ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಖಾಲಿ ಕಾಗದವನ್ನೇ ಯುಪಿಎ ಕಾನೂನು ಮಾಡುತ್ತಾ?: ಕೇಜ್ರಿವಾಲ್
(UPA | Anna Hazare | Corruption | Black Money | Baba Ramdev)
ಖಾಲಿ ಕಾಗದವನ್ನೇ ಯುಪಿಎ ಕಾನೂನು ಮಾಡುತ್ತಾ?: ಕೇಜ್ರಿವಾಲ್
ನವದೆಹಲಿ, ಬುಧವಾರ, 8 ಜೂನ್ 2011( 13:07 IST )
PTI
ನಿದ್ರಿಸುತ್ತಿದ್ದ ಅಮಾಯಕ ಸತ್ಯಾಗ್ರಹಿಗಳ ಮೇಲೆ ಮತ್ತು ನಿರಾಯುಧರಾಗಿ ಮಲಗಿದ್ದ ಹೆಂಗಸರು, ಮಕ್ಕಳ ಮೇಲೆ ಕೇಂದ್ರದ ಯುಪಿಎ ಸರಕಾರವು ಮಾಡಿದ ದೌರ್ಜನ್ಯವನ್ನು ಪ್ರತಿಭಟಿಸಿ ನಾಗರಿಕ ಸಮಾಜ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆರ್‌ಟಿಐ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಅರವಿಂದ ಕೇಜ್ರಿವಾಲ್ ಕೇಂದ್ರ ಸರಕಾರದ ವಂಚನೆಯನ್ನು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ, ಸತ್ಯಾಗ್ರಹಿಗಳಲ್ಲಿ ಆಕ್ರೋಶದ ಕಿಚ್ಚು ಹಚ್ಚಿದರು. ಲೋಕಪಾಲ ಮಸೂದೆಯಿಂದ ಪ್ರಧಾನಿ, ಸಂಸದರು, ನ್ಯಾಯಾಧೀಶರನ್ನೆಲ್ಲಾ ಹೊರಗಿಡಲು ಆಗ್ರಹಿಸುತ್ತಿರುವ ಸರಕಾರ, ಖಾಲಿ ಕಾಗದವನ್ನೇ ಶಾಸನವನ್ನಾಗಿ ಮಾಡಲು ಹೊರಟಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಸಂಪತ್ತು ಘೋಷಣೆ ಮಾಡಿದ್ದೇವೆ, ನೀವು ಮಾಡ್ತೀರಾ? ನಾವು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಲಾರಂಭಿಸಿದಾಗ, ನಮ್ಮನ್ನು ತುಳಿಯಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ನಾಗರಿಕ ಸಮಾಜ ಸದಸ್ಯರ ಸಂಪತ್ತು ಘೋಷಣೆಯಾಗಲಿ ಎಂದು ಕೂಗಾಡಿತು. ಈ ಮೂಲಕ ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಿತು. ಆದರೆ ನಾವು ಹೆದರದೆ ಕೇವಲ 24 ಗಂಟೆಗಳಲ್ಲಿ ಲೋಕಪಾಲ ಮಸೂದೆ ಕರಡು ಸಮಿತಿಯಲ್ಲಿರುವ ನಾಗರಿಕ ಸಮಾಜದ ಸದಸ್ಯರೆಲ್ಲರ ಆಸ್ತಿಪಾಸ್ತಿ, ಸಂಪತ್ತಿನ ವಿವರ ಪ್ರಕಟಿಸಿದೆವು ಎಂದ ಕೇಜ್ರಿವಾಲ್, ತಾಕತ್ತಿದ್ದರೆ ಎಲ್ಲ ಮಂತ್ರಿ ಮಹೋದಯರು, ಎಲ್ಲ ನೇತಾಗಳು ತಮ್ಮ ತಮ್ಮ ವೆಬ್‌ಸೈಟುಗಳಲ್ಲಿ ಆಸ್ತಿ ವಿವರ ಘೋಷಿಸಲಿ ಎಂದು ಸವಾಲು ಹಾಕಿದರು. ಅಲ್ಲದೆ ಬಿಜೆಪಿ, ಕಾಂಗ್ರೆಸ್, ಡಿಎಂಕೆ, ಬಿಎಸ್ಪಿ ಮುಂತಾದ ಎಲ್ಲ ಪಕ್ಷಗಳೂ ಕಳೆದ ವರ್ಷ ತಾವು ಎಲ್ಲೆಲ್ಲಿಂದ ಹಣ ಸಂಗ್ರಹ ಮಾಡಿದ್ದಾರೆ ಎಂಬುದನ್ನೂ ಪ್ರಕಟಿಸಲಿ ಎಂದು ಆಗ್ರಹಿಸಿದರು.
