ಆ.16ರಿಂದ ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮ: ಯುಪಿಎಗೆ ಅಣ್ಣಾ
ನವದೆಹಲಿ, ಬುಧವಾರ, 8 ಜೂನ್ 2011( 15:19 IST )
ಸರಕಾರವೇನಾದರೂ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಲೋಕಪಾಲ ಕಾಯಿದೆಯನ್ನು ಆಗಸ್ಟ್ 15ರೊಳಗೆ ಜಾರಿಗೊಳಿಸಲು ವಿಫಲವಾದರೆ ಮತ್ತು ಲೋಕಪಾಲ ಮಸೂದೆಗೆ ಅಡ್ಡಿಯುಂಟು ಮಾಡಿದರೆ, ಆಗಸ್ಟ್ 16ರಿಂದ ಜಂತರ್ ಮಂತರ್‌ನಲ್ಲಿ ಪ್ರಾಣ ಹೋಗುವವರೆಗೂ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿರುವ ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆ, ದೇಶದ ಜನರು ಬೆಂಬಲಿಸುವಂತೆ ಕರೆ ನೀಡಿದರು.
ನಿದ್ರಿಸುತ್ತಿದ್ದ ಅಮಾಯಕ ಸತ್ಯಾಗ್ರಹಿಗಳ ಮೇಲೆ ಮತ್ತು ನಿರಾಯುಧರಾಗಿ ಮಲಗಿದ್ದ ಹೆಂಗಸರು, ವೃದ್ಧರು, ಮಕ್ಕಳ ಮೇಲೆ ಕೇಂದ್ರದ ಯುಪಿಎ ಸರಕಾರವು ಮಾಡಿದ ದೌರ್ಜನ್ಯವನ್ನು, ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಪ್ರತಿಭಟಿಸಿ ನಾಗರಿಕ ಸಮಾಜವು ಬುಧವಾರ ಗಾಂಧಿ ಸಮಾಧಿ ರಾಜ್‌ಘಾಟ್ ಬಳಿ ನಡೆಸುತ್ತಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಸರಕಾರವು ಲೋಕಪಾಲ ಮಸೂದೆ ಕರಡು ಸಿದ್ಧಪಡಿಸಲು ಪ್ರತಿಯೊಂದು ಹಂತದಲ್ಲಿಯೂ ಅಡೆತಡೆಗಳನ್ನು ಇರಿಸುತ್ತಿದೆ ಮತ್ತು ಜಂಟಿ ಸಮಿತಿಯಲ್ಲಿರುವ ನಾಗರಿಕ ಸಮಾಜದ ಸದಸ್ಯರಾದ ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್ ಹಾಗೂ ಸಂತೋಷ ಹೆಗ್ಡೆ ಮುಂತಾದವರ ವಿರುದ್ಧ ಅಪಪ್ರಚಾರ ಮಾಡುತ್ತಾ, ಅಪಖ್ಯಾತಿ ತರಲು "ರಹಸ್ಯವಾಗಿಯೇ" ಆಂದೋಲನ ನಡೆಸುತ್ತಿದೆ ಎಂದು ಹಜಾರೆ ಆರೋಪಿಸಿದರು.
ಸರಕಾರವೇನಾದರೂ ತನ್ನ ಮಾತಿನಿಂದ ಹಿಂದೆ ಸರಿದರೆ ಏ.5ರಂದು ಆರಂಭವಾಗಿರುವ ಈ ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮವು ದೇಶದ ಮೂಲೆ ಮೂಲೆಗೆ ತಲುಪಲಿದೆ ಎಂದು ಗಾಂಧಿ ಸಮಾಧಿಯ ಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ ಎಂದು ಘೋಷಿಸುವ ಮೂಲಕ ಕೇಂದ್ರ ಸರಕಾರದ ಮೇಲೆ ನೇರ ವಾಗ್ದಾಳಿ ನಡೆಸಿದರು.
ಕೆಲವೇ ಪ್ರಜೆಗಳು ಪ್ರಭುಗಳಾಗಿ ಮೆರೆಯುತ್ತಿದ್ದಾರೆ ಸರಕಾರಕ್ಕೆ ಹೇಳುತ್ತಾ ಇದ್ದೇನೆ. ನಾವು ಬೇರೆಯಲ್ಲ, ನೀವು ಬೇರೆಯಲ್ಲ. ನಾವೆಲ್ಲರೂ ಒಂದೇ. ನೀವು ಪ್ರಜೆಗಳೇ ಹೊರತು ಪ್ರಭುಗಳು ಎಂಬ ದರ್ಪವನ್ನು ತಲೆಯಿಂದ ಕಿತ್ತೆಸೆಯಿರಿ. ನಾವೆಲ್ಲರೂ ಒಂದೇ ಎಂದು ಹೇಳಿದ ಅಣ್ಣಾ ಹಜಾರೆ, ನಾವೆಲ್ಲರೂ ಶಾಲೆಗಳಲ್ಲಿ ಪ್ರಜಾಪ್ರಭುತ್ವ ದಿನವನ್ನು ಆಚರಿಸಿದ್ದೇವೆ. ಇದರಲ್ಲೇನೂ ಅರ್ಥವೇ ಇಲ್ಲ. ಪ್ರಭುತ್ವ ಇರುವುದು ದಿಲ್ಲಿಯಲ್ಲಿ. ಎಲ್ಲಿಯವರೆಗೆ ಪ್ರಜೆಗಳ ಕೈಗೆ ಪ್ರಭುತ್ವ ಬರುವುದಿಲ್ಲವೋ ಅಲ್ಲಿಯವರೆಗೆ ಪ್ರಜಾ ಪ್ರಭುತ್ವ ದಿನದ ಆಚರಣೆಯು ಅರ್ಥಹೀನ ಎಂದು ನುಡಿದರು.
