ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ನೇಪಾಳಿ ಅಲ್ಲ: ಪ್ರತ್ಯಕ್ಷನಾಗಿ ಕಣ್ಣೀರಿಟ್ಟ ಬಾಬಾ ಆಪ್ತ (Acharya Balakrishna | Nepal | Baba Ramdev | Aide | Ramlila Maidan)
PTI
ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಸಂದರ್ಭ ಯೋಗ ಗುರು ಬಾಬಾ ರಾಮದೇವ್ ಅವರ ಆಪ್ತ ಸಹಾಯಕ ಆಚಾರ್ಯ ಬಾಲಕೃಷ್ಣ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾತೋರಾತ್ರಿ ಪೊಲೀಸರು ಲಾಠಿ ಬೀಸಿ ಸತ್ಯಾಗ್ರಹಿಗಳನ್ನು ಓಡಿಸಿದ ಮೂರು ದಿನಗಳ ಬಳಿಕ ಮಂಗಳವಾರ ಹರಿದ್ವಾರದಲ್ಲಿ ಧುತ್ತನೇ ಪ್ರತ್ಯಕ್ಷರಾದ ಬಾಲಕೃಷ್ಣ ಆಚಾರ್ಯ ಅವರು, ತಾವು ಪಲಾಯನ ಮಾಡಿಲ್ಲ, ತಾನು ಭಾರತೀಯನೇ ಹೊರತು ನೇಪಾಳಿಯಲ್ಲ ಎಂದು ಕಣ್ಣೀರಿಡುತ್ತಾ ಸ್ಪಷ್ಟನೆ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಬಾಬಾ ಅವರನ್ನು ಕೊಲ್ಲಲು ಸರಕಾರವು ಪ್ರಯತ್ನ ಮಾಡಿತು. ಪೊಲೀಸರು ಇದರಲ್ಲಿ ವಿಫಲರಾದಾಗ, ಅವರು ಮಹಿಳೆಯರ ವೇಷ ಧರಿಸಿ ಪಲಾಯನ ಮಾಡಿದರು ಎಂದೆಲ್ಲಾ ಆರೋಪಿಸಿದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ ಆಚಾರ್ಯ ಬಾಲಕೃಷ್ಣ, ಕಣ್ಣೆದುರೇ ಪೊಲೀಸರು ಅಲ್ಲಿ ನೆರೆದಿದ್ದ ಸತ್ಯಾಗ್ರಹಿಗಳ ಮೇಲೆ ಯದ್ವಾತದ್ವ ಹೊಡೆಯುತ್ತಿದ್ದುದನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು.

ತಾನೆಲ್ಲಿಗೂ ಓಡಿ ಹೋಗಿಲ್ಲ ಅಥವಾ ಪೊಲೀಸರು ತನ್ನನ್ನು ಬಂಧಿಸಿಲ್ಲ. ಆ ಕರಾಳ ರಾತ್ರಿಯಿಡೀ ಪೆಂಡಾಲ್‌ನ ಮೂಲೆ ಮೂಲೆಯಲ್ಲಿ ಜೀವ ಉಳಿಸಿಕೊಳ್ಳಲು ಅಡಗಿ ಕೂರುತ್ತಾ, ನಿಷ್ಪಾಪಿ ಸತ್ಯಾಗ್ರಹಿಗಳ ಮೇಲೆ ಪೊಲೀಸರು ನಡೆಸುತ್ತಿದ್ದ ದೌರ್ಜನ್ಯವನ್ನು ಕಣ್ಣಾರೆ ಕಂಡವ ನಾನು. ಕಣ್ಣೆದುರೇ ಇಂತಹಾ ಕರಾಳ ಘಟನೆ ನಡೆಯುತ್ತಿದ್ದರೂ ಅಧಿಕಾರಸ್ಥರ ದಬ್ಬಾಳಿಕೆಗೆ ಏನೂ ಮಾಡಲಾರದ ಸ್ಥಿತಿಯಲ್ಲಿದ್ದ ನಾನು ಕಣ್ಣೀರಿಡುತ್ತಲೇ ಅಲ್ಲಿ ಬಾಬಾ ಅವರನ್ನು ನಂಬಿ ಸತ್ಯಾಗ್ರಹಕ್ಕೆ ಬಂದಿದ್ದವರನ್ನು ದೆಹಲಿಯಿಂದ ಹರಿದ್ವಾರಕ್ಕೆ ಕಳುಹಿಸುವ ಕಾರ್ಯದಲ್ಲಿ ನಿರತನಾಗಿದ್ದೆ ಎಂದರು.