ರಾಜಕೀಯ ಪಕ್ಷಗಳ ರ‌್ಯಾಲಿಗೆ ಎಲ್ಲಿಂದ ಹಣ ಬಂತು, ಎಷ್ಟು ಖರ್ಚಾಯಿತು ಬಹಿರಂಗಪಡಿಸಲಿ ನೋಡೋಣ ರಾಜಘಾಟ್‌ನಲ್ಲಿ ಬುಧವಾರ ನಡೆಯುತ್ತಿದ್ದ ಸತ್ಯಾಗ್ರಹದಲ್ಲಿ ಉಪವಾಸ ನಿರತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ನಮ್ಮ ಪ್ರತಿಭಟನೆಗಳಿಗೆ, ಉಪವಾಸ ವ್ರತಕ್ಕೆ ಹಣ ಎಲ್ಲಿಂದ ಬಂತು ಅಂತ ಕೇಳಿದರು. 24 ಗಂಟೆಗಳೊಳಗೆ ಎಲ್ಲ ವಿವರಗಳನ್ನೂ ವೆಬ್‌ಸೈಟಿನಲ್ಲಿ ಬಹಿರಂಗಪಡಿಸಿದೆವು ಎಂದರಲ್ಲದೆ, ತಾಕತ್ತಿದ್ದರೆ ಎಲ್ಲ ರಾಜಕೀಯ ಪಕ್ಷಗಳೂ ಕಳೆದ ಐದು ವರ್ಷಗಳಲ್ಲಿ ತಾವು ಅಲ್ಲಲ್ಲಿ ನಡೆಸಿದ ಸಮಾವೇಶಗಳಿಗೆ ವ್ಯಯಿಸಿದ ಹಣ ಎಷ್ಟು, ಎಲ್ಲಿಂದ ಹಣ ಬಂತು ಎಂಬ ವಿವರಗಳೆಲ್ಲವನ್ನೂ ಪ್ರಕಟಿಸಲಿ ಎಂದು ಸವಾಲೊಡ್ಡಿದರು.
ಭ್ರಷ್ಟಾಚಾರ ಮಾಡುವವರು ವಂಚಕರು ಅಲ್ಲವೇ? ಅಣ್ಣಾ ಹಜಾರೆ ಅವರು ಬಾಬಾ ರಾಮದೇವ್‌ರನ್ನು ಭೇಟಿಯಾಗಿ, ಕೇಂದ್ರವು ನಮಗೆ ವಂಚನೆ ಮಾಡಿದೆ, ನಿಮಗೂ ಮಾಡಬಹುದು ಎಂದು ಎಚ್ಚರಿಸಿದಾಗ. ಅಣ್ಣಾ ಹಜಾರೆ ನಮ್ಮನ್ನು "ವಂಚಕರು" ಅಂತ ಕರೆದರೆಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಅಲವತ್ತುಕೊಂಡಿದ್ದರು. ಇದರಲ್ಲೇನು ತಪ್ಪಿದೆ? ನಾಗರಿಕರ ಹಣ ಕೊಳ್ಳೆ ಹೊಡೆದು ವಿದೇಶದಲ್ಲಿ ಇಡುವುದು, ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು, ಜನರ ಹಕ್ಕುಗಳನ್ನು ದಮನಿಸುವುದು ವಂಚನೆಯಲ್ಲವೇ ಎಂದು ಪ್ರಶ್ನಿಸಿದರು.
