ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಾರಿಗೂ ಏಟಾಗಿಲ್ಲ ಅಂತ ಸುಳ್ಳು ಹೇಳುವ ಸರ್ಕಾರ: ಸುಷ್ಮಾ (Ramlila Maidan | Baba Ramdev | Fast | Sushma Swaraj)
ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಾ, ವಿದೇಶದಲ್ಲಿ ಗುಡ್ಡೆ ಹಾಕಿರುವ ಕಾಳಧನ ವಾಪಸ್ ತರಿಸಬೇಕು ಎಂದು ಒತ್ತಾಯಿಸಿ ಶಾಂತಿಯುತ ನಿರಶನ ಸತ್ಯಾಗ್ರಹ ಮಾಡುತ್ತಿದ್ದ ಯೋಗ ಗುರು ಬಾಬಾ ರಾಮದೇವ್ ಮತ್ತು ಇತರ ಸತ್ಯಾಗ್ರಹಿಗಳ ಮೇಲೆ ಪೊಲೀಸ್ ಬಲ ಪ್ರಯೋಗಿಸಿ, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರ ಬಗ್ಗೆ ಒಂದಿನಿತೂ ಕಾಳಜಿ ತೋರದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮೇಲೆ ನೇರ ವಾಕ್ಪ್ರಹಾರ ನಡೆಸಿದ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, 'ಯಾರಿಗೂ ಗಾಯಗಳಾಗಿಲ್ಲ' ಎಂದು ಅವರ ಸರಕಾರದ ಜವಾಬ್ದಾರಿಯುತ ಮಂತ್ರಿಯೊಬ್ಬರು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಬಾಬಾ ರಾಮದೇವ್ ತಮ್ಮ ಬೆಂಬಲಿಗರೊಂದಿಗೆ ಉಪವಾಸ ಮುಂದುವರಿಸಿರುವ ಹರಿದ್ವಾರಕ್ಕೆ ತೆರಳಿ ಅಲ್ಲಿದ್ದ ಬಾಬಾ ಸಹಿತ ಇತರ ಗಾಯಾಳುಗಳು, ಸತ್ಯಾಗ್ರಹಿಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸುಷ್ಮಾ ಮಾತನಾಡಿ, ಇಡೀ ದೇಶವೇ ಬಾಬಾ ರಾಮದೇವ್ ಮತ್ತು ಇತರ ಸತ್ಯಾಗ್ರಹಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರೆ, ಪ್ರಧಾನಿ, ಸೋನಿಯಾ ಮೌನವಾಗಿರುವುದು ತೀರಾ ಆಘಾತಕಾರಿ ಎಂದರು.

ಮಾತುಕತೆಗೆ 4 ಮಂತ್ರಿಗಳು, ಹೊಡೆಸಲು 5 ಸಾವಿರ ಪೊಲೀಸರು
ಯುಪಿಎ ಸರಕಾರದ ನೀತಿಯ ಬಗ್ಗೆ ಕಟಕಿಯಾಡಿದ ಸುಷ್ಮಾ, ಬಾಬಾ ಅವರ ಉಪವಾಸ ಸತ್ಯಾಗ್ರಹಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿದಾಗ, ಉಪವಾಸ ಮಾಡದಂತೆ ಅವರ ಮನವೊಲಿಸುವ ನಿಟ್ಟಿನಲ್ಲಿ ತಮ್ಮ ಸಂಪುಟದ ನಾಲ್ಕು ಮಂತ್ರಿಗಳನ್ನು ಕಳುಹಿಸುವ ಸರಕಾರ, ಅವರು ತಮ್ಮ ದಾರಿಗೆ ಬರುತ್ತಿಲ್ಲ ಎಂದಾದಾಗ ಅವರೆಲ್ಲರಿಗೂ ಥಳಿಸಲು 5 ಸಾವಿರ ಪೊಲೀಸರನ್ನು ಕಳುಹಿಸುತ್ತದೆ ಎಂದರು.

ಈ ಸರಕಾರಕ್ಕೆ ಜನ ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಯಾರಿಗೂ ಗಾಯಗಳಾಗಿಲ್ಲ ಎಂದು ಇದೇ ಸರಕಾರ ಪದೇ ಪದೇ ಹೇಳಿಕೆ ನೀಡುತ್ತಿದೆ. ಬಾಬಾ ರಾಮದೇವ್ ಅವರು ಉಪವಾಸ ಮಾಡಿದ್ದರಿಂದಾಗಿ ನಾಲ್ಕೈದು ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರ ಶರೀರ ಜರ್ಝರಿತವಾದರೂ, ಮನೋಬಲ ಮತ್ತಷ್ಟು ಹೆಚ್ಚಿದೆ. ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರಾಜ ಬಾಲಾ ಮತ್ತಿತರರ ಆರೋಗ್ಯ ವಿಚಾರಿಸಿ ಬಂದಿದ್ದೇನೆ. ಹೀಗಿರುವಾಗ ಆಡಳಿತಾರೂಢರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸದಿರುವುದು ಕಳವಳಕಾರಿ ಅಂಶ ಎಂದರು.

