ಹಿರಿಯ ಗಾಂಧಿವಾದಿ, ಸಮಾಜ ಸುಧಾರಕ ಅಣ್ಣಾ ಹಜಾರೆ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಮುಖವಾಡ ಎಂದು ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಟೀಕಿಸಿದ್ದಾರೆ.
ಅಣ್ಣಾ ಹಜಾರೆ ಮತ್ತು ಯೋಗ ಗುರು ಬಾಬಾ ರಾಮದೇವ್ ನಡೆಸುತ್ತಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಕೈವಾಡವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಆರ್‌ಎಸ್‌ಎಸ್ ಕೈವಾಡವಿದ್ದು, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರನ್ನು ಪ್ರಧಾನಿಯನ್ನಾಗಿಸುವ ಆತುರ ತೋರುತ್ತಿದೆ. ಜನತೆ ಆಯ್ಕೆ ಮಾಡುವವರೆಗೆ ಆರ್‌ಎಸ್‌ಎಸ್ ತಾಳ್ಮೆ ವಹಿಸಲಿ ಎಂದರು.
ಮುಂದುವರಿದು ಮಾತನಾಡಿದ ಅವರು, ಎರಡು ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ, ಅಡ್ವಾಣಿಯವರನ್ನು ತುರಾತುರಿಯಲ್ಲಿ ಪ್ರಧಾನಿಯನ್ನಾಗಿಸಲು ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ್ ಅವರಿಗೆ ಆರ್‌ಎಸ್‌ಎಸ್ ಹೊರಗುತ್ತಿಗೆ ನೀಡಿದೆ ಎಂದು ವ್ಯಂಗವಾಡಿದರು.
ಪ್ರಧಾನಮಂತ್ರಿಯವರನ್ನು ದೇಶದ 120 ಕೋಟಿ ಜನರು ಆಯ್ಕೆ ಮಾಡಿದ್ದಾರೆಯೇ ಹೊರತು ನಾಗರಿಕ ಸಮಿತಿಯಲ್ಲ. ಇಲ್ಲಿಯವರೆಗೆ ಅಣ್ಣಾ ಹಜಾರೆ ಟೀಮ್ ಏನು ಮಾಡುತ್ತಿತ್ತು? ಹಜಾರೆ ಮತ್ತು ರಾಮದೇವ್ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಮುಖವಾಡವಾಗಿದ್ದಾರೆ ಎಂದರು.
ಆರ್‌ಎಸ್‌ಎಸ್ ಮತ್ತು ಸಂಘಪರಿವಾರ, ಭ್ರಷ್ಟಾಚಾರದ ವಿರುದ್ಧ ಸತ್ಯಾಗ್ರಹ ಮಾಡುತ್ತಿಲ್ಲ. ಆತುರದಿಂದ ಅಧಿಕಾರ ಪಡೆಯಲು ತಂತ್ರಗಳನ್ನು ರೂಪಿಸಿವೆ. ಹಜಾರೆ ಮತ್ತು ರಾಮದೇವ್ ಒಂದೇ ನಾಣ್ಯದ ಎರಡು ಮುಖಗಳು ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಘ ಪರಿವಾರದ ಮುಖಂಡರು, ಗೋದ್ರಾದಂತೆ ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿ ರಾಮಲೀಲಾ ಮೈದಾನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರುವಂತೆ ಕರೆ ನೀಡಿದ್ದರು. ಮೈದಾನದ ಸುತ್ತಲಿನ ಪ್ರದೇಶದಲ್ಲಿ ಮುಸ್ಲಿಂರು ವಾಸಿಸುತ್ತಿರುವುದರಿಂದ ಶಾಂತಸ್ಥಿತಿಗೆ ಧಕ್ಕೆ ತಂದು ಮತ್ತೊಂದು ಕೋಮಗಲಭೆ ನಡೆಸುವ ಹುನ್ನಾರ ಹೊಂದಿದ್ದರು. ಆದ್ದರಿಂದ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಪೊಲೀಸರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಒಂದು ವೇಳೆ ರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರ್ಯಕರ್ತರನ್ನು ಚದುರಿಸದಿದ್ದಲ್ಲಿ, ಮತ್ತೊಂದು ಅನಾಹುತ ಹಾಗೂ ಘೋರ ದುರಂತಕ್ಕೆ ನಾಂದಿಯಾಗುತ್ತಿತ್ತು. ಪೊಲೀಸರು ತೆಗೆದುಕೊಂಡ ನಿರ್ಧಾರ ಸೂಕ್ತವಾಗಿದೆ ಎಂದರು.
ಯೋಗ ಗುರು ಬಾಬಾ ರಾಮದೇವ್ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರಿಂದ ಪೊಲೀಸ್ ಕಾರ್ಯಾಚರರಣೆ ನಡೆಸುವ ಅಗತ್ಯವಿತ್ತೇ? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಉತ್ತರ ಪ್ರದೇಶದಲ್ಲಿದ್ದ ಬಿಜೆಪಿ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಬಾಬರಿ ಮಸೀದಿಗೆ ಧಕ್ಕೆ ಮಾಡುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೆ, ಮಸೀದಿಯನ್ನು ಉರುಳಿಸಲಾಯಿತು ಎಂದು ಕಿಡಿಕಾರಿದರು.
ರಾಮಲೀಲಾ ಮೈದಾನದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಚದುರಿಸಲು ದೆಹಲಿ ಸರಕಾರ ತೆಗೆದುಕೊಂಡ ಕ್ರಮಗಳು ಸಮರ್ಥನೀಯವಾಗಿವೆ. ಇಲ್ಲವಾದಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗುತ್ತಿತ್ತು ಎಂದು ನುಡಿದರು.
ರಾಜಘಾಟ್‌ನಲ್ಲಿರುವ ಮಹಾತ್ಮಗಾಂಧಿ ಸಮಾದಿಯ ಬಳಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ನೃತ್ಯ ಮಾಡಿ, ಪಿತಾಮಹ ಗಾಂಧಿಜಿ ಹಾಗೂ ದೇಶದ ಜನತೆಗೆ ಅವಮಾನ ಮಾಡಿದ್ದಾರೆ. ಕೂಡಲೇ ವಿರೋಧ ಪಕ್ಷದ ನಾಯಕಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಒತ್ತಾಯಿಸಿದ್ದಾರೆ.