ನಮ್ಮನ್ನೇ ಷಡ್ಯಂತ್ರಕೋರರು ಎಂದಿತು ಕೇಂದ್ರ ಸರಕಾರ. ಆದರೆ, ಶಾಂತಿ ಭೂಷಣ್ ಮೇಲೆ ನಕಲಿ ವೀಡಿಯೊ ಕ್ಲಿಪಿಂಗ್ ಸೃಷ್ಟಿಸಿ ನಾಗರಿಕ ಸಮಾಜ ಸದಸ್ಯರ ವಿರುದ್ಧ ಷಡ್ಯಂತ್ರ ರೂಪಿಸಿದವರು ಯಾರು ಎಂದು ಕೇಜ್ರಿವಾಲ್ ಪ್ರಶ್ನಿಸಿದರು.
ನೀವು ಮಾಲೀಕರಲ್ಲ, ಜನರ ಸೇವಕರು ನಾವು ಜನರಿಂದ ಚುನಾಯಿಸಿ ಬಂದವರು, ನೀವೇನೂ ಚುನಾಯಿತರಾದವರಲ್ಲ ಎಂದು ಕಪಿಲ್ ಸಿಬಲ್ ದೂಷಿಸಿದರು. ಆದರೆ ಅಣ್ಣಾ ಕೇಳುತ್ತಿದ್ದಾರೆ, ನೀವು ನಮ್ಮಿಂದ ಚುನಾಯಿಸಿ ಹೋಗಿದ್ದರೆ, ನೀವು ಪ್ರಜೆಗಳ ಸೇವಕರು. ಮಾಲೀಕರಲ್ಲ. ನಮ್ಮ ಸೇವೆ ಮಾಡಬೇಕೇ ಹೊರತು, ಐದು ವರ್ಷ ತಮಗೆ ಬೇಕಾದಂತೆ ಕಾಲ ಕಳೆಯುವುದಕ್ಕಾಗಿ ಅಲ್ಲ ನಾವು ನಿಮ್ಮನ್ನು ಆರಿಸಿ ಕಳುಹಿಸಿದ್ದು. ಆದರೆ ನೀವು ನಮ್ಮ ಹಣ, ದೇಶದ ಹಣ ಲೂಟಿ ಮಾಡ್ತೀರಿ. ಪ್ರಜೆಗಳೇ ಪ್ರಭುಗಳು. ಯಾವುದೇ ನಿರ್ಣಯ ಕೈಗೊಳ್ಳುವ ಮೊದಲು ಪ್ರಜೆಗಳ ಅಭಿಪ್ರಾಯ ಕೇಳಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದರು.
ಒಡೆದ ಮನೆಯಾಗಿರುವುದು ಸಂಸತ್ತು ನಾಗರಿಕ ಸಮಾಜ ಒಡೆದ ಮನೆಯಾಗಿದೆ ಎಂದು ಅವರು ದೂಷಿಸಿದರು. ಆದರೆ ನಾಗರಿಕ ಸಮಾಜವೆಂದರೆ ಯಾರು? ಬರೇ ಐದಾರು ಮಂದಿಯಲ್ಲ. ಈ ದೇಶದ ನೂರಿಪ್ಪತ್ತು ಕೋಟಿ ಜನರೇ ನಾಗರಿಕ ಸಮಾಜದವರು. ಆದರೆ ನಿಮ್ಮ ಸಂಸತ್ತಿನಲ್ಲಿ ಈ ರೀತಿಯ ಒಗ್ಗಟ್ಟಿದೆಯೇ? ಯಾವತ್ತಾದರೂ ನೀವು ಒಗ್ಗಟ್ಟು ತೋರಿಸಿದ್ದೀರಾ? ಕೇವಲ ಒಂದು ವಿಷಯಕ್ಕೆ ಇಷ್ಟೊಂದು ಜನ ಸೇರಿದ್ದಾರೆ, ಒಗ್ಗಟ್ಟಾಗಿದ್ದಾರೆ. ಹೀಗಿರುವಾಗ ಒಡೆದ ಮನೆಯಾಗಿರುವುದು ನಿಮ್ಮ ಸಂಸತ್ತು ಎಂದರು.
