ಭ್ರಷ್ಟಾಚಾರದ ವಿರುದ್ಧ ಕೇಂದ್ರ ಸರಕಾರದ ವಿರುದ್ಧ ತೊಡೆ ತಟ್ಟಿರುವ ಬಾಬಾ ರಾಮದೇವ್ ಅವರ ಆಸ್ತಿ ತನಿಖೆಯಾಗಬೇಕು ಎಂದೆಲ್ಲಾ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಮತ್ತಿತರ ಮುಖಂಡರು ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ, ಇಂದು ಸಂಜೆ ಆಸ್ತಿಯ ಪೂರ್ಣ ವಿವರ ಘೋಷಿಸಿರುವುದಾಗಿ ಯೋಗ ಗುರು ಪ್ರಕಟಿಸಿದ್ದಾರೆ.
ಹರಿದ್ವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಮ್ಮ ವೆಬ್‌ಸೈಟಿನಲ್ಲಿ ಪತಂಜಲಿ ಯೋಗಪೀಠ ಮತ್ತಿತರ ಎಲ್ಲ ಸಂಸ್ಥೆಗಳ ಹಣಕಾಸು ವಿವರಗಳನ್ನು ಬಿಚ್ಚಿಡುತ್ತೇನೆ ಎಂದು ಹೇಳಿದರು. ಅಕ್ರಮ ಆಸ್ತಿ ಸಂಪಾದಿಸಿದವರೇ ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವವರಿಗಾಗಿ ಇದನ್ನು ಘೋಷಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಮತ್ತು ರಾಜಕಾರಣಿಗಳು ವಿದೇಶದಲ್ಲಿ ಕೂಡಿಟ್ಟಿರುವ ಕಾಳಧನವನ್ನು ದೇಶಕ್ಕೆ ತಂದು ಇಲ್ಲಿನ ಜನ ಕಲ್ಯಾಣ ಕಾರ್ಯಗಳಿಗೆ ಉಪಯೋಗಿಸಬೇಕೆಂದು ಒತ್ತಾಯಿಸಿ ಕಳೆದ ಶನಿವಾರ ಅವರು ಪ್ರಾರಂಭಿಸಿದ್ದ ಉಪವಾಸ ಸತ್ಯಾಗ್ರಹವು ಗುರುವಾರ ಆರನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಶನಿವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಮಾಡಿ ಮಲಗಿ ನಿದ್ರಿಸಿದ್ದ ಅವರನ್ನು ಹಾಗೂ ಅಮಾಯಕ ಸತ್ಯಾಗ್ರಹಿಗಳನ್ನು ಮಧ್ಯರಾತ್ರಿ ಕೇಂದ್ರ ಸರಕಾರವು ಅಲ್ಲಿಂದ ಓಡಿಸಿ, ಸತ್ಯಾಗ್ರಹವನ್ನು ದಮನಿಸಿತ್ತು.