತಮ್ಮನ್ನು ಅಪಹಾಸ್ಯ ಮಾಡುತ್ತಿರುವ ಕಾಂಗ್ರೆಸ್ ಟೀಕೆಗೆ ಉತ್ತರಿಸುತ್ತಾ ಬಾಬಾ, ಈ ರಾಷ್ಟ್ರದ ರಕ್ಷಣೆ ಉದ್ದೇಶದಿಂದ ಪ್ರಾಣ ರಕ್ಷಿಸಿಕೊಳ್ಳಲು ಮರಾಠಾ ದೊರೆ ಛತ್ರಪತಿ ಶಿವಾಜಿ ಕೂಡ ತನ್ನ ಮಹಿಳೆಯ ದಿರಿಸಿನಲ್ಲಿ ಪಲಾಯನ ಮಾಡಿದ್ದರು ಎಂದು ನೆನಪಿಸುತ್ತಾ, ರಾಷ್ಟ್ರ ರಕ್ಷಣೆಗಾಗಿ ಯಾರಾದರೂ ಜೀವ ರಕ್ಷಿಸಿಕೊಂಡರೆ ಕಾಂಗ್ರೆಸ್ಸಿಗರಿಗೆ ಆಗದು. ಅವರಿಗೆ ಶಿವಾಜಿ ಆದರ್ಶ ವ್ಯಕ್ತಿಯಾಗಿ ಕಾಣುತ್ತಿಲ್ಲ. ಇವರಿಗೇನಿದ್ದರೂ ಭಯೋತ್ಪಾದಕರನ್ನು ರಕ್ಷಿಸಿ ಬಾಬಾನನ್ನು ಕೊಲ್ಲಬೇಕೆಂಬುದೇ ಗುರಿಯಾಗಿದೆ ಎಂದು ಕಿಡಿಕಾರಿದರು.

ಒಬ್ಬ ಸತ್ಯಾಗ್ರಹಿ ಯಾವತ್ತೂ ಜೀವಕ್ಕೆ ಅಂಜಿ ಮಹಿಳಾ ವೇಷ ತೊಟ್ಟು ಓಡಿ ಹೋಗುವುದಿಲ್ಲ. ಸತ್ಯಾಗ್ರಹಿಯಾಗಿರುವವರು ಯಾವತ್ತೂ ತನ್ನ ಪ್ರಾಣತ್ಯಾಗಕ್ಕೆ ಸಿದ್ಧರಾಗಿರಬೇಕು ಎಂದು ಬಾಬಾ ಪರಾರಿ ಯತ್ನವನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಸೋಮವಾರ ಲೇವಡಿಯಾಡಿದ್ದರು.

ಉಪವಾಸ ನಿಲ್ಲಿಸಲು ಕೇಂದ್ರ ನಡೆಸಿದ ಮಾತುಕತೆ ವಿಫಲವಾದಾಗ, ರಾಮ್ ಲೀಲಾ ಮೈದಾನದಲ್ಲಿ ನಿರಶನದಲ್ಲಿ ತೊಡಗಿದ್ದ ತಮ್ಮನ್ನು ಮುಗಿಸಲು ಐದು ರೀತಿಯ ಸಂಚುಗಳನ್ನು ನಡೆಸಲಾಯಿತು ಎಂದು ಬಾಬಾ ಆರೋಪಿಸಿದರು.

ಮೈದಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕೆಮರಾಗಳನ್ನು ಬಲವಂತವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ತಮ್ಮ ಮೇಲೆ ಆರೋಪಗಳು ಬಾರದಂತೆ ಮಾಡಲು ಅದರಲ್ಲಿರುವ ಸಾಕ್ಷಾಧಾರಗಳನ್ನು ಅಳಿಸುವ ಅಥವಾ ತಿದ್ದುವ ಸಾಧ್ಯತೆಯಿದೆ ಎಂದು ಆರೋಪಿಸಿದ ಬಾಬಾ, ಪೊಲೀಸರು ದೌರ್ಜನ್ಯ ಎಸಗಿಲ್ಲ ಎಂದಾದರೆ ಸತ್ಯಾಗ್ರಹವನ್ನು ಸೆರೆಹಿಡಿಯಲು ನಾವೇ ಅಳವಡಿಸಿದ್ದ ಸಿಸಿಟಿವಿ ಕೆಮೆರಾಗಳನ್ನು ಬಲವಂತವಾಗಿ ಕಿತ್ತುಕೊಳ್ಳುವ ಔಚಿತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಪೊಲೀಸರ ಈ ವರ್ತನೆ ಅವರ ಗೂಂಡಾಗಿರಿಗೆ ಸ್ಪಷ್ಟ ನಿದರ್ಶನ ಎಂದರು.

ವಿನಾಕಾರಣ ನಮ್ಮ ಬೆಂಬಲಿಗರ ಮೇಲೆ ಸುಳ್ಳು ಕೇಸು ದಾಖಲಿಸಿ ಅವರನ್ನು ಸೆರೆಗೆ ದಬ್ಬಿರುವ ಪೊಲೀಸರು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ತಾವೆಸಗಿದ ದೌರ್ಜನ್ಯವನ್ನೆಲ್ಲಾ ತೆಗೆದು ಹಾಕಿ ನಂತರ ಬಿಡುಗಡೆ ಮಾಡುತ್ತಾರೆ. ಆಗ ತಾವು ಸುಲಭವಾಗಿ ಪಾರಾಗಬಹುದೆಂಬುದು ಲೆಕ್ಕಾಚಾರ ಎಂದು ಪೊಲೀಸರ ಮೇಲೆ ಕಿಡಿಕಾರಿದರು ಬಾಬಾ.

ತಾನು ಕುಳಿತಿದ್ದ ವೇದಿಕೆಯಲ್ಲೇ ಕತ್ತು ಹಿಸುಕಿ, ವೇದಿಕೆಗೆ ಬೆಂಕಿ ಹಚ್ಚಿ ಅಥವಾ ಶೂಟ್ ಮಾಡಿ ಕೊಲ್ಲುವ ಹುನ್ನಾರಗಳು ನಡೆದಿರಬೇಕು ಎಂದೂ ಬಾಬಾ ಆರೋಪಿಸಿದರು.
ಇವನ್ನೂ ಓದಿ