ಖಾಲಿ ಕಾಗದವೇ ಶಾಸನವಾಗುತ್ತದೆಯೇ? ಲೋಕಪಾಲ ಮಸೂದೆ ಮಾಡುವ ಕುರಿತಾಗಿ ಕಪಿಲ್ ಸಿಬಲ್ ಮತ್ತಿತರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಅವರು, "ಪ್ರಧಾನಿ, ನ್ಯಾಯಾಧೀಶರು, ಸಂಸದರು ಭ್ರಷ್ಟಾಚಾರ ಮಾಡಿದರೆ, ಅವರ ವಿರುದ್ಧ ತನಿಖೆಯಾಗಬಾರದು ಎನ್ನುತ್ತಿದೆ ಸರಕಾರ. ಈ ಮಸೂದೆಯಿಂದ ಯಾರನ್ನೆಲ್ಲಾ ಹೊರಗಿಡಬೇಕು ನಾವು? ಎಷ್ಟೆಲ್ಲಾ ರಾಜೀ ಮಾಡಿಕೊಳ್ಳಬೇಕು?" ಎಂದು ಕೇಳಿದ ಅವರು, ನಾಗರಿಕ ಸಮಾಜದ ಸದಸ್ಯರಿಲ್ಲದೆಯೂ ನಾವು ಲೋಕಪಾಲ ಮಸೂದೆ ಸಿದ್ಧ ಮಾಡುತ್ತೇವೆ ಎನ್ನುತ್ತಾರೆ ಕಪಿಲ್ ಸಿಬಲ್. ರಾಜಕಾರಣಿಗಳೆಲ್ಲರನ್ನೂ ಮಸೂದೆಯ ವ್ಯಾಪ್ತಿಯಿಂದ ಹೊರಗಿಟ್ಟು, ಇವರೇನೂ ಖಾಲಿ ಕಾಗದವನ್ನು ತೋರಿಸಿ ಕಾಯ್ದೆ ಎನ್ನುತ್ತಾರೆಯೇ?
ಇಲ್ಲ ಸಲ್ಲದ ಟೀಕೆ ನಾವು ನಾಗರಿಕ ಸಮಾಜದ ಸದಸ್ಯರನ್ನು ಕಾಂಗ್ರೆಸ್ ಹಾಗೂ ಸರಕಾರದವರು "ಬಿಜೆಪಿಯವರು, ಆರೆಸ್ಸೆಸ್ ಜನ, ಕೋಮುವಾದಿಗಳು" ಎಂದೆಲ್ಲಾ ಕರೆದರು, ಅವರ ಈ ಆರೋಪಗಳು ಸಾಬೀತಾದ ದಿನ ಮೊದಲು ಹೊರ ಹೋಗುವವನು ನಾನೇ ಎಂದ ಕೇಜ್ರಿವಾಲ್, ಖಾಲಿ ಕಾಗದವನ್ನೇ ಕಾನೂನು ಮಾಡಲು ಹೊರಟವರು, ವಂಚನೆ ಮಾಡುತ್ತೇವೆ ಎಂದು ಹೇಳುತ್ತಾರೆ, ಆದರೆ ಅವರನ್ನು ವಂಚಕರು ಎಂದು ಕರೆಯಬಾರದೇಕೆ ಎಂದು ಪ್ರಶ್ನಿಸಿದರು.
ಇದು ವ್ಯವಸ್ಥೆಯ ಪರಿವರ್ತನೆಯ ಆಂದೋಲನ. ನಾವೆಂದಿಗೂ ನಿಮ್ಮ ಬಳಿ ಓಟು ಕೇಳಲು ಬರುವುದಿಲ್ಲ. ನಮ್ಮ ರಾಜಕಾರಣವು ಚುನಾವಣಾ ರಾಜಕೀಯವಲ್ಲ, ಭ್ರಷ್ಟಾಚಾರದ ರಾಜಕೀಯವಲ್ಲ ಅಥವಾ ಅಧಿಕಾರದ ರಾಜಕಾರಣ ಅಲ್ಲ, ನಮ್ಮದು ಜನತೆಯ ರಾಜಕಾರಣ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.