ಏನಿದ್ದರೂ ಆರೆಸ್ಸೆಸ್ ಮೇಲೆ ದೂರು ಹಾಕ್ತಾರೆ
ಬಾಬಾ ಹೋರಾಟದ ಹಿಂದೆ ಆರೆಸ್ಸೆಸ್ ಇದೆ ಎಂಬ ವರದಿಗಳ ಕುರಿತು ಪ್ರಶ್ನಿಸಿದಾಗ, ಏನೇ ಆದರೂ ಎಲ್ಲದಕ್ಕೂ ಆರೆಸ್ಸೆಸ್ ಹೊಣೆ ಎಂದು ದೂಷಿಸುವುದು ಕಾಂಗ್ರೆಸ್‌ನ ಪರಂಪರಾಗತ ಚಾಳಿ. ಹಿಂದೆ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನೇ ಸಿಐಎ ಏಜೆಂಟ್ ಎಂದು ದೂಷಿಸಿದವರು ಅವರು. ಮೊನ್ನೆ ಕಾಂಗ್ರೆಸಿಗ ಜನಾರ್ದನ ದ್ವಿವೇದಿಗೆ ಶೂ ತೋರಿಸಿದವನನ್ನೂ ಆರೆಸ್ಸೆಸ್‌ಗೆ ಸೇರಿದವರು ಎಂದು ಆರೋಪಿಸಿಬಿಟ್ಟರು. ಈಗ ಬಾಯಿ ಬಿಡುತ್ತಿಲ್ಲ. ಸತ್ಯಾಂಶವೇನೆಂದು ಜನರಿಗೆ ಗೊತ್ತಿದೆ. ಕಾಂಗ್ರೆಸ್‌ಗೆ ಎಲ್ಲೆಲ್ಲೂ ಆರೆಸ್ಸೆಸ್ಸೇ ಕಾಣಿಸುತ್ತಿದೆ ಎಂದು ಸುಷ್ಮಾ ಚುಚ್ಚಿದರು.

ಬಾಬಾ ಆರೋಗ್ಯ ಕಳವಳಕಾರಿ
ಈ ನಡುವೆ, ಐದು ದಿನಗಳಿಂದ ಉಪವಾಸ ನಡೆಸುತ್ತಿರುವ ಬಾಬಾ ರಾಮದೇವ್ ಅವರ ಆರೋಗ್ಯದಲ್ಲಿ ಕುಸಿತವಾಗಿದ್ದು, ಅವರು ಸಹಜ ಸ್ಥಿತಿಗೆ ಮರಳಬೇಕಿದ್ದರೆ ಉಪವಾಸ ಮುರಿಯಲೇಬೇಕು ಎಂದು ವೈದ್ಯರು ಹೇಳಿದ್ದಾರೆ.

ದ್ರವಾಹಾರ ಸೇವಿಸುವಂತೆಯೂ, ತಕ್ಷಣವೇ ಉಪವಾಸ ಕೈಬಿಡುವಂತೆಯೂ ವೈದ್ಯರು ಬಾಬಾ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅವರ ಆರೋಗ್ಯ ಹದಗೆಡುತ್ತಿದೆ, ತೂಕವೂ ಇಳಿದಿದೆ ಮತ್ತು ಡೀಹೈಡ್ರೇಶನ್ ಕಾಡುತ್ತಿದೆ ಎಂದು ಹರಿದ್ವಾರದ ಮುಖ್ಯ ವೈದ್ಯಾಧಿಕಾರಿ ಡಾ.ಯೋಗೇಶ್ ಶರ್ಮಾ ಮಾಧ್ಯಮಗಳಿಗೆ ಹೇಳಿದ್ದಾರೆ. ಹಾಲು ಮತ್ತು ಹಣ್ಣಿನ ರಸ ಮುಂತಾದ ದ್ರವಾಹಾರ ಸೇವಿಸುವಂತೆ ನಾವು ಅವರಿಗೆ ಮನವಿ ಮಾಡಿದ್ದೇವೆ. ಅವರು ಉಪವಾಸ ಕೈಬಿಟ್ಟರೆ ಆರೋಗ್ಯ ಚೇತರಿಸಿಕೊಂಡೀತು ಎಂದು ಹೇಳಿದ್ದಾರೆ.
ಇವನ್ನೂ ಓದಿ