ನಾನು ಭಾರತೀಯ, ನೇಪಾಳಿ ಅಲ್ಲ
ಆತನೊಬ್ಬ ನೇಪಾಳಿ, ನಕಲಿ ಪಾಸ್‌ಪೋರ್ಟ್ ಪಡೆದು ಭಾರತದಲ್ಲಿದ್ದಾನೆ ಎಂಬ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆರೋಪಗಳಿಗೆ ಉತ್ತರಿಸಿದ ಬಾಲಕೃಷ್ಣ, ತಮ್ಮ ತಂದೆ, ತಾಯಿ ನೇಪಾಳಿಗಳು ಹೌದು. ಆದರೆ ತಾನು ಹುಟ್ಟಿದ್ದು ಹರಿದ್ವಾರದಲ್ಲೇ. ಓದಿದ್ದು, ಬೆಳೆದದ್ದು ಎಲ್ಲವೂ ಭಾರತದಲ್ಲೇ. ಸಾಯುವುದೂ ಕೂಡ ಭಾರತ ಮಾತೆಯ ಸೇವೆಯಲ್ಲೇ ಎಂದು ಆಳುವವರಿಂದ ತಮಗಾದ, ಭಾರತೀಯರಿಗಾದ ಅನ್ಯಾಯ ನೆನಪಿಸಿಕೊಂಡು ಕಣ್ಣೀರಿಡುತ್ತಲೇ ಘರ್ಜಿಸಿದರು.

ಮಾತೆಯರು, ಮಕ್ಕಳೇನು ಪಾಪ ಮಾಡಿದ್ದರು?
ಅಧಿಕಾರದ ದುರುಪಯೋಗ ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಇದುವರೆಗೆ ಕೇಳಿದ್ದೆ. ಆದರೆ ಶನಿವಾರ ರಾತ್ರಿ ರಾಮಲೀಲಾ ಮೈದಾನದಲ್ಲಿ ನಡೆದ ಪೊಲೀಸರ ಹಿಂಸಾಚಾರವನ್ನು ನೋಡಿದಾಗ, ಅದನ್ನು ಕಣ್ಣಾರೆ ಕಂಡೆ. ಆ ಮಹಿಳೆಯರು, ಮಕ್ಕಳು ಏನು ಪಾಪ ಮಾಡಿದ್ದರು? ಮಾತೆಯರು, ಮಕ್ಕಳಿಗೆ ಯಾವ ಸ್ವಾರ್ಥವಿತ್ತು? ಇಷ್ಟೊಂದು ಜನರು ತಮ್ಮ ಪ್ರಾಣ ಒತ್ತೆಯಿಟ್ಟು ಪ್ರತಿಭಟನೆಗೆ ಬಂದಿರುವಾಗ ಏನೂ ಮಾಡಲಾರದೆ ಹೋದೆನಲ್ಲಾ ಎಂದು ಗದ್ಗದಿತರಾಗಿ ಪ್ರಶ್ನಿಸಿದ ಆಚಾರ್ಯ ಬಾಲಕೃಷ್ಣ, ತನಗೂ ಪೊಲೀಸರು ಹೊಡೆದಿದ್ದಾರೆ, ಬಡಿದಿದ್ದಾರೆ. ಸಂದು ಸಂದುಗಳಲ್ಲಿಯೂ ನೋವಿದೆ. ಆದರೆ ಗುರುತು ಹಿಡಿಯದ ಕಾರಣದಿಂದಾಗಿ ಪಾರಾದೆ. ಕುತ್ತಿಗೆಗೂ ಏಟು ಬಿದ್ದಿದೆ, ಹೀಗಾಗಿ ಧ್ವನಿಯೂ ಸೊರಗಿಹೋಗಿದೆ ಎಂದರು.