ಅಮಾಯಕರ ಮೇಲೆ ದಾಳಿಗೆ ಖಂಡನೆ ಪ್ರಜೆಗಳು ಈಗ ನಿದ್ರಿಸುತ್ತಿದ್ದಾರೆ. ಹೀಗಾಗಿ ಕೆಲವು ಪ್ರಜೆಗಳು ತಾವಾಗಿ ಪ್ರಭುಗಳಾಗುತ್ತಾ ಮೆರೆದಾಡುತ್ತಿದ್ದಾರೆ. ಪ್ರಜೆಗಳು ಪ್ರಜೆಗಳಾಗಿಯೇ ಉಳಿದಿದ್ದಿದಾರೆ. ಹೀಗಾಗಿ ಅವರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದ ಅಣ್ಣಾ, ಬಾಬಾ ರಾಮದೇವ್ ನೇತೃತ್ವದಲ್ಲಿ ನಡೆದ ಶಾಂತಿಯುತ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಮಹಿಳೆಯರು, ವೃದ್ಧರು, ಮಕ್ಕಳ ಮೇಲೆ ನಿರ್ದಾಕ್ಷಿಣ್ಯವಾಗಿ ಲಾಠಿ ಬೀಸಲಾಯಿತು. ಹಾಗಿದ್ದರೆ ನಿಮ್ಮ ಆಡಳಿತಕ್ಕೂ ಬ್ರಿಟಿಷ್ ಆಡಳಿತಕ್ಕೂ ಏನು ವ್ಯತ್ಯಾಸವಿದೆ ಎಂದು ಪ್ರಶ್ನಿಸಿದರು.
ಶನಿವಾರ ರಾತ್ರಿ ಮಲಗಿದ್ದ ಸತ್ಯಾಗ್ರಹಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ದೌರ್ಜನ್ಯ ನಡೆಸಿರುವ ಸರಕಾರದ ಕ್ರಮವು ಮಾನವೀಯತೆಗೇ ಕಪ್ಪು ಚುಕ್ಕೆ ಮತ್ತು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನ ಎಂದು ಬಣ್ಣಿಸಿದರು.
ಬ್ಯಾಂಕ್ ಬ್ಯಾಲೆನ್ಸ್ ಇಲ್ಲ ಸರಕಾರ ಕೋಟ್ಯಂತರ ರೂಪಾಯಿ ಅಕ್ರಮದ ಬಗೆಗೆ ನನ್ನ ಮೇಲೂ ಆರೋಪ ಮಾಡುತ್ತಿದೆ. ಆದರೆ ನನಗೆ ಎಲ್ಲೂ ಕೂಡ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ, ಒಂದು ಮಂದಿರದಲ್ಲಿ ಮಲಗುತ್ತೇನೆ, ಒಂದು ಚಾಪೆ, ತಿನ್ನಲು ಪ್ಲೇಟು ಮಾತ್ರ ಇದೆ. 35 ವರ್ಷಗಳಿಂದ ಮನೆ ಕಡೆಗೆ ಮುಖ ಹಾಕಿಲ್ಲ. ನನಗೆ ಮೂವರು ಸಹೋದರರಿದ್ದಾರೆ, ಆದರೆ ಅವರ ಮಕ್ಕಳ ಹೆಸರು ಕೇಳಿದರೆ ನನಗೆ ಗೊತ್ತಿಲ್ಲ ಎಂದು ಹಜಾರೆ ನುಡಿದರು.
ಶ್ರೀಮಂತರಿಗೆ ನಿದ್ದೆ ಮಾತ್ರೆ ಬೇಕು ಎಷ್ಟೋ ಮಂದಿ ದೇಶದ ಹಣವನ್ನು ಕೊಳ್ಳೆ ಹೊಡೆದು ಸಂಪತ್ತು ಮಾಡಿಕೊಂಡಿದ್ದಾರೆ. ಅಕ್ರಮ ಸಂಪತ್ತಿನಿಂದ ಅವರಿಗೇನಾದರೂ ನಿದ್ದೆ ಬರುತ್ತಿದೆಯೇ? ಮನೆಗೆ ಹೋಗಿ ಮಲಗಿದರೆ ನಿದ್ದೆ ಮಾಡಲು ನಿದ್ದೆ ಮಾತ್ರೆಯೇ ಬೇಕು ಎಂದು ಅಕ್ರಮ ಸಂಪತ್ತಿನ ಪರಿಣಾಮದ ಬಗ್ಗೆ ಹೇಳಿದ ಅಣ್ಣಾ, ಶುದ್ಧ ಆಚಾರ, ಶುದ್ಧ ವಿಚಾರ, ನಿಷ್ಕಳಂಕ ಜೀವನ ಇದ್ದರೆ ಯಾವುದಕ್ಕೂ ಹೆದರಬೇಕಾಗಿಲ್ಲ. ಅಂಥವರು ಮಾತ್ರವೇ ಈ ರೀತಿಯ ಅಹಿಂಸಾತ್ಮಕ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.