ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಡ್ಯಾನ್ಸರ್ ಎಂದ ಕಾಂಗ್ರೆಸಿಗರು ಗುಲಾಮರು: ಸುಷ್ಮಾ ಕೆಂಡ
(Sushma Swaraj | Dance | Rajghat | Baba Ramdev | Black Money)
ಡ್ಯಾನ್ಸರ್ ಎಂದ ಕಾಂಗ್ರೆಸಿಗರು ಗುಲಾಮರು: ಸುಷ್ಮಾ ಕೆಂಡ
ನವದೆಹಲಿ, ಬುಧವಾರ, 8 ಜೂನ್ 2011( 15:30 IST )
ನಾವು ದೇಶಭಕ್ತರು, ಕೊನೆಯುಸಿರಿರುವವರೆಗೂ ದೇಶಭಕ್ತಿ ಗೀತೆ ಹಾಡುತ್ತೇವೆ, ಅದನ್ನು ಸಂಭ್ರಮಿಸುತ್ತೇವೆ ಮತ್ತು ಕುಣಿಯುತ್ತೇವೆ. ಇದು ಯಾರಿಗೆ ಇಷ್ಟವಾಗುವುದಿಲ್ಲವೋ, ಅವರು ಗುಲಾಮರ ಮನಸ್ಥಿತಿಯಿಂದ ನರಳುತ್ತಿದ್ದಾರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಆಕ್ರೋಶದಿಂದ ಘರ್ಜಿಸಿದ್ದು, ತಮ್ಮನ್ನು ಡ್ಯಾನ್ಸರ್ ಎಂದು ಕರೆದ ದಿಗ್ವಿಜಯ್ ಸಿಂಗ್ ವಿರುದ್ಧ ಕೆಂಡ ಕಾರಿದ್ದಾರೆ.
ಸತ್ಯಾಗ್ರಹ ನಡೆಸಿ ಮಲಗಿದ್ದ ಅಮಾಯಕರ ಮೇಲೆ ರಾತೋರಾತ್ರಿ ಪೊಲೀಸರನ್ನು ಛೂ ಬಿಟ್ಟು ಬಾಬಾ ರಾಮದೇವ್ ಸಹಿತ ಎಲ್ಲ ಬೆಂಬಲಿಗರನ್ನು ದೆಹಲಿಯ ರಾಮಲೀಲಾ ಮೈದಾನದಿಂದ ಹೊರಗೋಡಿಸಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ನಡೆಸಿದ ಇಪ್ಪತ್ತನಾಲ್ಕು ಗಂಟೆಗಳ ಪ್ರತಿಭಟನೆ ವೇಳೆ, "ಯೇ ದೇಶ್ ಹೆ ವೀರ್ ಜವಾನೋಂ ಕಾ" ಎಂಬ ಹಾಡಿಗೆ ಸುಷ್ಮಾ ಸ್ವರಾಜ್ ಹೆಜ್ಜೆ ಹಾಕಿರುವುದಕ್ಕೆ ಕಾಂಗ್ರೆಸ್ ಪಕ್ಷವು, "ಸುಷ್ಮಾರಿಂದಾಗಿ ಗಾಂಧೀಜಿ ಸಮಾಧಿ ಇರುವ ರಾಜ್‌ಘಾಟ್ ಅಪವಿತ್ರವಾಗಿದೆ, ಆಕೆ ಪ್ರತಿಪಕ್ಷ ನಾಯಕಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿರುವುದಕ್ಕೆ ಮಂಗಳವಾರ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಇದಲ್ಲದೆ, ದಿಗ್ವಿಜಯ್ ಸಿಂಗ್, ಜನಾರ್ದನ ದ್ವಿವೇದಿ ಪ್ರತಿಕ್ರಿಯೆಯ ಬಳಿಕ ಬಿ.ಕೆ.ಹರಿಪ್ರಸಾದ್ ಕೂಡ, "ಗಾಂಧಿ ಸಮಾಧಿ ಬಳಿ ಸುಷ್ಮಾ ನೃತ್ಯ ಮಾಡಿದ್ದರಿಂದ ಗಾಂಧೀಜಿಗೆ ಮಾತ್ರವೇ ಅಲ್ಲ, ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಇಡೀ ದೇಶದ ಜನತೆಗೆ ಅವಮಾನ ಮಾಡಿದ್ದಾರೆ" ಎಂದಿದ್ದರಲ್ಲದೆ, ಸುಷ್ಮಾ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು.
ಇದರಿಂದ ತೀವ್ರವಾಗಿ ಕೆರಳಿರುವ ಸುಷ್ಮಾ, ಕಾಂಗ್ರೆಸಿಗರು ಗುಲಾಮಗಿರಿ ಮನಸ್ಥಿತಿಯಿಂದ ಬಳಲುತ್ತಿದ್ದಾರೆ. ಈ ಹಿಂದೆ ವಂದೇ ಮಾತರಂ ಹಾಡನ್ನು ವಿರೋಧಿಸುತ್ತಿದ್ದರು. ಈಗ ಅವರಿಗೆ ರಾಷ್ಟ್ಟಭಕ್ತಿ ಗೀತೆಗಳು ಕೂಡ ಪಥ್ಯವಾಗುತ್ತಿಲ್ಲ ಎಂದು ಕಿಡಿ ಕಾರಿದ್ದು, ದೇಶ ಭಕ್ತಿ ಗೀತೆ ಹಾಡಿ ಕುಣಿಯುವುದು ಅಪರಾಧವೇ ಎಂದು ಪ್ರಶ್ನಿಸಿದ್ದಾರಲ್ಲದೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ, ಅವರ ಪಕ್ಷದ ಕಾರ್ಯಕರ್ತರು ಯಾವೆಲ್ಲಾ ಭಾಷೆಗಳನ್ನು ಪ್ರಯೋಗಿಸುತ್ತಿದ್ದಾರೆ ಎಂಬುದು ಅರಿವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರ ಹಾಗೂ ಕಾಳಧನ ಹಾಗೂ ರಾಮಲೀಲಾ ಮೈದಾನದಲ್ಲಿ ತಾನು ನಡೆಸಿದ ಅತ್ಯಾಚಾರ, ದೌರ್ಜನ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿಯೇ ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡುತ್ತಿದೆ ಎಂದಿರುವ ಸುಷ್ಮಾ, ಕೊನೆಯುಸಿರಿರುವವರೆಗೂ ನಾವು ದೇಶಭಕ್ತಿ ಗೀತೆ ಹಾಡುತ್ತೇವೆ, ಕುಣಿಯುತ್ತೇವೆ ಎಂದು ಸುಷ್ಮಾ ಹೇಳಿದ್ದಾರೆ.
ಪಕ್ಷವು ನಡೆಸಿದ 24 ಗಂಟೆಗಳ ಈ ಸತ್ಯಾಗ್ರಹದ ಬಗೆಗೆ ಬೇರಾವುದೇ ವೀಡಿಯೋ ತುಣುಕುಗಳನ್ನು ತೋರಿಸದೆ, ತಾನು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದ್ದನ್ನು ಮಾತ್ರವೇ ಪದೇ ಪದೇ ತೋರಿಸಿರುವ ರಾಷ್ಟ್ರೀಯ ಟಿವಿ ಚಾನೆಲ್‌ಗಳ ಕ್ರಮಕ್ಕೆ ಸುಷ್ಮಾ ಆಘಾತ ವ್ಯಕ್ತಪಡಿಸಿದ್ದಾರೆ.