ಬಿಜೆಪಿಯನ್ನು ಡ್ಯಾನ್ಸರ್‌ಗಳ ಪಕ್ಷ ಎಂದು ಟೀಕಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಬಿಜೆಪಿ ನಾಯಕರು ಗಾಂಧಿ ಸಮಾಧಿಯ ಪಾವಿತ್ರ್ಯ ಹಾಳುಗೆಡಹಿದ್ದಾರೆ. ಪಕ್ಷವು ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯು ನೃತ್ಯಗಾರರ ಪಕ್ಷ ಆಗಿದ್ದು ಯಾವಾಗ? ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ದಿಗ್ವಿಜಯ್, ಬಿಜೆಪಿಯು ಮಹಾತ್ಮ ಗಾಂಧೀಜಿಯನ್ನು ಕೊಂದ ಸಿದ್ಧಾಂತಕ್ಕೆ ಸೇರಿದ ಪಕ್ಷ ಎಂದು ನಿಂದಿಸಿದರು. ಗಾಂಧೀಜಿ ಸಮಾಧಿ ಬಳಿ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ವಿಜಯ್ ಗೋಯಲ್ ಅವರು ನರ್ತಿಸಿರುವುದು ಅವರು ಈ ಸಿದ್ಧಾಂತಕ್ಕೆ ಸೇರಿದವರು ಎಂಬುದಕ್ಕೆ ಪುರಾವೆಯಾಗಿದೆ ಎಂದವರು ಟೀಕಿಸಿದರು.
ಆಡ್ವಾಣಿಗೆ ನಾಚಿಕೆಯಾಗಬೇಕಿತ್ತು... ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಮೇಲೂ ನಾಲಿಗೆ ಹರಿಯಬಿಟ್ಟ ದಿಗ್ವಿಜಯ್, ರಾಮಲೀಲಾ ಮೈದಾನದಲ್ಲಿ ನಡೆದ ಪೊಲೀಸ್ ದಾಳಿಯನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿರುವುದಕ್ಕೆ ನಾಚಿಕೆಯಾಗಬೇಕು, ಇದಲ್ಲದೆ, ಬಾಬಾ ರಾಮದೇವ್ ಅವರನ್ನು ಸ್ವಾಮೀ ವಿವೇಕಾನಂದರಿಗೆ ಹೋಲಿಸಿರುವುದಕ್ಕೂ ಅವರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.
ಬಿಜೆಪಿ ಕಾರ್ಯಕರ್ತರಿಗೆ ಸರಸ್ವತಿ ಶಿಶು ಮಂದಿರ (ಆರೆಸ್ಸೆಸ್ ನಡೆಸುತ್ತಿರುವ ಶಾಲಾ ಸಮೂಹ)ದಲ್ಲಿ ಬಾಲ್ಯದಿಂದಲೇ ಸುಳ್ಳು ಹೇಳುವುದರಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಹಳಿದ ದಿಗ್ವಿಜಯ್, ಬೇರೇನೂ ವಿಷಯ ಕೈಗೆ ಸಿಗದೇ ಹೋದಾಗ, ಅವರು ರಾಮನಿಂದ ರಾಮದೇವ್‌ರನ್ನು ಹಿಡಿದುಕೊಂಡರು ಎಂದರು. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆರೆಸ್ಸೆಸ್ ಪಾಲುದಾರಿಕೆ ಸಾಬೀತಾಗುತ್ತಿರುವಾಗ ಬಿಜೆಪಿಯು ಅಣ್ಣಾ ಹಜಾರೆ ಮೂಲಕ ಭ್ರಷ್ಟಾಚಾರ ವಿಷಯವನ್ನು ಕೆದಕಿತು. ಈ ವಿಷಯ ತಣ್ಣಗಾದಾಗ ಅದು ಬಾಬಾ ರಾಮದೇವ್‌ರನ್ನು ಬೆಂಬಲಿಸಿತು ಎಂದರು.
ಪ್ರಣಬ್ ಮುಖರ್ಜಿಯವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಬಾಬಾ ರಾಮದೇವ್ ಅವರನ್ನು ವಿಮಾನ ನಿಲ್ದಾಣದಲ್ಲಿ ಎದುರುಗೊಳ್ಳಲು ಹೋಗಿದ್ದರು ಎಂಬ ಅವರದೇ ಹೇಳಿಕೆ ಕುರಿತು ಕೇಳಿದಾಗ, ಮುಖರ್ಜಿ ಅವರು ಮಂತ್ರಿಯಾಗಿದ್ದಾಗ ಬಾಬಾ ಇನ್ನೂ ಹುಟ್ಟಿರಲಿಲ್ಲ ಎಂದರು. ಸರಕಾರಕ್ಕೆ ಕೂಡ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಕುರಿತು ಕಾಳಜಿ ಇದೆ ಎಂಬುದನ್ನು ತೋರಿಸಲು ಅವರು ಹೋಗಿದ್ದರು ಎಂದರು.
ಠಕ್ಕ ಠಕ್ಕ ಠಕ್ಕ ಪತ್ರಿಕಾಗೋಷ್ಠಿಯಾದ್ಯಂತ ಬಾಬಾ ರಾಮದೇವ್ ಅವರನ್ನು "ಠಕ್ಕ ಠಕ್ಕ" ಎಂದು ಕರೆಯುತ್ತಲೇ ಇದ್ದ ದಿಗ್ವಿಜಯ್ ಸಿಂಗ್, ಬಾಬಾ ಅವರು ಸಾರ್ವಜನಿಕರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಹೇಳಿದರು.
ಬಾಬಾ ಆಪ್ತ ಸಹಾಯಕ ಆಚಾರ್ಯ ಬಾಲಕೃಷ್ಣ ಕುರಿತು ಕೇಳಿದಾಗ, ಆತ ಎಲ್ಲೋ ನೇಪಾಳಕ್ಕೆ ಓಡಿ ಹೋಗಿರಬೇಕು. ಅಲ್ಲಿ ಕ್ರೈಮ್ ಮಾಡಿ ಇಲ್ಲಿಗೆ ಬಂದಿದ್ದಾನೆ. ಭಾರತೀಯ ಪಾಸ್‌ಪೋರ್ಟ್ ಪಡೆದುಕೊಂಡಿದ್ದಾನೆ. ಹರಿದ್ವಾರದ ಸಂತ ಸಮಾಜವು ಆತನ ಕೃತ್ಯಗಳ ಕುರಿತಾಗಿ ಕಳೆದ ಏಪ್ರಿಲ್ 29ರಂದು ರಾಷ್ಟ್ರಪತಿಗೆ ಮನವಿಯೊಂದನ್ನು ಸಲ್ಲಿಸಿದೆ. ಅದನ್ನು ಕೆದಕಲಾಗುತ್ತದೆ ಎಂದಿದ್ದಾರೆ.
ಆಚಾರ್ಯ ಬಾಲಕೃಷ್ಣ ಹರಿದ್ವಾರದಲ್ಲಿ ಕಾಣಿಸಿಕೊಂಡು, ತಾನು ಜನ್ಮತಃ ಭಾರತೀಯನೇ ಆಗಿದ್ದು, ಹರಿದ್ವಾರದಲ್ಲಿಯೇ ಹುಟ್ಟಿ ಬೆಳೆದದ್ದು ಎಂದು ಸ್ಪಷ್ಟಪಡಿಸಿರುವುದು ಇಲ್ಲಿ ಉಲ್ಲೇಖಾರ್ಹ.