ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ಯಾಗ್ರಹಿಗಳ ಮೇಲೆ ಹಿಂಸೆ: ಅಣ್ಣಾ ಉಪವಾಸಕ್ಕೆ ಭಾರೀ ಬೆಂಬಲ (Anna Hazare | Fast | Rajghat | Ramlila Maidan | Baba Ramdev)
PTI
ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿ ಮಲಗಿ ನಿದ್ರಿಸುತ್ತಿದ್ದ ಸತ್ಯಾಗ್ರಹಿಗಳ ಮೇಲೆ ದೌರ್ಜನ್ಯ ಎಸಗಿದ ಸರಕಾರದ ಕ್ರಮವನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಬೆಂಬಲಿಗರು ಗಾಂಧಿ ಸಮಾಧಿಯಿರುವ ರಾಜ್‌ಘಾಟ್ ಬಳಿ ನಡೆಸುತ್ತಿರುವ ಒಂದು ದಿನದ ನಿರಶನ ಸತ್ಯಾಗ್ರಹಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದ್ದು, ಜನರು ರಾಜ್‌ಘಾಟ್‌ಗೆ ಹರಿದುಬರುತ್ತಿದ್ದಾರೆ.

ಸಾವಿರಾರು ಬೆಂಬಲಿಗರು ಅಣ್ಣಾ ಹಜಾರೆ ಜೊತೆ ಉಪವಾಸಕ್ಕೆ ಕೂತಿದ್ದು, ಇದರಲ್ಲಿ ನಾಗರಿಕ ಸಮಿತಿ ಸದಸ್ಯರಾದ ಶಾಂತಿ ಭೂಷಣ್, ಸ್ವಾಮಿ ಅಗ್ನಿವೇಶ್, ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ ಮುಂತಾದವರೂ ಇದ್ದಾರೆ. ಆದರೆ, ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಹಾಜರಿರಲಿಲ್ಲ. ದೆಹಲಿ ಪೊಲೀಸರು ಸಾಯಂಕಾಲದ ವರೆಗೆ ನಡೆಯುವ ಈ ಸತ್ಯಾಗ್ರಹಕ್ಕೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಿದ್ದಾರೆ.

ನೂರಾರು ಯುವಕರು ಗಾಂಧಿ ಟೋಪಿ ಧರಿಸಿ ಸತ್ಯಾಗ್ರಹ ನಡೆಸುತ್ತಿದ್ದರೆ, ಹಿರಿಯರು ಕೂಡ ಉಪವಾಸ ಮಾಡುತ್ತಿದ್ದಾರೆ. ಮಲಗಿ ನಿದ್ರಿಸುತ್ತಿದ್ದ ಮಹಿಳೆಯರು ಹಾಗೂ ಮಕ್ಕಳ ಮೇಲೆ ಕೇಂದ್ರ ಸರಕಾರವು ನಡೆಸಿದ ದೌರ್ಜನ್ಯವನ್ನು ಅಲ್ಲಿ ನೆರೆದಿದ್ದವರೆಲ್ಲರೂ ಆಕ್ರೋಶಭರಿತರಾಗಿ ಖಂಡಿಸುತ್ತಿದ್ದಾರೆ. ಇದು "ಭ್ರಷ್ಟಾಚಾರ, ಸುಲಿಗೆ, ಲಂಚಾವತಾರ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ" ಎಂದು ಕೇಜ್ರಿವಾಲ್ ಘೋಷಿಸಿದರು.

ಪ್ರತಿಭಟನೆ ಕಾರ್ಯಕ್ರಮದಲ್ಲಿ ಎಲ್ಲರೂ ಗಾಂಧೀಜಿ ಅವರ ನೆಚ್ಚಿನ 'ರಘುಪತಿ ರಾಘವ ರಾಜಾರಾಮ್' ಗೀತೆಯನ್ನು ಹಾಡುತ್ತಿದ್ದಾರೆ. ಅಣ್ಣಾ ಹಜಾರೆ ಕೂಡ "ವಂದೇ ಮಾತರಂ" "ಭಾರತ್ ಮಾತಾ ಕೀ ಜೈ" ಮತ್ತು "ಇನ್‌ಕ್ವಿಲಾಬ್ ಜಿಂದಾಬಾದ್" ಘೋಷಣೆಗಳನ್ನು ಕೂಗುತ್ತಿದ್ದು, ಜಾತ್ಯತೀತರು ಎಂದು ಹೇಳಿಕೊಳ್ಳುವವರ ಕಣ್ಣು ಕೆಂಪಗಾಗಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಬಳಿಕ ಸರ್ವಧರ್ಮ ಪ್ರಾರ್ಥನಾ ಸಭೆ ಏರ್ಪಡಿಸಲಾಗಿದ್ದು, ಆನಂತರ ಲೋಕಪಾಲ ಕರಡು ಮಸೂದೆ ಕುರಿತು ಚರ್ಚೆಯೂ ನಡೆಯಲಿದೆ.

ಕೇಂದ್ರ ಸರಕಾರವು ಬಾಬಾ ರಾಮದೇವ್ ಅವರ ಅಹಿಂಸಾ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು, ಇದರಿಂದ ಮುಂದೆ ಯಾರೂ ಉಪವಾಸ ಮಾಡದಂತೆ ಭೀತಿ ಹುಟ್ಟಿಸಲು ಪ್ರಯತ್ನಿಸಿದೆ. ಸರಕಾರವು ನಾಗರಿಕರ ಪ್ರತಿಭಟನೆಯ ಹಕ್ಕನ್ನೂ ಕಸಿದುಕೊಂಡು, ಪ್ರಜಾತಂತ್ರಕ್ಕೆ ಕಳಂಕ ತಂದಿದೆ ಎಂದು ಈ ಮೊದಲು ಅಣ್ಣಾ ಹಜಾರೆ ಅವರು ಕಿಡಿ ಕಾರಿದ್ದರು.

ಬಾಬಾ ರಾಮದೇವ್ ಬೆಂಬಲಿಗರೂ ಭಾಗಿ
ಈ ಮಧ್ಯೆ, ದೆಹಲಿಯ ರಾಮಲೀಲಾ ಮೈದಾನದಿಂದ ಓಡಿಸಲ್ಪಟ್ಟ ಬಾಬಾ ರಾಮದೇವ್ ಅವರ ಬೆಂಬಲಿಗರನೇಕರು ಅಣ್ಣಾ ಹಜಾರೆ ಸತ್ಯಾಗ್ರಹವನ್ನು ಸೇರಿಕೊಳ್ಳುತ್ತಿದ್ದು, ಬಾಬಾ ರಾಮದೇವ್ ಅವರೇ ಸ್ವತಃ ತಮ್ಮ ಅನುಯಾಯಿಗಳಿಗೆ ಕರೆ ನೀಡಿ, ಉಪವಾಸದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.

ದೇಶಾದ್ಯಂತ ಪ್ರತಿಭಟನೆ
ಇದೇ ವೇಳೆ, ದೇಶದ ವಿವಿಧೆಡೆಯೂ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಅವರನ್ನು ಬೆಂಬಲಿಸಿ, ಶಾಂತಿಪೂರ್ಣ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಎಸಗಿ, ಜನರ ಹಕ್ಕುಗಳನ್ನು ದಮನಿಸುವ ಕಾರ್ಯ ಮಾಡಿದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಕೋಲ್ಕತಾ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಮುಂತಾದೆಡೆಗಳಲ್ಲೂ ಜನತೆ ನಿರಶನ ನಿರತರಾಗಿದ್ದಾರೆ.
ಇವನ್ನೂ ಓದಿ