ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಆತ್ಮರಕ್ಷಣೆಗಾಗಿ ಮತ್ತು ಪೊಲೀಸರಿಂದ ನಡೆಯುವ ಯಾವುದೇ ದೌರ್ಜನ್ಯವನ್ನು ತಡೆಯಲು 11 ಸಾವಿರ ಮಂದಿ ಯುವ ಪುರುಷ-ಮಹಿಳೆಯರನ್ನು ಶಸ್ತ್ರ ಮತ್ತು ಶಾಸ್ತ್ರದಲ್ಲಿ ಪಾರಂಗತರನ್ನಾಗಿಸಿ ಅವರ ಒಂದು ಪಡೆ ರಚಿಸಲಾಗುತ್ತದೆ ಎಂಬ ಯೋಗ ಗುರು ಬಾಬಾ ರಾಮದೇವ್ ಅವರ ಹೇಳಿಕೆಗೆ ಸರಕಾರ ತಿರುಗಿಬಿದ್ದಿದೆ.
ರಾಮದೇವ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪಿ.ಚಿದಂಬರಂ, ಇದು ಬಾಬಾ ರಾಮದೇವ್ ಅವರ ನಿಜ ಬಣ್ಣ ಬಯಲು ಮಾಡಿದಂತಾಗಿದೆ. "ನೋಡೋಣ, ಅವರು ಪಡೆ ರಚಿಸಲಿ, ನೆಲದ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ" ಎಂದು ಹೇಳಿದ್ದಾರೆ.
ಈ ನಡುವೆ, ಪ್ರಧಾನ ಮಂತ್ರಿ ಕಚೇರಿಯ ಸಹಾಯಕ ಸಚಿವ ವಿ.ನಾರಾಯಣಸ್ವಾಮಿ ಅವರು ಪ್ರತಿಕ್ರಿಯೆ ನೀಡಿ, "ರಾಮದೇವ್ ಹೇಳಿಕೆ ಬಗ್ಗೆ ಸರಕಾರದ ಗಮನಕ್ಕೆ ತರುತ್ತೇವೆ. ಇದು ರಾಷ್ಟ್ರ-ದ್ರೋಹಿ ಹೇಳಿಕೆ. ಇದರ ಬಗ್ಗೆ ಕ್ರಮ ಕೈಗೊಳ್ಳಲೇಬೇಕು" ಎಂದಿದ್ದಾರೆ.
ಬುಧವಾರ ಬೆಳಿಗ್ಗೆ ಬಾಬಾ ರಾಮದೇವ್ ಅವರು ಈ ಹೇಳಿಕೆ ನೀಡಿದ್ದರು. ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ತಡೆಯಲು ಬರುವವರಿಗೆ ತಕ್ಕ ಶಾಸ್ತಿ ಮಾಡಲು ಪ್ರತಿಯೊಂದು ಜಿಲ್ಲೆಯಿಂದ ತಲಾ 20 ಮಂದಿ ಯುವಕರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮುಂದೆ ಬರುತ್ತಾರೆ. ಅವರು ನಿಷ್ಠೆಯಿಂದ ಕೆಲಸ ಮಾಡಬೇಕು ಮತ್ತು ಪ್ರಾಣತ್ಯಾಗಕ್ಕೂ ಸಿದ್ಧರಾಗಿರಬೇಕು. ಅವರಿಗೆ ಶಸ್ತ್ರ ಮತ್ತು ಶಾಸ್ತ್ರದ ತರಬೇತಿ ನೀಡಲಾಗುತ್ತದೆ. ಮುಂದಿನ ಬಾರಿ ರಾಮಲೀಲಾ ಮೈದಾನದಲ್ಲಿ ನಡೆಯುವ ಯಾವುದೇ ಹೋರಾಟದಲ್ಲಿ ನಾವು ಸೋಲನ್ನಪ್ಪಬಾರದು ಎಂದಿದ್ದರು ಬಾಬಾ.
ಬಾಬಾ ಅವರು ನೀಡಿದ ಹೇಳಿಕೆಯು ನಮ್ಮ ಸಂವಿಧಾನದ ವಿರುದ್ಧ ಮತ್ತು ಚುನಾಯಿತ ಸರಕಾರದ ವಿರುದ್ಧ ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಕಿಡಿ ಕಾರಿದ್ದು, ಇದು ಕೇಂದ್ರದ ವಿರುದ್ಧ ಸಶಸ್ತ್ರ ದಂಗೆಯ ಪ್ರಾರಂಭದ ಯೋಚನೆಯೇ ಎಂದು ಪ್ರಶ್ನಿಸಿದ್ದಾರೆ.