ಅವರೆಲ್ಲರೂ ನೋವಿನಿಂದ ರಸ್ತೆ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರೆ, ಅವರನ್ನು ಬಿಟ್ಟು ಹೋಗಲಾಗದೆ ಚಡಪಡಿಸಿದೆ. ಹಲವರಿಗೆ ಆರೈಕೆ ಮಾಡಿ, ಹರಿದ್ವಾರದತ್ತ ಕಳುಹಿಸುವ ವ್ಯವಸ್ಥೆ ಮಾಡಿದೆ. ಎಲ್ಲೆಲ್ಲೋ ಅಡಗಿ ಕುಳಿತಿದ್ದೆ. ಬಹುತೇಕ ಎಲ್ಲರೂ ಹರಿದ್ವಾರಕ್ಕೆ ಬಂದರು ಎಂದು ಖಚಿತವಾದ ಬಳಿಕ ತಾನೂ ಹರಿದ್ವಾರಕ್ಕೆ ಬಂದೆ ಎಂದು ಸ್ಪಷ್ಟಪಡಿಸಿದರು.

ಹೋರಾಟದ ಅಂತ್ಯವಲ್ಲ, ಆರಂಭ
ಈ ಸಂಘರ್ಷ ಏತಕ್ಕಾಗಿ ಎಂಬುದು ಭಾರತೀಯರೆಲ್ಲರಿಗೂ ಗೊತ್ತಿದೆ. ಇದು ಯಾವುದೇ ಪಕ್ಷಕ್ಕಾಗಿ, ಜಾತಿಗಾಗಿ, ಧರ್ಮಕ್ಕಾಗಿ ಅಲ್ಲವೇ ಅಲ್ಲ. ಕಾಳ ಧನದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಮತ್ತು ವ್ಯವಸ್ಥೆಯ ಪರಿವರ್ತನೆಗಾಗಿ ಈ ಹೋರಾಟ. ಇದು ಹೋರಾಟದ ಕೊನೆಯಲ್ಲ, ಇದು ಆರಂಭವಷ್ಟೇ ಎಂದು ಘೋಷಿಸಿದರು.

ಭಾರತ ಮಾತೆಯ ರಕ್ಷಣೆಗಾಗಿ ಅಷ್ಟೊಂದು ಜನ ಬಾಬಾರನ್ನು ಬೆಂಬಲಿಸಿ ಬಂದಿದ್ದಾರೆ. ಅವರಿಗೆಲ್ಲಾ ಇಂತಹಾ ಸ್ಥಿತಿಯಾಯಿತೇ ಎಂಬುದು ನೋಡಿ ಮರುಕವಾಯಿತು. ಬಾಬಾ ಕೂಡ ಉಪವಾಸವಿದ್ದಾರೆ. ಅಂತೆಯೇ ನನ್ನ ಮಾತಾ ಪಿತೃ ಸಮಾನರಾದವರು, ಅಣ್ಣ ತಂಗಿಯಂದಿರು ಕೂಡ ಇಲ್ಲಿ ಬಂದು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ, ನಮಗಾಗಿ, ಭಾರತ ಮಾತೆಗಾಗಿ ಪ್ರಾಣ ತ್ಯಾಗಕ್ಕೆ ಸಿದ್ಧರಾಗಿದ್ದಾರೆ. ಹೀಗಿರುವಾಗ ನಾನಾದರೂ ಹೇಗೆ ತಿಂದುಣ್ಣಬಹುದು? ನಾನು ಕೂಡ ನೀರು ಮಾತ್ರ ಕುಡಿದು, ಉಪವಾಸ ಮುಂದುವರಿಸುತ್ತಿದ್ದೇನೆ ಎಂದು ಆಚಾರ್ಯ ಬಾಲಕೃಷ್ಣ ನುಡಿದರು.
ಇವನ್ನೂ ಓದಿ